ಹಿಂದಿನ ಕಾಲದಲ್ಲಿ ಬೇಸಿಗೆ ರಜೆ ಬಂತೆಂದರೆ ಸಾಕು, ರಜೆ ಮಜಾವನ್ನೆಲ್ಲಾ ಕಳೆಯಲು ಹೋಗುತ್ತಿದ್ದದ್ದೆ ಅಜ್ಜಿ ಮನೆಯತ್ತ. ಗಂಟು ಮೂಟೆ ಕಾಟ್ಟಿಕೊಂಡು ಅಜ್ಜಿ ಮನೆಗೆ ಹೊರಟರೆ ರಜೆಯು ಮುಗಿಯವರೆಗೂ ಅಜ್ಜಿ ಮನೆಯೇ ಮಕ್ಕಳ ಪಾಲಿಗೆ ಸ್ವರ್ಗವಾಗುತ್ತಿತ್ತು. ರಜೆಯಲ್ಲಿ ಕಾಡು ಮೇಡು, ಗದ್ದೆ ಬಯಲು ಸುತ್ತಿಕೊಂಡು ಮರಕೋತಿ, ಲಗೋರಿ, ಗಿಲ್ಲಿ ದಾಂಡು, ಕುಂಟೆ ಬಿಲ್ಲೆ, ಕಬ್ಬಡಿ, ಬುಗುರಿ ಹೀಗೆ ಹಲವಾರು ಬಗೆಯ ಆಟ ಆಡಿ ಸಂಜೆ ಮನೆಗೆ ಬರುತ್ತಿದ್ದ ಕಾಲವೊಂದಿತ್ತು. ಆದರ ಇದೀಗ ಮಕ್ಕಳ ಬಾಲ್ಯದ ದಿನಗಳು ಬದಲಾಗಿವೆ. ಆಧುನಿಕತೆಯಿಂದಾಗಿ ಮಕ್ಕಳು ಮೊಬೈಲ್, ವಿಡಿಯೊ ಗೇಮ್ಸ್ ಮತ್ತು ಟಿವಿ ವೀಕ್ಷಣೆಯಲ್ಲಿ ಮುಳುಗಿಹೋಗಿದ್ದಾರೆ. ಶಾಲೆ, ಓದು, ಟ್ಯೂಷನ್ ಎಂದು ಹೆಚ್ಚು ಸಮಯ ಕಳೆಯುತ್ತಾ ದೈಹಿಕ ಆಟಗಳಲ್ಲಿ ಆಸಕ್ತಿಯೇ ಇಲ್ಲ. ಅದಲ್ಲದೇ ಮಕ್ಕಳಿಗೆ ಹೊರಗೆ ಹೋಗಿ ಆಟ ಆಡಲು ಪೋಷಕರು ಕೂಡ ಸ್ವಾತಂತ್ರ್ಯವನ್ನು ನೀಡುತ್ತಿಲ್ಲ. ಹೀಗಾಗಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವ ಮಕ್ಕಳು ಒಂದು ದಿನ ಮಟ್ಟಿಗಾದರೂ ಹೊರ ಜಗತ್ತಿನೊಂದಿಗೆ ತೆರೆದುಕೊಳ್ಳಲಿ ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷವು ಜನವರಿ 21 ರಂದು, ಅಂತರಾಷ್ಟ್ರೀಯ ಪ್ಲೇಡೇಟ್ ದಿನವನ್ನು ಆಚರಿಸಲಾಗುತ್ತದೆ.
