Literature: ಅನುಸಂಧಾನ; ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ ಪರವಾಗಿಲ್ಲ

|

Updated on: May 01, 2022 | 9:18 AM

Writer : ನಿಮ್ಮದೇ ಒಂದು ಗುಂಪು, ಗ್ಯಾಂಗು, ಗ್ರೂಪು ಬೇಡ, ಅದರಿಂದ ಹೊರಬನ್ನಿ. ಜನ ಇದ್ದಾರೆ ಜೊತೆಗೆ ಎನ್ನುವ ಭಾವನೆ ನಿಮ್ಮ ಬರವಣಿಗೆಯ ಬಗ್ಗೆ ಅದು ಇರುವುದಕ್ಕಿಂತ ಹೆಚ್ಚು ಚೆನ್ನಾಗಿದೆ ಎಂಬ ಭ್ರಮೆಗೆ ಕಾರಣವಾಗದಿರಲಿ. 

Literature: ಅನುಸಂಧಾನ; ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ ಪರವಾಗಿಲ್ಲ
ಲೇಖಕಿ ಮರಿಯಾ ಪೊಪೊವಾ
Follow us on

ಅನುಸಂಧಾನ | Anusandhana : ಮರಿಯಾ ಪೊಪೊವಾ ಬಗ್ಗೆ ಅರಿಯದವರಿಲ್ಲ. ಹಿಂದೆ ಬ್ರೆಯಿನ್ ಪಿಕಿಂಗ್ಸ್ ಎಂಬ ಹೆಸರಿನಲ್ಲಿ ಪ್ರತಿವಾರಕ್ಕೊಮ್ಮೆ ಬರುತ್ತಿದ್ದ ಈಕೆಯ ಈಮೇಲ್ ಈಗ ಮಾರ್ಜಿನಲಿಯನ್ ಹೆಸರಿನಲ್ಲಿ ವಾರಕ್ಕೆರಡು ಬಾರಿ ಬರುತ್ತಿದೆ. ಈಕೆಯ ನ್ಯೂಸ್ ಲೆಟರ್ ಅಥವಾ ಬ್ಲಾಗಿನ ಲೇಖನ ರೂಪ ನಮಗೆ ಅತ್ಯಂತ ಆಪ್ತವಾದ ಸಾಹಿತ್ಯ ಸಲ್ಲಾಪವನ್ನು ಸಾಧ್ಯಗೊಳಿಸುತ್ತದೆ. ತೀರ ಗಂಭೀರವೂ ಅಲ್ಲದ, ತೀರ ಲಘುವೂ ಅಲ್ಲದ ತೆರದಲ್ಲಿ ಮಹತ್ವದ ಸಾಹಿತ್ಯಿಕ ವಿಚಾರಗಳನ್ನು, ಕೃತಿಗಳನ್ನು ಚುಟುಕಾಗಿ ನಮ್ಮ ಗಮನಕ್ಕೆ ತರುವ ಈ ಲೇಖನಗಳು ಬಹು ಜನಪ್ರಿಯ. ಇದರ ಹೊರತಾಗಿಯೂ ಈಕೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಒಂದು ಬರಹದಿಂದ ಅರಿವಿಗೆ ಬಂದ ವಿಚಾರವಿದು. ಸುಮಾರು ದಶಕದ ಹಿಂದೆ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ “ಬರವಣಿಗೆಯ ಹತ್ತು ನಿಯಮಗಳು” ಲೇಖನದಿಂದ ಸ್ಫೂರ್ತಿ ಪಡೆದು, ದಿ ಗಾರ್ಡಿಯನ್ ಪತ್ರಿಕೆ ಈ ಕಾಲದ ಸುಪ್ರಸಿದ್ಧ ಲೇಖಕರಲ್ಲಿ ಕೆಲವರನ್ನು ಅವರವರ ಬರವಣಿಗೆಯ ನಿಯಮಗಳೇನಿವೆ ಆ ಬಗ್ಗೆ ಬರೆಯಿರಿ ಎಂದು ಕೇಳಿಕೊಂಡಿತು. ಮರಿಯಾ ಪೊಪೊವಾ ಅವರು ತಮ್ಮ ಫೇವರಿಟ್ ಎಂದು ಜೇದಿ ಸ್ಮಿತ್ ಅವರ ಹತ್ತು ನಿಯಮಗಳತ್ತ ನಮ್ಮ ಗಮನ ಸೆಳೆಯುತ್ತಾರೆ. ಆ ಹತ್ತು ನಿಯಮಗಳು ಹೀಗಿವೆ.
ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)

