ಆಧುನಿಕ ಶಕುಂತಲಾ ಕಥನ | Adhunika Shakuntala Kathana
ಅಂಕಣ 11
ಕೊನೆಗೂ ಪದವಿಯ ನಂತರ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂಬ ನನ್ನ ತೀವ್ರ ಆಸೆ ಫಲಿಸಿತು. ನಾನು ಈಗ ಸಂತೋಷದಿಂದ ದಕ್ಷಿಣ ಭಾರತದಲ್ಲೇ ಶ್ರೇಷ್ಠವಾದ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್ಸಿ ಓದಲಾರಂಭಿಸಿದೆ. ಇದು ನನ್ನ ಜೀವನದ ಬಹು ಹೆಮ್ಮೆಯ ಹಂತವಾಗಿತ್ತು. ಈ ಹೆಮ್ಮೆಯನ್ನು ನನ್ನಂಥಯೇ ಇನ್ನೂ ಹತ್ತು ಹುಡುಗಿಯರು ಮತ್ತು ಆರು ಹುಡುಗರು . ಅನುಭವಿಸಿದರು. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಸಹ-ಶಿಕ್ಷಣದ ವಾತಾವರಣದಲ್ಲಿ ಓದುತ್ತಿದ್ದೆ.
ಶೀಘ್ರದಲ್ಲೇ ಹುಡುಗಿಯರದು ಎರಡು ಗುಂಪುಗಳಾದೆವು, ಮಹಾರಾಣಿ ಕಾಲೇಜಿನಿಂದ ಬಂದ ಕನ್ನಡ ಮಾತನಾಡುವ ನಾನು, ಕತ್ರೆ ಶಕುಂತಲಾ, ಭಾಗ್ಯ, ಲೀಲಾವತಿ ಮತ್ತು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ನಾಗವೇಣಿ ಶೆಟ್ಟಿ ಒಂದು ಗುಂಪು ಇದರಲ್ಲಿ . ಕತ್ರೆ, ಭಾಗ್ಯ ಮತ್ತು ನಾಗವೇಣಿಯನ್ನು ಹೊರತುಪಡಿಸಿದರೆ ಉಳಿದ ಮೂವರು ಮಧ್ಯಮ ವರ್ಗದ ಕುಟುಂಬದವರು.
ವಾಸ್ತವವಾಗಿ ಭಾಗ್ಯ ಅವರು ಬೆಂಗಳೂರಿನ ಅತಿ ದೊಡ್ಡ ಶ್ರೀಮಂತ ಕುಟುಂಬಕ್ಕೆ ಸೇರಿದ್ದರೂ ತುಂಬಾ ಸರಳ ಮತ್ತು ಸಜ್ಜನ ಸ್ವಭಾವದ ಹುಡುಗಿ. ಆಶಾ ರಾಣಿ ಬಾದಾಮಿ ಮತ್ತು ಪದ್ಮಿನಿ ಮಹಾರಾಣಿ ಕಾಲೇಜಿನವರಾದರೂ ಅವರು ಕಾರ್ಮೆಲೈಟ್ ಪದವಿಧರೆಯರಾದ ಅರುಣಾ ಭಂಡಾರ್ಕರ್, ಲಾವಣ್ಯ ಮತ್ತು ತಾರಾ ಅವರ ಗುಂಪನ್ನು ಸೇರಿಕೊಂಡರು. ಮಲ್ಲೇಶ್ವರಂ ಬಾಲಕಿಯರ ಪ್ರೌಢಶಾಲೆಯಿಂದ ಬಿ.ಎಸ್ಸಿಯ ವರೆಗೆ ಐದು ವರ್ಷಗಳ ಕಾಲ ನನ್ನ ಸಹಪಾಠಿಯಾಗಿದ್ದ ಪಾರ್ವತಿ ಎರಡೂ ಗುಂಪುಗಳಿಗೆ ಸೇರಲಿಲ್ಲ .
