ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲಿ ಲಭ್ಯವಿರುವ ಬಾಳೆಹಣ್ಣು ಎಲ್ಲರ ನೆಚ್ಚಿನ ಹಣ್ಣುಗಳಲ್ಲಿ ಒಂದು. ಇದರಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ. ಮಾಗಿದ ಬಾಳೆಹಣ್ಣು ಹೆಚ್ಚು ದಿನ ಇಡಲು ಆಗುವುದಿಲ್ಲ, ಬಹುಬೇಗನೇ ಕೊಳೆತುಹೋಗುತ್ತದೆ. ಹೀಗಾಗಿ ಹೆಚ್ಚಿನವರು ಬಾಳೆಹಣ್ಣನ್ನು ಸ್ವಲ್ಪವೇ ಖರೀದಿ ಮಾಡುತ್ತಾರೆ. ಒಂದು ವೇಳೆ ಅಗ್ಗಕ್ಕೆ ಈ ಹಣ್ಣು ಸಿಕ್ಕಿತು ಎಂದಾದರೆ, ಮನೆಗೆ ತಂದ ಈ ಹಣ್ಣನ್ನು ದೀರ್ಘಕಾಲ ಶೇಖರಿಸಿಡಲು ಈ ವಿಧಾನಗಳನ್ನು ಅನುಸರಿಸಬಹುದು.
ಬಾಳೆಹಣ್ಣು ತಾಜಾವಾಗಿರಿಸಲು ಇಲ್ಲಿದೆ ಸಲಹೆಗಳು:
- ಬಾಳೆಹಣ್ಣು ಖರೀದಿಸುವಾಗ ಹೆಚ್ಚು ಮಾಗಿದ ಹಾಗೂ ಕಪ್ಪು ಕಲೆಗಳಿರುವ ಹಣ್ಣನ್ನು ಖರೀದಿ ಮಾಡಬೇಡಿ. ಯಾವುದೇ ಕಲೆಗಳಿಲ್ಲದ ಹಸಿರು ಅಥವಾ ಸ್ವಲ್ಪ ಗಟ್ಟಿಯಾಗಿರುವ ಹಣ್ಣುಗಳನ್ನು ಖರೀದಿಸುವುದರಿಂದ ಹಣ್ಣು ಕೊಳೆಯದಂತೆ ತಡೆಯಬಹುದು.
- ಬಾಳೆಹಣ್ಣುಗಳು ಹಣ್ಣಾದಾಗ, ಅವುಗಳ ಕಾಂಡಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಈ ಅನಿಲವು ಉಳಿದ ಹಣ್ಣುಗಳಿಗೆ ಹರಡಿ ಬೇಗನೆ ಹಣ್ಣುಗಳನ್ನು ಕೊಳೆಯುವಂತೆ ಮಾಡುತ್ತದೆ. ಹೀಗಾಗಿ ಬಾಳೆಗೊನೆಯ ಮೇಲಿನ ಭಾಗಕ್ಕೆ ಮನೆಯಲ್ಲಿ ಆಹಾರವನ್ನು ಕಟ್ಟಲು ಬಳಸುವ ಪ್ಲಾಸ್ಟಿಕ್‌ನಿಂದ ಸುತ್ತಿ ಇಡುವುದರಿಂದ ಬಾಳೆಹಣ್ಣು ಹಣ್ಣು ಕೊಳೆತು ಹೋಗುವುದಿಲ್ಲ.
- ಇತರ ಹಣ್ಣುಗಳು ಹಾಗೂ ತರಕಾರಿಯ ಜೊತೆಯಲ್ಲಿ ಈ ಬಾಳೆಹಣ್ಣನ್ನು ಇಡಬೇಡಿ. ಸೇಬು, ಟೊಮೊಟೊ ಸೇರಿದಂತೆ ಇತರ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಬಾಳೆಹಣ್ಣು ಬೇಗನೇ ಮಾಗಿ ಕೊಳೆತು ಹೋಗಬಹುದು. ಹೀಗಾಗಿ ಬಾಳೆಹಣ್ಣನ್ನು ಇತರ ಹಣ್ಣುಗಳಿಂದ ಪ್ರತ್ಯೇಕವಾಗಿ ಇರಿಸುವುದು ಒಳ್ಳೆಯದು.
- ವಿಟಮಿನ್ ಸಿ ಟ್ಯಾಬ್ಲೆಟ್ ಅನ್ನು ನೀರಿನಲ್ಲಿ ಕರಗಿಸಿ ಅದರಲ್ಲಿ ಬಾಳೆಹಣ್ಣನ್ನು ಅದ್ದಿ ಹೊರತೆಗೆಯುವ ಮೂಲಕ ಹಣ್ಣು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.
- ಬಾಳೆಹಣ್ಣನ್ನು ನೆಲ ಸೇರಿದಂತೆ ಮೇಲೆ ಇರಿಸಿದರೆ ಕೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಬಾಳೆಗೊನೆಯನ್ನು ನೇತುಹಾಕುವುದರಿಂದ ಹಣ್ಣು ಬೇಗನೇ ಹಾಳಾಗದಂತೆ ತಡೆಯಬಹುದು.
- ಹಣ್ಣುಗಳನ್ನು ದೀರ್ಘಕಾಲ ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವವರು ಹೆಚ್ಚು. ಈ ಕೆಲಸವನ್ನು ಆದಷ್ಟು ತಪ್ಪಿಸಿ ತಂಪಾದ ವಾತಾವರಣವು ಬಾಳೆಹಣ್ಣು ಕೊಳೆಯುವಂತೆ ಮಾಡುತ್ತದೆ. ಹೀಗಾಗಿ ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸುವುದು ಒಳ್ಳೆಯ ವಿಧಾನವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