
ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ ಸಾವಿರಾರು ವಿಡಿಯೋಗಳು ಅಪ್ಲೋಡ್ ಆಗುತ್ತಿರುತ್ತವೆ. ಯುಟ್ಯೂಬ್ನಲ್ಲಿ ವ್ಲಾಗರ್ಸ್ಗಳು ತರಹೇವಾರಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದರಲ್ಲಿ ಡೈಲಿ ವ್ಲಾಗ್ಗಳು (Daily Vlogs) ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ. ಇದೇ ಕಾರಣದಿಂದ ಈ ಡೈಲಿ ವ್ಲಾಗರ್ಸ್ಗಳ ಸಂಖ್ಯೆ ಹೆಚ್ಚಾಗಿದ್ದು, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನೆಲ್ಲಾ ಮಾಡುತ್ತಾರೆ, ಅದನ್ನೆಲ್ಲಾ ಶೂಟ್ ಮಾಡಿ ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಹೆಚ್ಚಿನ ಜನರು ಇಂತಹ ವಿಡಿಯೋಗಳನ್ನೇ ನೋಡಲು ಬಹಳಷ್ಟು ಇಷ್ಟಪಡುತ್ತಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಜೆನ್ ಝೀಗಳೇ ಡೈಲಿ ವ್ಲಾಗ್ಸ್ ಅನ್ನು ವೀಕ್ಷಿಸುತ್ತಾರೆ. ಅಷ್ಟಕ್ಕೂ ದೈನಂದಿನ ದಿನಚರಿ ವಿಡಿಯೋಗಳನ್ನು ವೀಕ್ಷಿಸಲು ಜೆನ್ ಝೀಗಳಿಗೆ ಯಾಕಿಷ್ಟು ಕುತೂಹಲ, ಇದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಿ.
ದೈನಂದಿನ ದಿನಚರಿಯ ವೀಡಿಯೊಗಳ ಜನಪ್ರಿಯತೆಗೆ ಮಾನವ ಕುತೂಹಲವೇ ಪ್ರಮುಖ ಕಾರಣ. ಇತರರು ತಮ್ಮ ದಿನವನ್ನು ಹೇಗೆ ಯೋಜಿಸುತ್ತಾರೆ, ಅವರು ಏನು ತಿನ್ನುತ್ತಾರೆ, ಅವರು ಯಾವಾಗ ಎಚ್ಚರಗೊಳ್ಳುತ್ತಾರೆ ಮತ್ತು ಅವರು ತಮ್ಮ ಕೆಲಸವನ್ನು ಹೇಗೆ ನಿರ್ವಹಿಸುತ್ತಾರೆ, ಅವರು ಹೇಗಿರುತ್ತಾರೆ ಎಂಬುದನ್ನು ಜನರು ಸ್ವಾಭಾವಿಕವಾಗಿ ತಿಳಿದುಕೊಳ್ಳಲು ಬಯಸುತ್ತಾರೆ. ಜೆನ್ ಝೀಗಳು ವ್ಲಾಗರ್ಸ್ಗಳ ಮನೆ, ಬಟ್ಟೆ, ಗ್ಯಾಜೆಟ್ಗಳು ಮತ್ತು ದೈನಂದಿನ ಆದ್ಯತೆಗಳು, ಜೀವನಶೈಲಿನ ಬಗ್ಗೆ ಕುತೂಹಲ ಹೊಂದಿರುತ್ತಾರೆ. ಹೀಗೆ ಅಪರಿಚಿತರ ದಿನಚರಿಯನ್ನು ನಿರಂತರವಾಗಿ ವೀಕ್ಷಿಸಿದಾಗ, ಅವರು ಕ್ರಮೇಣ ಅವರ ಜೀವನಶೈಲಿಯೊಂದಿಗೆ ಪರಿಚಿತರಾಗುತ್ತಾರೆ. ಈ ಸಂಪರ್ಕವು ಮುಂದಿನ ವೀಡಿಯೊಗಾಗಿ ಪ್ರೇಕ್ಷಕರನ್ನು ಎದುರು ನೋಡುವಂತೆ ಮಾಡುತ್ತದೆ.