ಅವಳು ತರಗತಿಗಳಿಗೆ ಹಾಜರಾಗಿ, ತರಗತಿಯ ನಂತರ ಯಾರೊಂದಿಗೂ ಮಾತನಾಡದೆ ಕಣ್ಮರೆಯಾಗುತಿದ್ದಳು. ಹುಡುಗರಲ್ಲಿ ನಾಲ್ವರು ಸೇಂಟ್ ಜೋಸೆಫ್ಸ್ (ಬೆಂಗಳೂರು), ಒಬ್ಬರು ಸೇಂಟ್ ಅಲೋಶಿ ಯಸ್ (ಮಂಗಳೂರು) ಮತ್ತು ಒಬ್ಬ ಹುಡುಗ ಆಂಧ್ರಪ್ರದೇಶದಿಂದ ಬಂದವರಾಗಿದ್ದರು., ಅವರ ಸ್ಟೈಲ್ ಭರಿತ ಇಂಗ್ಲಿಷ್, ಕಾನ್ವೆಂಟ್ ಶಿಕ್ಷಣ ಮತ್ತು ಶ್ರೀಮಂತ ಕುಟುಂಬಗಳ ಕಾರಣದಿಂದಾಗಿ ಶ್ರೇಷ್ಠತೆಯ ಒಂದು ಹೊದಿಕೆ ಕಾರ್ಮಾಲೈಟ್ ಗುಂಪನ್ನು ಆವರಿಸಿತ್ತು .
ನಮ್ಮ ಗುಂಪಿನಲ್ಲಿ, ಕತ್ರೆ ಅತ್ಯಂತ ಪ್ರಬಲ ಸ್ವಭಾವದವರಾಗಿದ್ದು , ಆಕೆ ಕಠಿಣ ಪರಿಶ್ರಮದ , ಸಾಕಷ್ಟು ಬುದ್ಧಿವಂತಳಾದ ಮತ್ತು ಅತಿ ಸುಂದರಳಾದ ಮಹಿಳೆ. ಆಕೆ ಮಹಾರಾಣಿ ಕಾಲೇಜಿನಲ್ಲಿ ಎರಡು ವರ್ಷ ನನ್ನ ಸೀನಿಯರ್. ತನ್ನ ಚೆಂದದ ಮುಖ , ಹಾಲು ಬಿಳಿ ಮೈಬಣ್ಣ ಮತ್ತು ನಾಯಕತ್ವದ ಗುಣಗಳಿಂದ ಆಕೆ ಮಹಾರಾಣಿ ಕಾಲೇಜಿನ ರಾಣಿಯಾಗಿದ್ದಳು..ಪದವಿಯ ನಂತರ, ಅವಳು ಮದುವೆಯಾಗಿ , ಶೀಘ್ರವಾಗಿ ಎರಡು ಮಕ್ಕಳನ್ನು ಹಡೆದು ಎರಡು ವರ್ಷಗಳಾದ ಮೇಲೆ ಈಗ M.Sc ಗೆ ಸೇರಿಕೊಂಡಿದ್ದಳು.
ಮದುವೆ ಮತ್ತು ಮಕ್ಕಳ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸುವ ಅವಳ ಉತ್ಸಾಹ, ಪ್ರಬಲ ಸ್ವಭಾವ, ಚೆಲುವು ಅವಳು ನಮ್ಮ ಬ್ಯಾಚ್‌ನಲ್ಲಿ ಹೆಚ್ಚು ಗಮನ ಸೆಳೆಯುವ ವಿದ್ಯಾರ್ಥಿನಿ ಯನ್ನಾಗಿಸಿದ್ದವು.
ಹುಡುಗಿಯರು ಸಂಖ್ಯೆಯಲ್ಲಿ ಹುಡುಗರಿಗಿಂತ ಹೆಚ್ಚಿಗಿದ್ದರಲ್ಲದೆ ಅಂಕಗಳನ್ನು ಗಳಿಸುವಲ್ಲಿಯೂ ಹುಡುಗರಿಗಿಂತ ಮುಂದಿದ್ದರು. ಹುಡುಗರು ಮತ್ತು ಹುಡುಗಿಯರು ಪ್ರತ್ಯೇಕವಾಗಿ ಕುಳಿತಿರುತ್ತಿದ್ದೆವು. ನಾನು ತುಂಬಾ ಹೋರಾಟದ ನಂತರ ನನ್ನ ಪಿಜಿ ಸೀಟ್ ಪಡೆದ ಕಾರಣ ಅಧ್ಯಯನದಲ್ಲಿಯೂ ಉತ್ತಮ ಎಂದು ಸಾಬೀತುಪಡಿಸಬೇಕಾಗಿತ್ತು. ಇದು ನನಗೆ ಕಷ್ಟವಾಗಲಿಲ್ಲ,
ಸೆಂಟ್ರಲ್ ಕಾಲೇಜಿನಲ್ಲಿ ಹ್ಯುಮಾನಿಟೀಸ್‌ನಲ್ಲಿ ಹುಡುಗ-ಹುಡುಗಿಯರ ಒಂದಿಷ್ಟು ಸ್ನೇಹದಿಂದಿದ್ದರೂ, ಜೀವಶಾಸ್ತ್ರ ವಿಭಾಗದಲ್ಲಿ ಅಂತಹ ಸಲುಗೆಯನ್ನು ಹಿರಿಯ ಉಪನ್ಯಾಸಕರು ವಿರೋಧಿಸುತಿದ್ದರು. ಉಪನ್ಯಾಸಕರ ಹುದ್ದೆಗೆ ಆಯ್ಕೆಗೆ ಅನರ್ಹವಾಗಿದ್ದ ಎಂ.ಎಸ್ಸಿಯಲ್ಲಿ ಮೂರನೇ ತರಗತಿ ಮಂಜೂರು ಮಾಡಿ ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸುತ್ತಾರೆ ಎಂದು ನಮ್ಮ ಸೀನಿಯರ್ ವಿದ್ಯಾರ್ಥಿಗಳು ಹೆದರಿಸಿದರು.