 

  1. ಚಿಕ್ಕವರಿರುವಾಗಲೇ ಸಾಕಷ್ಟು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬೇರೆ ಏನನ್ನು ಮಾಡುವುದಕ್ಕಿಂತ ಹೆಚ್ಚು ಪ್ರಾಶಸ್ತ್ಯ ಓದುವಿಕೆಗೆ ಸಲ್ಲಲಿ.
  1. ಬೆಳೆದ ಬಳಿಕ, ನೀವು ಬರೆದಿದ್ದನ್ನು ಯಾರೋ ಅಪರಿಚಿತ ಓದಿದರೆ ಹೇಗೆ ಓದುತ್ತಾನೋ ಹಾಗೆ ಓದಲು ಪ್ರಯತ್ನಿಸಿ. ಅಪರಿಚಿತನಿಗಿಂತ, ನಿಮ್ಮ ವೈರಿ ಓದಿದರೆ ಹೇಗೆ ಓದುತ್ತಾನೋ ಹಾಗೆ ಓದಿದರೆ ಇನ್ನೂ ಒಳ್ಳೆಯದು.
  1. ಲೇಖಕ, ಬರಹಗಾರ ಅಥವಾ ಕವಿಯ ‘ಶೈಲಿ’ ಪ್ರದರ್ಶಿಸಲು ಹೋಗಬೇಡಿ, ಅದರ ಬಗ್ಗೆ ರಮ್ಯ ಕಲ್ಪನೆ ಇಟ್ಟುಕೊಳ್ಳುವುದೇನೂ ಬೇಕಾಗಿಲ್ಲ. ಅಂಥ ಜೀವನಶೈಲಿ ಎನ್ನುವುದೇ ವಾಸ್ತವದಲ್ಲಿ ಇಲ್ಲ. ನೀವು ಒಂದೋ ಒಳ್ಳೆಯ ಒಂದು ಸಾಲು ಬರೆಯ ಬಲ್ಲಿರಿ ಅಥವಾ ಅದು ನಿಮ್ಮ ಕೈಲಿ ಆಗುವುದಿಲ್ಲ, ಅಷ್ಟೆ. ಹಾಳೆಯ ಮೇಲೆ ನೀವು ಏನನ್ನು ಬರೆದಿದ್ದೀರಿ, ಉಳಿಸಿದ್ದೀರಿ ಎನ್ನುವುದಷ್ಟೇ ಕೊನೆಗೂ ಮುಖ್ಯವಾದ್ದು.
  1. ನಿಮ್ಮ ದೌರ್ಬಲ್ಯ ಅಥವಾ ನಿಮ್ಮಿಂದ ಆಗದ ವಿಚಾರದ ಬಗ್ಗೆ ವಿಶೇಷ ಒತ್ತು ಬೇಡ. ಆದರೆ ನಿಮ್ಮಿಂದ ಸಾಧ್ಯವಿಲ್ಲದ್ದೆಲ್ಲಾ ದೊಡ್ಡ ಸಂಗತಿಯೇನಲ್ಲ ಎಂಬ ತಾತ್ಸಾರವೂ ಬೇಡ. ಅಂಥ ಸಂಗತಿಯನ್ನು ಕೀಳಾಗಿ ಕಾಣದೇನೆ ನಿಮ್ಮ ಮಿತಿಯನ್ನು ಸ್ವೀಕರಿಸುವ ಮನೋಭಾವ ಇಟ್ಟುಕೊಳ್ಳಿ.
