ಕ್ಯಾನ್ವಾಸ್ | Canvas : ‘ಲಾಕ್ಡೌನ್ ಕಾಲಘಟ್ಟದಲ್ಲಿ ರಸ್ತೆಗೆ ಕಾಲಿಡುವ ಅವಕಾಶ ಸಿಕ್ಕಾಗಲೆಲ್ಲ ಕಣ್ಣಿಗೆ ಗೋಚರಿಸುತ್ತಿದ್ದ ಮೊದಲ ದೃಶ್ಯ ಜೋಡಿ ಕಳೆದುಕೊಂಡ, ಮಣ್ಣಿನಿಂದಾವೃತ್ತವಾದ, ಕೆಲಸಗಾರರು ಬಿಟ್ಟುಹೋದ ಒಬ್ಬಂಟಿ ಚಪ್ಪಲಿ, ಶೂಗಳು. ಜೋಡಿ ಬೇರ್ಪಡುವುದೆಂದರೆ ಸಮತೋಲನ ತಪ್ಪುವುದು ಎಂದರ್ಥ. ಇದು ವೈಯಕ್ತಿಕವೂ ಹೌದು, ಸಾರ್ವತ್ರಿಕವೂ ಹೌದು. ಲಾಕ್ಡೌನ್ ತೆರವುಗೊಂಡ ನಂತರ ಇಂತಹ ಹಲವು ಕಟ್ಟಡ ನಿರ್ಮಾಣಗಳ ಸ್ಥಳಗಳಲ್ಲಿ ಮತ್ತೆಮತ್ತೆ ಒಂಟಿ ಜೋಡುಗಳು, ಒಬ್ಬಂಟಿಗರು, ಆತ್ಮೀಯರನ್ನು ಕಳೆದುಕೊಂಡವರು, ಕೆಲಸ ಕಳೆದುಕೊಂಡು ತಮ್ಮೂರುಗಳಿಗೆ ಗುಳೆ ಹೊರಟವರು– ಇವರೆಲ್ಲರೂ ಕಣ್ಣಿಗೆ ಹೆಚ್ಚುಹೆಚ್ಚಾಗಿ ಬೀಳತೊಡಗಿದರು. ಈ ಮಣ್ಣಿನಿಂದಾವೃತ್ತವಾದ ಶೂಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಅವುಗಳನ್ನು ಕೃತಿಗಳನ್ನಾಗಿಸಿದ್ದೇನೆ. ಬಳಸಿ ಸವೆದ, ತಾತ್ಕಾಲಿಕತೆಯನ್ನೇ ಮೈತುಂಬ ಹೊದ್ದುಕೊಂಡು ವಸ್ತುಗಳ ಮೂಲಕ ಇಂತಹ ನಶ್ವರತೆಯನ್ನು ಕಲೆಯ ಮೂಲಕ ನಿರೂಪಿಸಬೇಕೆನ್ನಿಸಿತು.’
ಸುರೇಖಾ, ಕಲಾವಿದೆ
ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳು ಮತ್ತವುಗಳನ್ನು ಅನುಭವಿಸುವ ಪ್ರಕ್ರಿಯೆಯಲ್ಲಿ ಕಳೆದುಹೋಗುವ ಏನೆಲ್ಲದಕ್ಕೂ ನಮ್ಮ ಸುತ್ತಮುತ್ತಲಿನ ಜಗತ್ತು ಹೇಗೆ ಸಾಕ್ಷಿಯಾಗುತ್ತದೆ ಎನ್ನುವುದಕ್ಕೆ ಕಲಾವಿದರ ಕಣ್ಣೇ ಬೇಕು. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕಲಾವಿದೆ ಸುರೇಖಾ ‘ಇಂದು ನಿನ್ನೆಗಿಂತ ವಾಸಿ’ (‘Today is better than yesterday) ಎಂಬ ದೃಶ್ಯಕಲಾ ಪ್ರದರ್ಶನ ಏರ್ಪಡಿಸಿದ್ದಾರೆ.