ಹಾಗಾಗಿ ಹುಡುಗರು ಸೇರಿದಂತೆ ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರುತ್ತಿದ್ದೆವು. ನಾವು ಕೇವಲ ಹುಡುಗಿಯರದೆ ಎರಡು ಗುಂಪುಗಳಾದೆವು. ಅನಿವಾರ್ಯವಿಲ್ಲದಿದ್ದರೆ ಹುಡುಗರೊಂದಿಗೆ ಎಂದಿಗೂ ಮಾತನಾಡುತ್ತಿರಲಿಲ್ಲ
ನನ್ನ M.Sc ಗಾಗಿ ನಾನು ಸಾಧ್ಯವಿರುವಷ್ಟು ಹಣವನ್ನು ಉಳಿಸಲು, ಗಳಿಸಲು ಎಲ್ಲೆಲ್ಲಿ ಸಾಧ್ಯವೂ ಅಲ್ಲಿಂದೆಲ್ಲ ಪ್ರಯತ್ನಿಸಿದೆ. ಸ್ನಾತಕೋತ್ತರ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೊದಲೇ ಕೇಂದ್ರ ಸರ್ಕಾರದಲ್ಲಿ ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ ಎಂಬ ಯೋಜನೆ (National Loan scholarship) ಇದೆ ಎಂದು ನನಗೆ ತಿಳಿದಿತ್ತು. ಬೇರೆ ಯಾವುದೇ ವಿದ್ಯಾರ್ಥಿ ನೆರವು ಪಡೆಯದ ಮೆರಿಟ್ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತಿತ್ತು .
ಮೊತ್ತವು ಶುಲ್ಕಗಳು ಕಟ್ಟಲು, ಬೇಕಾದ ಪುಸ್ತಕಗಳನ್ನು ಕೊಳ್ಳಲು ಸಾಕಾಗುತ್ತಿತ್ತು ವಿದ್ಯಾರ್ಥಿಯು ಓದು ಮುಗಿದು, ಉದ್ಯೋಗವನ್ನು ಪಡೆದ ನಂತರ ಸುಲಭವಾದ ಕಂತುಗಳಲ್ಲಿ ಈ ಸಾಲವನ್ನು ಪಾವತಿಸಬೇಕಾಗಿತ್ತು. ಯಾವುದೇ ತೊಂದರೆಯಿಲ್ಲದೆ ಈ ವಿದ್ಯಾರ್ಥಿವೇತನವನ್ನು ನಾನು ಪಡೆದುಕೊಂಡೆ ಈ ಮೊತ್ತವನ್ನುಬ್ಯಾಂಕಿನಲ್ಲಿ ಹಾಕಿ ಎರಡನೇ ವರ್ಷದ . ಮದ್ರಾಸ್ (ಚೆನ್ನೈ), ಮಹಾಬಲಿಪುರಂ ಮತ್ತು ರಾಮೇಶ್ವರಂ (ಪಂಬನ್ ಸೇತುವೆಯ ಅಡಿಯಲ್ಲಿ) ಪೂರ್ವ ಕರಾವಳಿಯ ಕಡಲತೀರಗಳಲ್ಲಿ ತಮ್ಮ ನೈಸರ್ಗಿಕ ಆವಾಸಸ್ಥಾನಗಳಲ್ಲಿ ವಾಸಿಸುವ ಸಮುದ್ರ ಪ್ರಾಣಿಗಳನ್ನು ಅಧ್ಯಯನ ಮಾಡಲು ಕೈಗೊಳ್ಳುವ ಶಿಕ್ಷಣ ಪ್ರವಾಸಕ್ಕಾಗಿ ಎತ್ತಿಟ್ಟುಕೊಂಡೆ.
