ಹತ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗುವ ಸಸ್ಯವಾಗಿದ್ದು, ವೈದ್ಯಕೀಯ ಕ್ಷೇತ್ರ, ಪಶು ಆಹಾರಗಳು, ಖಾದ್ಯ ತೈಲ ಮತ್ತು ಜವಳಿ ಉದ್ಯಮಗಳಲ್ಲಿ ಹೀಗೆ ಇದರ ಬಳಕೆಯೂ ವ್ಯಾಪಕವಾಗಿದೆ. ಈ ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆಗಳನ್ನು ಧರಿಸಿದರೂ ಹಿತಕರವಾದ ಭಾವವನ್ನು ಉಂಟು ಮಾಡುತ್ತದೆ. ಹತ್ತಿಯನ್ನು ಭಾರತ ಸೇರಿದಂತೆ ಉಷ್ಣವಲಯದ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ವಿಶ್ವದಲ್ಲಿ ಸರಿಸುಮಾರು 75 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 28.67 ಮಿಲಿಯನ್ ನಷ್ಟು ರೈತರು ಹತ್ತಿಯನ್ನೇ ಬೆಳೆಯುತ್ತಾರೆ. ಇದರಿಂದ ಅದೆಷ್ಟೋ ಬಡ ಕುಟುಂಬಗಳು ಇದರಿಂದ ಜೀವನ ನಡೆಸುತ್ತಿದೆ. ಹತ್ತಿ ಬೆಳೆಯನ್ನು ಉತ್ತೇಜಿಸುವ ಸಲುವಾಗಿ ಅಕ್ಟೋಬರ್ 7 ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ.
ಬೆನಿನ್, ಬುರ್ಕಿನಾ, ಫಾಸೊ, ಚಾಡ್ ಮತ್ತು ಮಾಲಿ ಈ ನಾಲ್ಕು ದೇಶಗಳು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ವಿಶ್ವ ವ್ಯಾಪರ ಸಂಸ್ಥೆ ಸಚಿವಾಲಯವು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ , ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ , ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ ಕಾರ್ಯದರ್ಶಿಗಳ ಸಹಯೋಗದೊಂದಿಗೆ ವಿಶ್ವ ಹತ್ತಿ ದಿನದ ಆಚರಣೆಯೊಂದು ಆರಂಭವಾಯಿತು. ಹೀಗಾಗಿ ಹತ್ತಿ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 07, 2019 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಹತ್ತಿಬೆಳೆಯನ್ನು ಉತ್ತೇಜಿಸುವ ಹಾಗೂ ಹತ್ತಿ ಬೆಳೆಗಾರರಿಗೆ ಪ್ರೋತ್ಸಾಹಿಸುವ ಸದುದ್ದೇಶದಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹತ್ತಿ ಬೆಳೆಯನ್ನೇ ಅವಲಂಬಿಸಿಕೊಂಡಿದ್ದು, ಭಾರಿ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಆದರೆ ಇಂದು ಹವಾಮಾನ ಬದಲಾವಣೆ ಮತ್ತು ಇತರ ಸಮಸ್ಯೆಗಳಿಂದ ಅದರ ಉತ್ಪಾದನೆ ಕಡಿಮೆಯಾಗುತ್ತಿದೆ. ಹಲವಾರು ಸವಾಲುಗಳನ್ನು ಕೃಷಿಕರು ಎದುರಿಸುತ್ತಿದ್ದೂ, ಈ ನಿಟ್ಟಿನಲ್ಲಿ ಹತ್ತಿ ಉತ್ಪಾದನೆಗೆ ಸಂಬಂಧಿಸಿದ ಸವಾಲುಗಳನ್ನು ಎತ್ತಿ ತೋರಿಸಲು, ಹೊಸ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು, ಹಾಗೂ ಹತ್ತಿ ಬೆಳೆಯನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಹತ್ತಿ ಬೆಳೆಗಾರರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಕಾರ್ಯಾಗಾರ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