ದಿನದಿಂದ ದಿನಕ್ಕೆ ಜಾಗತಿಕ ಮಟ್ಟದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಕ್ರಮ ಬೇಟೆ, ಹವಾಮಾನ ಬದಲಾವಣೆ ಮತ್ತು ಕಾಡುಗಳ ನಾಶ ಮುಂತಾದ ಕಾರಣಗಳಿಂದ ಹುಲಿಗಳ ಸಂತತಿ ನಶಿಸಿಹೋಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, 20 ನೇ ಶತಮಾನದ ಆರಂಭದ ವೇಳೆಯಲ್ಲಿ ಶೇಕಡಾ 95% ರಷ್ಟು ಹುಲಿಗಳ ಸಂಖ್ಯೆಯು ನಾಶವಾಗಿದೆ. ಕೇವಲ 5% ಶೇಕಡದಷ್ಟು, ಅಂದರೆ ಕೇವಲ 3900 ಹುಲಿಗಳು ಮಾತ್ರ ಕಾಡುಗಳಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಹುಲಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. ಇದು ಹುಲಿಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಸಂತತಿಯನ್ನು ಉಳಿಸುವ ಗುರಿಯನ್ನು ಹೊಂದಿದೆ.
2010ರಲ್ಲಿ ಹುಲಿಗಳ ಸಂಖ್ಯೆ ಕ್ಷಿಪ್ರವಾಗಿ ಕಡಿಮೆಯಾಗುತ್ತಿರುವ ಕುರಿತು ವರದಿಯೊಂದು ಹೊರಬಿದ್ದಿತ್ತು. ಕಳೆದ ಶತಮಾನಕ್ಕೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಶೇಕಡಾ 97% ರಷ್ಟು ಇಳಿಕೆಯಾಗಿವೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಅಂದರೆ 2010 ರ ವೇಳೆಗೆ ಪ್ರಪಂಚದಾದ್ಯಂತ ಕೇವಲ 3,000 ಹುಲಿಗಳು ಮಾತ್ರ ಇದ್ದವು. ಈ ನಿಟ್ಟಿನಲ್ಲಿ ವೇಗವಾಗಿ ಅವನತಿಯತ್ತ ಸಾಗುತ್ತಿರುವ ಹುಲಿಗಳ ಸಂತತಿಯನ್ನು ಸಂರಕ್ಷಿಸಲು ಅಭಿಯಾನವನ್ನು ಪ್ರಾರಂಭಿಸಲಾಯಿತು. 2010 ರಲ್ಲಿ ರಷ್ಯಾದ ಸೇಂಟ್ ಪೀಟ್ಸ್ ಬರ್ಗ್ ನಲ್ಲಿ ಹುಲಿಗಳ ರಕ್ಷಣೆಗಾಗಿ ಸಮಾವೇಶವನ್ನು ನಡೆಸಲಾಯಿತು. ಮತ್ತು ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ನಿಯಂತ್ರಿಸಲು ಪ್ರತಿವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿಗಳ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
ಇದನ್ನೂ ಓದಿ:ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನದ ಇತಿಹಾಸ, ಮಹತ್ವ ಇಲ್ಲಿದೆ
ಕಳೆದ ಶತಮಾನದಲ್ಲಿ ಶೇಕಡಾ 97% ರಷ್ಟು ಹುಲಿಗಳು ಕಣ್ಮರೆಯಾಗಿ ಕೇವಲ 3,000 ಹುಲಿಗಳು ಮಾತ್ರ ಉಳಿದಿವೆ ಎಂದು ಕಂಡುಹಿಡಿದ ನಂತರ 2010 ರಲ್ಲಿ ಹುಲಿಗಳ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ಹುಲಿ ದಿನವನ್ನು ಪರಿಚಯಿಸಲಾಯಿತು. ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವು ಜಾಗತಿಕ ಮಟ್ಟದಲ್ಲಿ ಹುಲಿಗಳ ಸಂರಕ್ಷಣೆಗಾಗಿ ಜಾಗೃತಿ ಕಾರ್ಯಗಳನ್ನು ರೂಪಿಸುವುದು ಮತ್ತು ಹುಲಿಗಳ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸುವುದು. ಈ ದಿನದ ಉದ್ದೇಶ ಹುಲಿಗಳ ಸಂತತಿಯನ್ನು ರಕ್ಷಿಸುವುದು ಮಾತ್ರವಲ್ಲದೆ, ಅವುಗಳ ಆವಾಸಸ್ಥಾನವಾದ ಕಾಡಿನ ಸಂರಕ್ಷಣೆಯನ್ನು ಕೂಡಾ ಮಾಡುವುದಾಗಿದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್, ಇಂಟರ್ ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ಫೇರ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳು ವಿಶ್ವ ಹುಲಿ ದಿನವನ್ನು ಆಚರಿಸುತ್ತದೆ. ವರ್ಲ್ಡ್ ಫಂಡ್ ಫಾರ್ ನೇಚರ್ ಪ್ರಕಾರ ಹುಲಿಗಳ ಪ್ರಸ್ತುತ ಸಂಖ್ಯೆಯು 3,900 ರಷ್ಟಿದೆ. ವಿಶ್ವದಲ್ಲಿಯೇ ಸುಮಾರು 70% ಶೇಕಡದಷ್ಟು ಹುಲಿಗಳು ಭಾರತದಲ್ಲಿ ನೆಲೆಯಾಗಿವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