ಶ್ರೇಷ್ಠ ಮುತ್ಸದ್ಧಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎಲ್ಲರಿಗೂ ಕೂಡ ಚಿರಪರಿಚಿತ. ಭಾರತದ ಹೆಮ್ಮೆಯ ಪುತ್ರ ಹಾಗೂ ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 59 ನೇ ಪುಣ್ಯ ಸ್ಮರಣೆ. ತಮ್ಮ ಅಧಿಕಾರವಧಿಯಲ್ಲಿ ಭ್ರಷ್ಟಾಚಾರರಹಿತ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಶಾಸ್ತ್ರಿಜೀ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು, ಭಾರತದ ಸಾರ್ವಭೌಮತ್ವ ಹಾಗೂ ಭದ್ರತೆ ಕಾಪಾಡಿಕೊಳ್ಳುವ ಅವರ ಸಂಕಲ್ಪವನ್ನು ಎತ್ತಿ ತೋರಿಸುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರು ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಮೊಘಲ್‌ಸರಾಯ್‌ನಲ್ಲಿ 1904 ಅಕ್ಟೋಬರ್ 2ರಂದು ಜನಿಸಿದರು. ಅವರ ತಂದೆ ಶಾರದಾ ಪ್ರಸಾದ್ ಮತ್ತು ತಾಯಿ ರಾಮದುಲಾರಿ ದೇವಿ. ಶಾಸ್ತ್ರಿಯವರು ಸಮಾನತೆಯಲ್ಲಿ ನಂಬಿಕೆಯುಳ್ಳರಾಗಿದ್ದ ವ್ಯಕ್ತಿ. ಹೀಗಾಗಿ ಜಾತಿ ವ್ಯವಸ್ಥೆಯನ್ನು ವಿಭಜನೆಯನ್ನು ಸೃಷ್ಟಿಸುವ ಸಾಮಾಜಿಕ ಅನಿಷ್ಟವೆಂದು ಪರಿಗಣಿಸಿದ್ದರು. ಅವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬದ ಹೆಸರನ್ನು ತ್ಯಜಿಸಿ, ಕಾಶಿ ವಿದ್ಯಾಪೀಠಕ್ಕೆ ಸೇರಿ ತತ್ವಶಾಸ್ತ್ರದಲ್ಲಿ ಪದವಿ ಪಡೆದ ನಂತರವೇ ‘ಶಾಸ್ತ್ರಿ’ ಎಂಬ ಬಿರುದು ಪಡೆದರು.
ಶಾಸ್ತ್ರಿಯವರು ಶಾಲೆಯನ್ನು ತೊರೆದು 1920ರಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಶ್ರಮಿಸಿದವರು. ಭಾರತದ ಎರಡನೇ ಪ್ರಧಾನಿಯಾಗಿ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1951 ರಲ್ಲಿ ರೈಲ್ವೇ ಸಚಿವರಾಗಿ ಕರ್ತವ್ಯ ಸಲ್ಲಿಸಿದ್ದರು. ಉಜೈಕಿಸ್ತಾನದ ತಾಷೆಂಟ್‌ನಲ್ಲಿ ಜನವರಿ 11, 1966ರಲ್ಲಿ ಶಾಸ್ತ್ರೀಜಿ ಅಕಾಲಿಕವಾಗಿ ಸಾವನ್ನಪ್ಪಿದರು. ಸರಳತೆ ಬಿಡದ ವ್ಯಕಿತ್ವ, ಪ್ರಾಮಾಣಿಕವಾಗಿ ಬದುಕಿದ ಶಾಸ್ತ್ರೀಜಿಯವರ ಎಲ್ಲರಿಗೂ ಮಾದರಿಯಾಗಿದೆ.
ಇದನ್ನೂ ಓದಿ: ದೇಶದಲ್ಲಿ ಪ್ರತಿ ಗಂಟೆಗೆ 52 ರಸ್ತೆ ಅಪಘಾತಗಳು, ಈ ಅಂಕಿಅಂಶದಲ್ಲಿ ಏನಿದೆ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