ಕಳೆದೆರಡು ವರ್ಷಗಳ ಲಾಕ್ಡೌನ್ ಅವಧಿಯಲ್ಲಿ ಉಂಟಾದ ತಲ್ಲಣಗಳನ್ನು ದೃಷ್ಯಾಕ್ಷರಗಳ ಮೂಲಕ ಸಂಗ್ರಹಿಸಿಕೊಂಡಿದ್ದ ದಿನಚರಿಯನ್ನೇ ಅವರಿಲ್ಲಿ ಪ್ರಸ್ತುಪಡಿಸಿದ್ದಾರೆ. ‘ಮನುಷ್ಯನ ಸ್ಪರ್ಷರಾಹಿತ್ಯ’ ಕ್ಷಣ ಭಂಗುರದ ದರ್ಶನ ಮಾಡಿಸಿದ, ಈ ಹಿಂದಿನ ತತ್ಕ್ಷಣದ ಕಾಲಘಟ್ಟದ ಅಸಂಗತ ಅನುಭವಗಳ ಸುತ್ತ ಹಬ್ಬಿರುವ ದೃಶ್ಯಹೆಣಿಗೆಯ ಯತ್ನ ಈ ಪ್ರದರ್ಶನದ ಕಲಾಕೃತಿಗಳಲ್ಲಿವೆ. ಕಂಡುಕೊಂಡಂತಹ (ಫೌಂಡ್) ವಸ್ತುಗಳು, ವಿಡಿಯೋಗಳು, ಛಾಯಾಚಿತ್ರಗಳು ಮತ್ತು ಪಠ್ಯಗಳ ಒಟ್ಟಾರೆ ವೈವಿಧ್ಯಮಯ ಮಾಧ್ಯಮಗಳ ಸಮ್ಮಿಶ್ರಣದ ಅಭಿವ್ಯಕ್ತಿ ಇಲ್ಲಿದೆ.
ಈ ಪ್ರದರ್ಶನದ ಮುಖ್ಯ ಕೃತಿಗಳ ಸಾರ : ‘ಕಳೆದ ಜೋಡಿ’ (The last pair)
ಬಳಸಿ ಬಿಸಾಡಲಾದ ಕಟ್ಟಡದ ಕೆಲಸಗಾರರಿಗೆ ಸೇರಿದ ಸುಮಾರು ಎರಡು ಸಾವಿರ ರದ್ದಿ ಬೂಟುಗಳ ಒಂದು ಇನ್ಸ್ಟಾಲ್ಲೇಷನ್, ಮುಗಿದು ಹೋದ ಕ್ರಿಯೆಯ, ನೆಲೆ ಕಂಡುಕೊಳ್ಳಲು ತೊರೆದು ಹೋದ ಕಾಯಕದ ಅಸ್ತ್ರಗಳು ಎನ್ನಿಸಿಬಿಡುತ್ತವೆ. ಒಂದು ಕಾಲಘಟ್ಟದ ಕ್ರಿಯೆಯೊಂದಕ್ಕೆ ಒಂದು ನಿರ್ದಿಷ್ಟ ಸಾಮಾಜಿಕ ವರ್ಗದ ಜನರು ಪ್ರತಿಕ್ರಿಯಿಸಿದ ಹೆಜ್ಜೆ ಗುರುತುಗಳೇ ಈ ಬೂಟುಗುಡ್ಡ. ‘ಇದೇ ಜಗತ್ತಿನ ಕೊನೆಯೇನಲ್ಲ’, (2021ರಲ್ಲಿ ಸಂಗ್ರಹಿಸಿ ಸೃಷ್ಟಿಸಲಾದ ‘ಪಠ್ಯ – ಮೊಂತಾಜ್’ ಎಂಬ ಕೃತಿಯಲ್ಲಿ ಕಳೆದೆರಡು ವರ್ಷಗಳ ಪಿಡುಗಿನ ಸಮಯದಲ್ಲಿ ಸುದ್ದಿ ಮಾಧ್ಯಮಗಳು ಪ್ರಕಟಿಸಿದ ಪಠ್ಯ, ಶೀರ್ಷಿಕೆ ಹಾಗೂ ಪದಗಳನ್ನು ಸೃಜನಶೀಲವಾಗಿ ಬಳಸಿಕೊಳ್ಳಲಾಗಿದೆ. ಈ ಚಿತ್ರ ಸರಣಿಯ ಕೇಂದ್ರದಲ್ಲಿ ಇರುವುದು ‘ಸ್ಪರ್ಶ’ದ ಕುರಿತಾದ ದೃಶ್ಯವ್ಯಾಖ್ಯಾನ.