ಮೂರು ವಾರದ ಪ್ರವಾಸಕ್ಕೆ ಸುಮಾರು ಒಂದು ಸಾವಿರ ರೂಪಾಯಿ ಖರ್ಚಾಯಿತು. ಪಠ್ಯ ಪುಸ್ತಕಗಳ ಅಗತ್ಯ ನನಗಿರಲಿಲ್ಲ. ಏಕೆಂದರೆ ತರಗತಿಯಲ್ಲಿ ಬರೆದುಕೊಂಡ ಟಿಪ್ಪಣಿಗಳು ಮತ್ತು ಗ್ರಂಥಾಲಯದಲ್ಲಿನ ಪುಸ್ತಕಗಳು ಸಾಕಾಗಿತ್ತು .
ಒಂದು ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಬೆಂಗಳೂರು ವಿಶ್ವವಿದ್ಯಾನಿಲಯವು ನೀಡುವ ವಿಷಯ ವಿದ್ಯಾರ್ಥಿವೇತನ ನನಗೆ ಎರಡನೇ M.Sc ಯಲ್ಲಿ ದಕ್ಕಿತು.ತಕ್ಷಣವೇ ನನ್ನ ಸಾಲದ ವಿದ್ಯಾರ್ಥಿವೇತನವನ್ನು ನಿಲ್ಲಿಸಿದೆ. ಹಾಗಾಗಿ ಎರಡೂ ವರ್ಷ ಎಂ.ಎಸ್ಸಿ. ಯಾವುದೇ ರೀತಿಯಲ್ಲಿ ಆರ್ಥಿಕ ಹೊರೆಯಾಗಲಿಲ್ಲ.
ಕನ್ನಿಂಗ್‌ಹ್ಯಾಮ್ ಮತ್ತು ಮಿಲ್ಲರ್ಸ್ ರಸ್ಥೆಯ ಜಂಕ್ಷನ್‌ನಲ್ಲಿ ತನ್ನ ಸಹೋದರಿಯೊಂದಿಗೆ ಉಳಿದುಕೊಂಡಿದ್ದ ನಾಗವೇಣಿ ಶೆಟ್ಟಿ ಜೊತೆ ನಡೆದುಕೊಂಡು ಬಂದು,ಅಲ್ಲಿಂದ ಮುಂದುವರಿದು ಸೆಂಟ್ರಲ್ ಕಾಲೇಜಿಗೆ ನಡೆದುಕೊಂಡು ಹೋಗುವ ಮೂಲಕ ಬಸ್ ದರವನ್ನು ಉಳಿಸಿಕೊಂಡೆ. ಈ ವಾಕಿಂಗ್ ನಮ್ಮನ್ನು ಹತ್ತಿರ ತಂದಿತು ಮತ್ತು ಪರೀಕ್ಷೆಯ ಸಮಯದಲ್ಲಿ ನಾನು ಅವಳ ಮನೆಯಲ್ಲಿ ಜೊತೆ ಜೊತೆಯಾಗಿ ಅಧ್ಯಯನ ಮಾಡಿದೆ.
ಅವರ ಸಹೋದರಿ ಸೊಗಸಾದ ಸುಂದರ ಮಹಿಳೆ, ಅತ್ಯುತ್ತಮ ಅತಿಥಿತೇಯೆಳು ಮತ್ತು ನಮ್ಮ ಅಧ್ಯಯನದ ಸಮಯದಲ್ಲಿ ದಕ್ಷಿಣ ಕನ್ನಡದ ಅದರಲ್ಲೂ ಬಂಟರ ತಿಂಡಿ ತಿನಸುಗಳನ್ನುಗಳನ್ನು ತಿನ್ನಿಸುತ್ತಿದ್ದರು.
ಸೆಂಟ್ರಲ್ ಕಾಲೇಜಿನ ಎರಡು ವರ್ಷಗಳ ಸ್ನಾತಕೋತ್ತರ ಅಧ್ಯಯನ ಕಾಲದಲ್ಲಿ ಯಾವುದೇ ಮರೆಯಲಾಗದಂತಹ ಘಟನೆಗಳಿರಲಿ ಲ್ಲ. ಆದರೆ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು, ನೈಸರ್ಗಿಕ ವಿಜ್ಞಾನ ಬ್ಲಾಕ್‌ನ ಸಂಪೂರ್ಣ ನೆಲ ಮಹಡಿ ಮತ್ತು ಮೊದಲ ಮಹಡಿ ನಮಗೆ ಅಂದರೆ ಪ್ರಾಣಿ ಶಾಸ್ತ್ರ ವಿಭಾಗಕ್ಕೆ ಸೇರಿದ್ದು, ಒಂದುತರಹದ ನಮ್ಮದು ಇದು ಎಂಬ ಭಾವವನ್ನು ಹುಟ್ಟಿಸಿತ್ತು .