  1. ಬರವಣಿಗೆಗೂ ಅದನ್ನು ತಿದ್ದುವ ಕೆಲಸಕ್ಕೂ ನಡುವೆ ಸಾಕಷ್ಟು ಸಮಯದ ಅಂತರ ಇರಲಿ.
  1. ನಿಮ್ಮದೇ ಒಂದು ಗುಂಪು, ಗ್ಯಾಂಗು, ಗ್ರೂಪು ಬೇಡ, ಅದರಿಂದ ಹೊರಬನ್ನಿ. ಜನ ಇದ್ದಾರೆ ಜೊತೆಗೆ ಎನ್ನುವ ಭಾವನೆ ನಿಮ್ಮ ಬರವಣಿಗೆಯ ಬಗ್ಗೆ ಅದು ಇರುವುದಕ್ಕಿಂತ ಹೆಚ್ಚು ಚೆನ್ನಾಗಿದೆ ಎಂಬ ಭ್ರಮೆಗೆ ಕಾರಣವಾಗದಿರಲಿ.
  1. ನೀವು ಬಳಸುವ ಕಂಪ್ಯೂಟರಿಗೆ ಇಂಟರ್ನೆಟ್ ಕನೆಕ್ಷನ್ ಇಲ್ಲದಂತೆ ನೋಡಿಕೊಳ್ಳಿ.
  1. ನಿಮ್ಮ ಬರೆಯುವ ಸಮಯ ಮತ್ತು ಆ ಅವಧಿಯ ಮನೋಭೂಮಿಕೆಯನ್ನು ತೊಂದರೆ ಕೊಡುವ ಎಲ್ಲರಿಂದ ಸರಿಯಾಗಿ ಕಾಪಾಡಿಕೊಳ್ಳಿ. ಭಂಗ ತರುವ ಎಲ್ಲರನ್ನೂ ಆಗ ಅದರಿಂದ ದೂರವಿಡಿ, ನಿಮಗೆ ಅತ್ಯಂತ ಮುಖ್ಯವಾದ ವ್ಯಕ್ತಿಯನ್ನೂ ಕೂಡ.
  1. ಪ್ರಶಸ್ತಿ, ಪುರಸ್ಕಾರ, ಪ್ರಸಿದ್ಧಿಯನ್ನೆಲ್ಲ ಸಾಧನೆ ಎಂದು ತಿಳಿದುಕೊಳ್ಳುವ ತಪ್ಪು ಮಾಡಬೇಡಿ, ಅದೇ ಬೇರೆ, ಇದೇ ಬೇರೆ ಎಂಬ ಅರಿವು ಇರಲಿ.
  1. ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ, ಪರವಾಗಿಲ್ಲ, ಆದರೆ ಅದನ್ನು ಹೇಳಿ.