ಇಲ್ಲಿ ಒಳಗೊಂಡ ಪದಗಳಿಗೆ ಕೊಲ್ಯಾಜ್ ಗುಣವಿದ್ದರೂ ವಲಸೆ, ಸ್ಪರ್ಶ, ಸಾಮಾಜಿಕ ಅಂತರಗಳ ನಡುವಣ ವಿನಿಮಯಗಳ ಅಭಿವ್ಯಕ್ತಿಯೂ ಇದೆ. ಇಲ್ಲಿ ಕಾಲವೆಂಬುದೇ ಉಸಿರುಗಟ್ಟಿಸಿಕೊಂಡಿತೇನೋ ಎನ್ನಿಸದಿರದು. ಅಷ್ಟೇ ಅಲ್ಲದೆ, ಇತರೆ ಮಾನವ ಜೀವನಾಡಿಯಾದ ಆರ್ಥಿಕತೆ, ರಾಜಕಾರಣ, ಬೌದ್ಧಿಕ ಚಿಂತನಾಧಾರೆಗಳೂ ಸಹ ಉಸಿರುಗಟ್ಟಿಸುವಂತೆ ಆಗಿಹೋಗಿರುವುದು ಈ ಪಠ್ಯ-ಕೃತಿಗಳ ಮೂಲ ವಿಷಯವಾಗಿದೆ. ಉಸಿರು ಅಥವಾ ಉಸಿರುಗಟ್ಟಿಸುವಿಕೆಯನ್ನು ಮನುಕುಲ ಒಟ್ಟಾರೆಯಾಗಿ, ಇಷ್ಟು ಹತ್ತಿರದಿಂದ, ಉಸಿರು ಬಿಗಿಹಿಡಿದು ಗಮನಿಸುವುದು ಐತಿಹಾಸಿಕವಾಗಿ ಅಪರೂಪವಾದ ಒಂದು ಯೋಗ. ಈ ಪಠ್ಯಗಳು ಇಂತಹ ಅನುಭವಗಳನ್ನು ಸುದ್ದಿ ಮಾಧ್ಯಮವು ವಿಶೇಷವಾಗಿ ಗಮನಿಸಿದ ರೀತಿಯ ಕಡೆಗೆ ಕಲಾತ್ಮಕವಾಗಿ ಕಣ್ಹಾಯಿಸುತ್ತದೆ. ‘ಇರುವೆ ಕಥೆಗಳು’ ಒಂದು ಚಾನೆಲ್ ವಿಡಿಯೋ ಆಗಿದ್ದು, ಹತ್ತು ಹಲವು ವಿಡಿಯೋಗಳನ್ನು ದಿನವಹಿ ಪುನರಾವರ್ತನೆಯ ಲೋಪಿನಲ್ಲಿ ಹೇಗೆ ಬಿತ್ತರಿಸುತ್ತದೆ ಎನ್ನುವುದನ್ನು ನೋಡಬಹುದು. ಈಗಷ್ಟೇ ಹಿಡಿತಕ್ಕೆ ಸಿಗುತ್ತಿರುವ ಪಿಡುಗಿನ ಸಮಯದಲ್ಲಿ, ಈ ಕಲಾವಿದೆ ದೈನಂದಿನ ಓಡಾಟದ ಸಮಯದಲ್ಲಿ ಇರುವೆಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳ ನಡೆವಳಿಕೆಯನ್ನು ಮಾನವ ಸಂಬಂಧಗಳಿಗೆ ರೂಪಕವಾಗಿ, ದಾಖಲಿಸಿದ ವಿಡಿಯೋಗಳ ಗುಚ್ಛ ಇದಾಗಿದೆ.