ಸೆಂಟ್ರಲ್ ಕಾಲೇಜಿನ ಕೊನೆಯ ತುದಿಯಲ್ಲಿರುವ ಜೀವಶಾಸ್ತ್ರದ ಕಟ್ಟಡದ ವಾಸ್ತುಶಿಲ್ಪವು ಆ ಕಾಲೇಜಿನ ಹಳೆಯ ಬ್ರಿಟಿಷ್ ಮಾದರಿಯ ಕಟ್ಟಡಗಳಿಗಿಂತ ಭಿನ್ನವಾಗಿತ್ತು. ಇದು ಒಂದು ಕಲ್ಲಿನ, U ಆಕಾರದ ಕಟ್ಟಡವಾಗಿದ್ದು, ತಮಾಷೆ ಎಂದರೆ ಅದರ ಹೊರಗೋಡೆಯು ಸುಮಾರು ನಾಲ್ಕು ಅಡಿ ಕಲ್ಲು-ಸಿಮೆಂಟ್ ಗೋಡೆಯಗಿದ್ದು , ಉಳಿದ ಮೇಲ್ಭಾಗವು ಸ್ಟೀಲ್ ಗ್ರಿಲ್ ಗಳಿಂದ ಕಟ್ಟಲ್ಪಟ್ಟಿತ್ತು .
ಒಮ್ಮೆ ಮುಖ್ಯದ್ವಾರ ಮುಚ್ಚಿದರೆ ಜೈಲಿನಂತಿರು ತಿತ್ತು. ಇದು ಸೆಂಟ್ರಲ್ ಕಾಲೇಜಿನ ಮುಖ್ಯ ಕ್ಯಾಂಪಸ್‌ನಿಂದ ಸಾಕಷ್ಟು ಪ್ರತ್ಯೇಕವಾಗತ್ತು. ಬಹುಶಃ ಈ ಕಾರಣಕ್ಕಾಗಿ ನಾವು ಕಾಲೇಜಿನ ಮುಖ್ಯವಾಹಿನಿಯ ವಿದ್ಯಾರ್ಥಿಗಳೊಂದಿಗೆ ಎಂದಿಗೂ ಬೆರೆಯಲಿಲ್ಲ. ಹ್ಯುಮಾನಿಟೀಸ್ ವಿದ್ಯಾರ್ಥಿಗಳಂತೆ ಎಂದಿಗೂ ಕ್ಯಾಂಟೀನ್‌ಗೆ ಹೋಗಲಿಲ್ಲ ಅಥವಾ ಕ್ಲಾಕ್ ಟವರ್ ಕಟ್ಟಡದ ಮುಂಭಾಗದ ಉದ್ಯಾನವನದಲ್ಲಿ ಮಾತನಾಡುತ್ತಾ ಸಮಯ ಕಳೆಯಲಿಲ್ಲ.
ನಮ್ಮಲ್ಲಿ ಹೆಚ್ಚಿನವರು ಅಧ್ಯಯನದ ಬಗ್ಗೆ ಗಂಭೀರವಾಗಿದ್ದೆವು.. ನಾವು ಎಂದಿಗೂ ತರಗತಿಗಳನ್ನು ತಪ್ಪಿಸಿಕೊಳ್ಳಲಿಲ್ಲ, ತರಗತಿಗಳಲ್ಲಿ ಹೆಚ್ಚು ಗಮನ ಹರಿಸಿ ಪಾಠ ಕೇಳುತ್ತಿದ್ದೆವು . ಸುತ್ತ ಮುತ್ತ ಇದ್ದ ಯತೆಚ್ಚ ಚಿತ್ರಮಂದಿರಗಳಿಗೆ ಅಥವಾ ಹೋಟೆಲ್‌ಗಳಿಗೆ ಎಂದಿಗೂ ಹೋಗಲಿಲ್ಲ.