ಪ್ರತಿಯೊಂದು ಆಸಕ್ತಿದಾಯಕ ವೀಡಿಯೊಗೂ ರೋಮಾಂಚಕ ಕಥೆಯ ಅಗತ್ಯವಿಲ್ಲ. ಕೆಲವೊಮ್ಮೆ ಅತ್ಯಂತ ಸಾಮಾನ್ಯ ಕ್ಷಣಗಳು ಹೆಚ್ಚು ಗಮನ ಸೆಳೆಯುತ್ತವೆ. ಇದಕ್ಕೆ ಡೈಲಿ ವ್ಲಾಗ್ಗಳೇ ಉತ್ತಮ ಉದಾಹರಣೆ. ಇಂತಹ ವಿಡಿಯೋಗಳಲ್ಲಿ ಯಾವ ವಿಷಯಗಳು ಇಲ್ಲದಿದ್ದರೂ, ಜನ ಆಸಕ್ತಿಯಿಂದ ಇವುಗಳನ್ನು ವೀಕ್ಷಿಸುತ್ತಾರೆ. ಡೈಲಿ ವ್ಲಾಗರ್ಗಳ ದೈನಂದಿನ ಜೀವನದಲ್ಲಿ ನಡೆಯುವ ಪ್ರತಿ ಕ್ಷಣವೂ ನಮ್ಮ ಜೀವನದಲ್ಲಿಯೇ ನಡೆಯುತ್ತಿದೆ, ವ್ಲಾಗರ್ಸ್ಗಳು ನಮ್ಮವರೇ ಎಂಬಂತೆ ಎಂಬಂತೆ ಭಾವಿಸುತ್ತಾರೆ. ಇದರಿಂದ ತುಂಬಾ ಆಸಕ್ತಿಯಿಂದ ಡೈಲಿ ವ್ಲಾಗ್ಗಳನ್ನು ನೋಡ್ತಾರೆ.
ಡೈಲಿ ವ್ಲಾಗರ್ಸ್ ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ಟ್ರಿಪ್, ಫ್ಯಾಶನ್ ಬಟ್ಟೆಗಳು, ಐಷಾರಾಮಿ ಮನೆಗಳು, ಕಾರು ಹೀಗೆ ಐಷಾರಾಮಿ ಜೀವನ ಇವೆಲ್ಲವೂ ಜೆನ್ ಝೀ ಗಳನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತದೆ. ಈ ಎಲ್ಲಾ ಲಕ್ಷುರಿ ಜೀವನವನ್ನು ನೋಡಲು ಡೈಲಿ ವ್ಲಾಗ್ಗಳನ್ನು ನೋಡುತ್ತಾರೆ.
ಇದನ್ನೂ ಓದಿ: ಹಣಕಾಸಿನ ವಿಚಾರದಲ್ಲಿ ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು… ಎಚ್ಚರ!
ಡೈಲಿ ವ್ಲಾಗ್ಗಳು ಜನರು ವಿವಿಧ ನಗರಗಳು, ದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಹೇಗೆ ವಾಸಿಸುತ್ತಾರೆ ಎಂಬುದರ ಕುರಿತು ಒಳನೋಟವನ್ನು ಒದಗಿಸುತ್ತವೆ. ಕೆಲವರು ತಮ್ಮ ಬೆಳಗಿನ ದಿನಚರಿಯನ್ನು ಪ್ರದರ್ಶಿಸಬಹುದು, ಕೆಲವರು ತಮ್ಮ ಸಣ್ಣ ಮನೆಯಲ್ಲಿ ಹೇಗೆಲ್ಲಾ ಜೀವನವನ್ನು ನಡೆಸುತ್ತಾರೆ ಎಂಬುದನ್ನು ಹಾಗೂ ಕೆಲವರು ತಮ್ಮ ಐಷಾರಾಮಿ ಜೀವನವನ್ನು ಪ್ರದರ್ಶಿಸುತ್ತಾರೆ. ಅಂತಹ ವಿಷಯವು ಜೆನ್ ಝೀ ಗಳಿಗೆ ಹೆಚ್ಚು ಮನರಂಜನಾತ್ಮಕವಾಗಿರುತ್ತದೆ.
ಅಧ್ಯಯನ, ಕೆಲಸ ಮತ್ತು ಇತರ ಜವಾಬ್ದಾರಿಗಳ ಕಾರಣದಿಂದ ಒತ್ತಡಕ್ಕೊಳಗಾಗಿರುವ ಅನೇಕ ಜನರಿಗೆ, ಇಂತಹ ವ್ಲಾಗ್ಗಳು ಕಾರ್ಯನಿರತ ದಿನದ ಗಡಿಬಿಡಿಯಿಂದ ವಿಶ್ರಾಂತಿ ಪಡೆಯುವ ಅನುಭವ ನೀಡುತ್ತದೆ. ಈ ಡೈಲಿ ವ್ಲಾಗ್ಸ್ಗಳಲ್ಲಿ ಹೈ ಡ್ರಾಮಾ ಅಥವಾ ಸಂಕೀರ್ಣ ಕಥಾಹಂದರ ಇರೋದಿಲ್ಲ, ಇವು ಸಾಮಾನ್ಯವಾಗಿ ಸರಳ ಸ್ವರೂಪದಲ್ಲಿರುತ್ತವೆ. ಹಾಗಾಗಿ ಈ ವೀಡಿಯೊಗಳನ್ನು ವೀಕ್ಷಿಸಲು ಹೆಚ್ಚಿನವರು ಇಷ್ಟಪಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