International Yoga Day 2026: ಯೋಗಾಭ್ಯಾಸ ಮಾಡಲು ಸರಿಯಾದ ಸಮಯ ಯಾವುದು? ಇದರ ಪ್ರಯೋಜನಗಳೇನು?

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಧಿಸುವ ಪ್ರಾಚೀನ ಭಾರತೀಯ ವಿಜ್ಞಾನವಾಗಿದೆ. ಇಂದು, ಯೋಗವು ವಿಶ್ವಾದ್ಯಂತ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಲಕ್ಷಾಂತರ ಜನರು ಅದನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಯೋಗದ ಈ ಮಹತ್ವವನ್ನು ಸಾರಲು ಪ್ರತಿವರ್ಷ ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗ ದಿನಾಚರಣೆಗೆ ಈ ದಿನವನ್ನೇ ಏಕೆ ಆಯ್ಕೆ ಮಾಡಲಾಯಿತು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿ.

International Yoga Day 2026: ಯೋಗಾಭ್ಯಾಸ ಮಾಡಲು ಸರಿಯಾದ ಸಮಯ ಯಾವುದು? ಇದರ ಪ್ರಯೋಜನಗಳೇನು?
ಅಂತಾರಾಷ್ಟ್ರೀಯ ಯೋಗ ದಿನ
Image Credit source: Pinterest

Updated on: Jun 21, 2026 | 8:05 AM

ಯೋಗ (Yoga) ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಯಮಿತ ಯೋಗಾಭ್ಯಾಸವು ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೂ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ದೈನಂದಿನ ಯೋಗಾಭ್ಯಾಸವು ಅನಾರೋಗ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ನಮ್ಯತೆಯನ್ನು ಸುಧಾರಿಸುತ್ತದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಹಾಗೂ ಒತ್ತವನ್ನು ಸಹ ನಿವಾರಿಸುತ್ತದೆ. ಹಾಗಾಗಿ ಇಂದು ಅನೇಕರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗದ ಈ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಲು ಹಾಗೂ ಯೋಗಾಭ್ಯಾಸ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಪರಿಕಲ್ಪನೆ ನಮ್ಮ ಭಾರತ ದೇಶದ್ದು. ಸೆಪ್ಟೆಂಬರ್ 27, 2014 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ, ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಾಡಿದರು. ಈ ಪ್ರಸ್ತಾವನೆಗೆ 175 ದೇಶಗಳು ಬೆಂಬಲ ನೀಡಿದವು ಮತ್ತು ಡಿಸೆಂಬರ್ 11, 2014 ರಂದು ವಿಶ್ವಸಂಸ್ಥೆಯು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಮೊದಲ ಬಾರಿಗೆ ಯೋಗ ದಿನವನ್ನು ಜೂನ್ 21, 2015 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಜೂನ್ 21 ಅನ್ನೇ ಏಕೆ ಆಯ್ಕೆ ಮಾಡಲಾಯಿತು?

ಜೂನ್ 21 ವರ್ಷದ ಅತಿ ಉದ್ದದ ಹಗಲುಳ್ಳ ದಿನವಾಗಿದ್ದು, ಬೇಸಿಗೆಯ ಅಯನ ಸಂಕ್ರಾಂತಿಯ ದಿನವೆಂದು ಕರೆಯಲಾಗುತ್ತದೆ. ಈ ದಿನವು ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಯೋಗ ದೃಷ್ಟಿಕೋನದಿಂದ, ಇದನ್ನು ಆಧ್ಯಾತ್ಮಿಕ ಮತ್ತು ನೈಸರ್ಗಿಕ ಶಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದೇ ದಿನದಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವವೇನು?

ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಪಂಚದಾದ್ಯಂತ ಜನರು ಈ ಪ್ರಾಚೀನ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅಂತರರಾಷ್ಟ್ರೀಯ ಯೋಗ ದಿನದ ಗುರಿಯಾಗಿದೆ.

ಇದನ್ನೂ ಓದಿ: ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

ಯೋಗಾಭ್ಯಾಸ ಮಾಡಲು ಉತ್ತಮ ಸಮಯ ಯಾವುದು?

ಯೋಗ ಮಾಡುವಾಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆದ್ದರಿಂದ, ಹೊರಗಿನ ಉಷ್ಣತೆ ಹೆಚ್ಚಿರುವಾಗ ಯೋಗವನ್ನು ಅಭ್ಯಾಸ ಮಾಡಬಾರದು. ಮುಂಜಾನೆ ಯೋಗ ಮಾಡಲು ಉತ್ತಮ ಸಮಯ ಮುಂಜಾನೆ 4 ರಿಂದ ಬೆಳಿಗ್ಗೆ 7 ರವರೆಗೆ ಹಾಗೂ ಸಂಜೆ 5 ಗಂಟೆಯ ನಂತರ. ಹೆಚ್ಚು ಶಬ್ದವಿಲ್ಲದ ಉತ್ತಮ ಗಾಳಿ ಇರುವ ಪ್ರಶಾಂತ ಸ್ಥಳದಲ್ಲಿ ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಸ್ಪಷ್ಟವಾಗುತ್ತದೆ.

ಯೋಗದ ಪ್ರಯೋಜನಗಳೇನು?

  • ಯೋಗವು ಯಕೃತ್ತು, ಶ್ವಾಸಕೋಶಗಳು, ಹೃದಯ, ಮೂತ್ರಪಿಂಡಗಳು ಮತ್ತು ಇತರ ಎಲ್ಲಾ ಅಂಗಗಳು ಸರಾಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
  • ಮೂಳೆಗಳನ್ನು ಬಲಪಡಿಸುತ್ತದೆ
  • ಯೋಗವು ನಮ್ಮನ್ನು ದಿನವಿಡೀ ಉಲ್ಲಾಸದಿಂದಿರಿಸುತ್ತದೆ.
  • ಮಧುಮೇಹವನ್ನು ನಿಯಂತ್ರಿಸುತ್ತದೆ
  • ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
  • ಉತ್ತಮ ನಿದ್ರೆ ಪಡೆಯಲು ಸಹಕಾರಿ.
  • ಮದ್ಯಪಾನ ಮತ್ತು ಧೂಮಪಾನದ ಚಟವನ್ನು ನಿಯಂತ್ರಿಸಲು ಹಾಗೂ ಅದರಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.
  • ಕುತ್ತಿಗೆ ನೋವು, ಬೆನ್ನು ನೋವು, ಕೀಲು ನೋವಿಗೆ ಪರಿಹಾರವನ್ನು ನೀಡುತ್ತದೆ.
  • ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡಲು ಸಹಕಾರಿ.
  • ನಿಯಮಿತ ಯೋಗದಿಂದ ಕೆಲಸದ ದಕ್ಷತೆ ಮತ್ತು ನಿರ್ವಹಣಾ ಕೌಶಲ್ಯ ಹೆಚ್ಚಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us