ಎರಡು ವರ್ಷಗಳ ನಂತರ ಉಪನ್ಯಾಸಕ ಹುದ್ದೆ ಗುರಿಯಾಗಿರುವುದರಿಂದ ಈ ವಿಷಯಗಳು ಮುಖ್ಯವಾಗಲಿಲ್ಲ. ನಾವು ಜೂನಿಯರ್ M.Sc ನಲ್ಲಿ ಸಾಮಾನ್ಯ ಕೋರ್ಸ್‌ಗಳನ್ನು ಅಧ್ಯಯನ ಮಾಡಿದ್ದೇವು. ಅವುಗಳೆಂದರೆ ಸಿಸ್ಟಮ್ಯಾಟಿಕ್ಸ್, ಹಾರ್ಡ್ ಮತ್ತು ಸಾಫ್ಟ್ ಅನ್ಯಾಟಮಿ, ಸೈಟೋಲಜಿ, ಇಕಾಲಜಿ, ಶರೀರಕ್ರಿಯ ಶಾಸ್ತ್ರ ಮತ್ತು ಬ್ರೂಣ ಶಾಸ್ತ್ರ ಬಯೋಕೆಮಿಸ್ಟ್ರಿ, ಬಯೋಫಿಸಿಕ್ಸ್, ಬಯೋಸ್ಟಾಟಿಸ್ಟಿಕ್ಸ್ ವಿಷಯಗಳನ್ನು ಸೀನಿಯರ್ ಎಂ.ಎಸ್ಸಿ.ಯಲ್ಲಿ ಓಡಿದೆವು. ಹಿಂತಿರುಗಿ ನೋಡಿದಾಗ ಡಾ.ಪಾಟೀಲ್ ಅವರ ಸೈಟೋಲಜಿ ತರಗತಿಗಳನ್ನು ಮರೆಯಲು ಸಾಧ್ಯವೇ ಇಲ್ಲ.
ವಿಷಯ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಅವರ ಪಾಂಡಿತ್ಯ ಅದ್ಭುತವಾಗಿತ್ತು. ಅವರು ತಮ್ಮ ಉಪನ್ಯಾಸಗಳನ್ನು ನಿಖರವಾಗಿ ಒಂದು ಗಂಟೆ ಕಾಲ niiduthiದ್ದರು . ಆ ಅರವತ್ತು ನಿಮಿಷಗಳಲ್ಲಿ ಅವರು ನಮ್ಮ ಮೆದುಳಿಗೆ ಜೀವ ಕೋಶ ರಚನೆ ಯಿಂದ ಹಿಡಿದು ನೊಬೆಲ್ ಪ್ರಶಸ್ತಿ ಗಳಿಸಿದ ಜೀನ್‌ಗಳಲ್ಲಿನ ಡಿಎನ್‌ಎಯ ಡಬಲ್ ಹೆಲಿಕ್ಸ್‌ನ ಸಂಶೋಧನೆಯವರೆಗೆ ಜ್ಞಾನವನ್ನು ತುಂಬಿದರು.
ಅವರು ಎಂದಿಗೂ ಒಂದು ಸೆಕೆಂಡ್ ಅನ್ನು ವ್ಯರ್ಥ ಮಾಡಲಿಲ್ಲ ಅಥವಾ ವಿದ್ಯಾರ್ಥಿಗಳೊಂದಿಗೆ ಯಾವುದೇ ಮಾತುಕತೆಯಲ್ಲಿ ತೊಡಗಲಿಲ್ಲ. ಯಾವಾಗಲೂ ಮುಗುಳು ನಗುತ್ತಿದ್ದ , ಡಾ.ಕದಂ ಅವರು ಪ್ರಾಣಿಗಳ ಆಂತರಿಕ ಅಂಗರಚನಾಶಾಸ್ತ್ರವನ್ನು ಎಷ್ಟು ವಿಸ್ತಾರವಾಗಿ ಮತ್ತು ತುಂಬಾ ಮಧುರವಾಗಿ ವಿವರಿಸುತ್ತಿದ್ದರೆಂದರೆ , ಮಧ್ಯವಾರ್ಷಿಕ ಪರೀಕ್ಷೆಗಳು ಬಂದಾಗ ಅವರು ಪಠ್ಯಕ್ರಮದ ಕಾಲು ಭಾಗವನ್ನು ಮಾತ್ರ ಮುಗಿಸಿದ್ದರು. ಡಾ.ಪಾರ್ಥಸಾರಥಿ ಅವರು ಪ್ರತಿಭಾವಂತ ಉಪನ್ಯಾಸಕರಾಗಿದ್ದರು. ಅವರು ಪರಿಸರ ವಿಜ್ಞಾನವನ್ನು ಕಲಿಸಿದಾಗ ಎಲ್ಲ ಮೇಧಾವಿಗಳಂತೆ, ಅವರು ಹೇಳುತ್ತಿರುವುದನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಮಾಜಿ ಸೈನಿಕ ಅಧಿಕಾರಿಯಾಗಿದ್ದ ಡಾ.ಶ್ರೀನಿವಾಸಾಚಾರ್ ಅವರು ತುಂಬಾ ಕ್ರಮಬದ್ದವಾಗಿ, ಎಲ್ಲೂ ಸಮಯ ವ್ಯರ್ಥ ಮಾಡದೆ ಸಮಯಕ್ಕೆ ಸರಿಯಾಗಿ ಪಠ್ಯಕ್ರಮಗಳನ್ನು ಮುಗಿಸಿದರು. ಬ್ರೂಣ ಶಾಸ್ತ್ರವನ್ನು ಡಾ.