ಮರದಚ್ಚು ಮಾಧ್ಯಮದ ಶೀರ್ಷಿಕೆಗಳು ಇರುವ ಅಸಲಿ ಮರದಚ್ಚು, ಸಂಕ್ರಮಣ ಕಾಲಘಟ್ಟದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬೀದಿಬೀದಿಗಳಲ್ಲಿಯೂ ಇರಿಸಲಾಗಿದ್ದ, ಕೈಗೆ ಸಿಕ್ಕ ವಸ್ತುಗಳಿಂದ ಅಡೆತಡೆಗಳನ್ನು ಒಡ್ಡಿದ್ದ ಪ್ರತಿಷ್ಠಾಪನೆಯ ಛಾಯಾಚಿತ್ರ ಸರಣಿ; ಮತ್ತು ಈ ಕಾಲಘಟ್ಟದಲ್ಲಿ ನಡೆದುಹೋದ ಅನೇಕ ಮಾನವೀಯ, ಹಿಂಸಾತ್ಮಕ ವರದಿಗಳ ಶೀರ್ಷಿಕೆಗಳನ್ನು ಮರುಸೃಷ್ಟಿಸಲಾಗಿದೆ; ‘ಮಳೆಯಾಗಲಿ, ಬಿಸಿಲಾಗಲಿ ಅವರುಗಳಿಗೆ ಮನೆ ಸೇರಬೇಕು ಅಷ್ಟೇ’. ‘ಕೆಲಸವಿಲ್ಲ, ದುಡಿಯಲು ಅವಕಾಶವಿಲ್ಲ’. ‘ಬೀದಿಬದಿಯ ಸ್ಟಾಲ್ಗಳಲ್ಲಿ ಚಹಾ ಕುಡಿಯಲು ಜನ ಹೆದರುತ್ತಾರೆ’ ಇತ್ಯಾದಿ…
ದೃಶ್ಯಕಲಾ ಪ್ರದರ್ಶನ : ‘ಇಂದು ನಿನ್ನೆಗಿಂತ ವಾಸಿ’ ದೃಶ್ಯಕಲಾ ಪ್ರದರ್ಶನ:
ಗ್ಯಾಲರಿ : ‘ನಂ.1ಶಾಂತಿರಸ್ತೆ’ ಶಾಂತಿನಗರ, ಬೆಂಗಳೂರು
ಸಮಯ: ಬೆಳಿಗ್ಗೆ 11ರಿಂದ ಸಂಜೆ 7ರ ವರೆಗೆ.
ದಿನಾಂಕ : ಮೇ 17ರಿಂದ ಮೇ 24ರವರೆಗೆ.
*
ಗಮನಿಸಿ : ದೃಶ್ಯಕಲೆ, ಚಿತ್ರಕಲಾ ಪ್ರದರ್ಶನಕ್ಕೆ ಸಂಬಂಧಿಸಿದ ಬರಹ, ಲೇಖನ, ಸಂದರ್ಶನಗಳನ್ನು ಇಲ್ಲಿ ಪ್ರಕಟಿಸಲಾಗುವುದು. ಪ್ರದರ್ಶನ ಒಂದು ವಾರವಿರುವಾಗ ಸಂಬಂಧಿಸಿದ ವಿವರಗಳನ್ನು ಕಳುಹಿಸಿ. tv9kannadadigital@gmail.com