    ಲೇಖಕಿ ಜೇದಿ ಸ್ಮಿತ್

ಯಾವತ್ತೂ ತೃಪ್ತಿ ಎನ್ನುವುದಿಲ್ಲದ ಮನೋಧರ್ಮದಿಂದ ಬರುವ ಒಂದು ಕಾಯಿಲೆ ಇದೆ. ಅದು ಬಂದವರು ಜೀವನ ಪರ್ಯಂತ ಹ್ಯಾಪ್‌ಮೋರೆ ಹಾಕಿಕೊಂಡಿರುತ್ತಾರೆ. ನಿಮ್ಮಲ್ಲಿ ಅಂಥ ರೋಗ ಲಕ್ಷಣವಿದ್ದರೆ, ಅದನ್ನು ಗುಣಪಡಿಸಿಕೊಳ್ಳಿ.

ಜೆದೀ ಸ್ಮಿತ್ ಬಗ್ಗೆ ಹೇಳಬೇಕಾದುದಿಲ್ಲ. ಅವರ ಎಲ್ಲಾ ಕಾದಂಬರಿಗಳೂ ಹೆಸರು ಮಾಡಿವೆ. ಹಾಗೆಯೇ ಆಕೆಯ ಸೃಜನೇತರ ಕೃತಿಗಳೂ ಪ್ರಸಿದ್ಧವೇ. ಅಂಥ ಒಂದು ಪ್ರಸಿದ್ಧ ಕೃತಿ “ಚೇಂಜಿಂಗ್ ಮೈ ಮೈಂಡ್” ಕೂಡ ಇದೇ ನಿಟ್ಟಿನಲ್ಲಿ ಗಮನಿಸಬಹುದು. ಮರಿಯಾ ಪೊಪೊವಾ ಅವರ ಪ್ರಕಾರ ಆ ಉಪನ್ಯಾಸದ ಹೆಚ್ಚುವರಿ ಕೊಡುಗೆಯಾಗಿ ಈ ಮೇಲಿನ ಹತ್ತು ಅಂಶಗಳು ಬಂದಿವೆ. “ಚೇಂಜಿಂಗ್ ಮೈ ಮೈಂಡ್” ಕೃತಿಯಲ್ಲಿ ಆಕೆ ಕೊಲಂಬಿಯಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ  ಬರವಣಿಗೆ ಕುರಿತ ಕಮ್ಮಟದಲ್ಲಿ ಕೊಟ್ಟ ಉಪನ್ಯಾಸವಿದೆ. ಅಲ್ಲಿಯೂ ಆಕೆ ತಮ್ಮ ಬರವಣಿಗೆಯ ಕ್ರಮದ ಕುರಿತು ಒಟ್ಟು ಹತ್ತು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಕಾದಂಬರಿಯ ಮೊದಲ ಇಪ್ಪತ್ತು ಪುಟಗಳ ಮಹತ್ವ, ಬರೆದಾದ ನಂತರದ ತಿದ್ದುವ ಪ್ರಕ್ರಿಯೆ, ಒಂದು ಕಾದಂಬರಿಯನ್ನು ಬರೆಯುತ್ತಿರುವ ಅವಧಿಯಲ್ಲಿ ಬೇರೆ ಲೇಖಕರನ್ನು ಓದಬೇಕೆ, ಓದಬಾರದೆ, ಒಂದು ಕಾದಂಬರಿಯನ್ನು ಬರೆದಾದ ಬಳಿಕ ಅದರ ಅಂತ್ಯ, ಕಥಾಕ್ಷೇತ್ರ, ಪಾತ್ರಗಳು ಇತ್ಯಾದಿಯನ್ನು ಬೇಕಾದ ಹಾಗೆ ಬೇಕಾದಷ್ಟು ಸಲ ಬದಲಿಸಬಲ್ಲ ಮತ್ತು ಖಡಾಖಂಡಿತವಾಗಿ ಬದಲಿಸಲಾರದ ಕಾದಂಬರಿಕಾರರು, ಬರೆದ ಬಳಿಕ ಕೃತಿಯೊಂದಿಗಿನ ಲೇಖಕನ ಸಂಬಂಧ, ಎರಡು ವರ್ಷದ ಬಳಿಕ ಅದೇ ಕೃತಿಯ ಬಗ್ಗೆ ಬರೆದವನಿಗೆ ಏನನಿಸಬಹುದು ಇತ್ಯಾದಿ ಕುತೂಹಲಕರ ಸಂಗತಿಗಳ ಬಗ್ಗೆ ಚರ್ಚಿಸುವ ಈ ಉಪನ್ಯಾಸ ಹೊಸ ಬರಹಗಾರರಿಗಷ್ಟೇ ಅಲ್ಲ, ನುರಿತ ಬರಹಗಾರರಿಗೂ ಚಿಂತನಾರ್ಹ ವಿಚಾರಗಳನ್ನು ಹೊಂದಿದೆ.

(ಮುಂದಿನ ಸಂಧಾನ : 14.5.2022)

ಈ ಅಂಕಣದ ಎಲ್ಲಾ ಬರಹಗಳನ್ನುಇಲ್ಲಿ ಓದಿ : https://tv9kannada.com/tag/narendra-pai