ರಾಮಕೃಷ್ಣ ಅಯ್ಯರ್ ಕಲಿಸಿದರು, ಅವರ ಮುಖದಲ್ಲಿದ್ದ ಶಾಶ್ವತವಾದ ಗಂಟು ಒಮ್ಮೆಯೂ ಮರೆಯಾಗಿದ್ದು ನಾನು ನೋಡಲೇ ಇಲ್ಲ. ಈಉಪನ್ಯಾಸಕರೆಲ್ಲ ಹಳೆಯ ಶೈಲಿಯವರಾಗಿದ್ದರು. ನಾವು ಸೀನಿಯರ್ M.Sc ಯಲ್ಲಿದ್ದಾಗ. ಡಾಕ್ಟರ್galaada ಕೃಷ್ಣ ಮೂರ್ತಿ, ಪಾಂಡಿಯನ್ ಮತ್ತು ನಯೀಮುನ್ನಿಸ ಅವರ ಪ್ರವೇಶದೊಂದಿಗೆ ಪ್ರಾಣಿಶಾಸ್ತ್ರ ವಿಭಾಗಕ್ಕೆ ಹೊಸ ರಕ್ತ ಸೇರಿತು.
ಈ ಮೂವರು ಪರಿಸರ ವಿಜ್ಞಾನ, ಶರೀರಕ್ರಿಯಾ ಶಾಸ್ತ್ರ, ಜೀವ ರಸಾಯನ ಶಾಸ್ತ್ರ , biophysics, biostatistics ಗಳನ್ನು ಕಲಿಸಿದರು. ಡಾ.ಪಾಂಡಿಯನ್ ಅವರಿಗೆ ಇಂಗ್ಲಿಷ್‌ನ ಮೇಲೆ ಉತ್ತಮ ಹಿಡಿತವಿದ್ದುದಲ್ಲದೆ , ಪರಿಸರ ವಿಜ್ಞಾನವನ್ನು ಬಹಳ ನಾಟಕೀಯವಾಗಿ ವಿವರಿಸುವಾಗ ಈ ನಾಟಕೀಯತೆಯು ವಿಚಿತ್ರ ಮತ್ತು ತಮಾಷೆಯಾಗಿ ಕಾಣುತಿತ್ತು
ನಾವು ಜೂನಿಯರ್ M.Sc ಯಲ್ಲಿ ಸರಳವಾದ ಪ್ರಾಣಿಯಿಂದ ಹಿಡಿದು ಹೆಚ್ಚು ವಿಕಾಸನ ಗೊಂಡ ಸಸ್ತನಿಗಳವರೆಗೆ ದೈಹಿಕ ರಚನೆಗಳನ್ನು ಅಧ್ಯಯನ ಮಾಡಿದ್ದೇವು. ಅದೇ ರೀತಿ ಶರೀರಕ್ರಿಯಾ ಶಾಸ್ತ್ರದಲ್ಲಿ ಒಂದೇ ಒಂದು ಜೀವಕೋಶದ ಅಮೀಬಾದಿಂದ ಮನುಷ್ಯರಿಗೆ ಶಾರೀರಿಕ ಪ್ರಕ್ರಿಯೆಗಳ ವಿಕಾಸವನ್ನು ದಿಗ್ಬ್ರಮೆಯಿಂದ ಎರಡನೆಯ M.Sc.ಯಲ್ಲಿ ಅರಿತುಕೊಂಡೆವು. ಪ್ರಾಣಿಶಾಸ್ತ್ರದ ಈ ವಿಭಾಗ ನನಗೆ ತುಂಬಾ ಆಕರ್ಷಕವಾಗಿಕಂಡಿತು.
ಈ ಜ್ಞಾನವು ಶರೀರಕ್ರಿಯಾ ಶಾಸ್ತ್ರ ಮತ್ತು ವೈದ್ಯಕೀಯದಲ್ಲಿ ನೋಬಲ್ ಪ್ರಶಸ್ತಿ ಪಡೆದ ಆವಿಷ್ಕಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಯಿತು. ಅಷ್ಟೇ ಅಲ್ಲ. ಇದು ನನ್ನಲ್ಲಿ ಸಂಶೋಧನೆಯಲ್ಲಿ ಆಸಕ್ತಿಯನ್ನು ಬಿತ್ತಿತು. ಶರೀರಕ್ರಿಯಾ ಶಾಸ್ತ್ರದ ತರಗತಿಗಳಲ್ಲಿ ನಾನು ಜೀವಿಯ ದೇಹದೊಳಗೆ ಸಂಭವಿಸುವ ಜೀವರಾಸಾಯನಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಿದೆ, ಇದು ವೈದ್ಯಕೀಯ ವಿಜ್ಞಾನಕ್ಕೆ ತುಂಬಾ ಹತ್ತಿರವಾಗಿರುವುದರಿಂದ ನನಗೆ ತುಂಬಾ ಮುದ ಕೊಡುತ್ತಿತ್ತು .