ಜಿಐಜಿಐ ಬ್ಲಾಕ್‌ಗಳ ಸಿಇಒ ಇಲೋನಾ ವಿಲುಮಾರವರು, ಮಕ್ಕಳು ತಂತ್ರಜ್ಞಾನವನ್ನು ಅವಲಂಬಿಸಿರುವುದು ಗಮನಿಸುತ್ತಿದ್ದರು. ತಂತ್ರಜ್ಞಾನಗಳಿಂದಾಗಿ ಮಕ್ಕಳ ಕೌಶಲ್ಯವು ಕಡಿಮೆಯಾಗುತ್ತಿದ್ದು, ಸಂವಹನವು ಕುಂಠಿತಗೊಳ್ಳುತ್ತಿವೆ. ತಂತ್ರಜ್ಞಾನವು ಮಕ್ಕಳ ಸಂತೋಷವನ್ನು ಕಸಿದುಕೊಳ್ಳುವವುದರಿಂದ ಈ ಒಂದು ದಿನ ಹೊರಾಂಗಣದ ಆಟ ಆಡುವುದರಿಂದ ಮಕ್ಕಳು ಬೇರೆ ಮಕ್ಕಳ ಜೊತೆಗೆ ಬೆರೆಯಲಿ ಎನ್ನುವ ಉದ್ದೇಶದಿಂದ ಅಂತರಾಷ್ಟ್ರೀಯ ಪ್ಲೇಡೇಟ್ ದಿನವನ್ನು ಆಚರಿಸಲು ಮುಂದಾದರು.
ಇದನ್ನೂ ಓದಿ: ಮಧುಮೇಹಿಗಳು ಸುರಕ್ಷಿತವಾಗಿ ಮಾಡಬಹುದಾದ ಆಸನಗಳು ಇಲ್ಲಿವೆ
ಹೊರಾಂಗಣ ಆಟದ ದಿನವು ಮಕ್ಕಳು ಹೊರಗಡೆ ಆಟ ಆಡಲು ಮಾತ್ರ ಸೀಮಿತವಾಗಿಲ್ಲ. ಈ ದಿನದಲ್ಲಿ ತಮ್ಮ ಅರಿವಿನ ಕೌಶಲ್ಯಗಳನ್ನು ಹೆಚ್ಚಿಸುವುದರಿಂದ ಹಿಡಿದು ಅವರ ಸಂವಹನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಹೊಸ ಜಗತ್ತಿಗೆ ತೆರೆದುಕೊಳ್ಳುವುದರಿಂದ ಇತರ ಮಕ್ಕಳ ಜೊತೆಗೂ ತೆರೆದುಕೊಳ್ಳುತ್ತಾರೆ. ಅಂತರಾಷ್ಟ್ರೀಯ ಪ್ಲೇಡೇಟ್ ದಿನದಂದು ಮಕ್ಕಳಿಗಾಗಿ ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ಮಕ್ಕಳು ಉಳಿದ ಮಕ್ಕಳ ಜೊತೆಗೆ ಬೆರೆಯುವಂತಹ ಆಟಗಳನ್ನು ಒಳಗೊಂಡಿರುತ್ತದೆ. ಮಕ್ಕಳಿಗೆ ಒಂದು ದಿನ ಮಟ್ಟಿಗೆ ತಂತ್ರಜ್ಞಾನಗಳಿಂದ ಸಂಪೂರ್ಣವಾಗಿ ದೂರವಿರಿಸಿ ಹೊರಗಡೆ ಆಟ ಆಡಲು ಅನುವು ಮಾಡುವುದರಿಂದ ಮಕ್ಕಳ ದಿನವು ಚುರುಕತನದಿಂದ ಕೂಡಿರುತ್ತಾರೆ. ಅದಲ್ಲದೇ ಈ ದಿನವನ್ನು ಆಚರಿಸುವುದರಿಂದ ಮಕ್ಕಳು ಜೀವನದಲ್ಲಿ ಹೊರಾಂಗಣ ಆಟದ ಮಹತ್ವವೆಷ್ಟಿದೆ ಎನ್ನುವುದನ್ನು ಅರಿತುಕೊಳ್ಳುವುದಾಗಿದೆ. ಈ ದಿನ ಮಕ್ಕಳ ಜೊತೆಗೆ ಪೋಷಕರು ಕೂಡ ಸಮಯ ಕಳೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:18 pm, Fri, 19 January 24