ಶರೀರಕ್ರಿಯಾ ಪ್ರಯೋಗಾಲಯದಲ್ಲಿ ಕಿಣ್ವದ ಪ್ರತಿಕ್ರಿಯೆಗಳು, ಅಂಗಾಂಗ, ಸೆಲ್ಯುಲಾರ್ ಮತ್ತು ಮೈಟೊಕಾಂಡ್ರಿಯದ ಮಟ್ಟದಲ್ಲಿ ಆಮ್ಲಜನಕದ ಬಳಕೆಯನ್ನು ಅಧ್ಯಯನ ಮಾಡುವುದು ಮನಸ್ಸಿಗೆ ಅಹ್ಲಾದ ಕರವಾಗಿತ್ತು . ಹಾಗಾಗಿ ನಾನು ಎರಡನೇಯ ಎಂ.ಎಸ್ಸಿಯಲ್ಲಿ ಪ್ರಾಣಿ ಶರೀರಕ್ರಿಯಾ ಶಾಸ್ತ್ರದಲ್ಲಿ ಪರಿಣತಿ ಹೊಂದಲು ನಿರ್ಧರಿಸಿದೆ ನನ್ನೊಂದಿಗೆ ಆಶಾ ಮತ್ತು ಅರುಣಾ ಸಹ ಈ ವಿಭಾಗಕ್ಕೆ ಬಂದರು. ಯಥಾ ಪ್ರಕಾರ ಮೂವರೂ ಅರುಣಾಳ ಮನೆಯಲ್ಲಿ combined studies. ಜೊತೆಗೆ ಸೊಗಸಾದ ಕೊಂಕಣಿ ಖಾದ್ಯಗಳು.
ನಾನು ಜೂನಿಯರ್ ಮತ್ತು ಸೀನಿಯರ್ ಎಂಎಸ್ಸಿ ಎರಡರಲ್ಲೂ ಉತ್ತಮ ಅಂಕ ಗಳಿಸಿ ಪ್ರಥಮ ದರ್ಜೆ ಪಡೆದೆ. ಸುಲಭವಾಗಿ ಉಪನ್ಯಾಸಕ ವೃತ್ತಿ ದೊರಕುತ್ತಿತ್ತು . ಆದರೆ ನಾನು ಸಂಶೋಧನೆಯಲ್ಲಿ ಉತ್ಸಾಹವನ್ನು ಬೆಳೆಸಿಕೊಂಡಿದ್ದೆ. ನನ್ನ ಸಹಪಾಠಿಗಳಲ್ಲಿ 90% ಬೆಂಗಳೂರಿನ ಪದವಿಪೂರ್ವ ಕಾಲೇಜುಗಳಲ್ಲಿ ಕೆಲಸ ಸಿಕ್ಕಿದ ಖುಷಿಯಲ್ಲಿದ್ದರು. ನನಗೆ ಬೋಧನೆಗೆ ಹೋಗಲು ಇಷ್ಟವಿರಲಿಲ್ಲ.
ಆದರೆ ಡಾಕ್ಟರೇಟ್ ಪದವಿಗಾಗಿ ಸಂಶೋಧನೆಯನ್ನು ಮುಂದುವರಿಸಲು ಖರ್ಚು ಮತ್ತು ಸಮಯದ ಚೌಕಟ್ಟು ಎರಡೂ ಇದ್ದವು . ವಿಶ್ವವಿದ್ಯಾನಿಲಯದ ಸಂಶೋಧನಾ ಸಹಾಯಕ ಕೆಲಸವು ಪ್ರಥಮ ರಂಕಿನ ಕತ್ರೆ ಶಕುಂತಲಾ ಅವರಿಗೆ ಹೋಯಿತು. ಆ ದಿನಗಳಲ್ಲಿ ಯಾವುದೇ CET-NET ಪರೀಕ್ಷೆಗಲಾಗಲಿ , ಸಂಶೋಧನಾ ವೇತನಗಳಾಗಲಿ ಇರಲಿಲ್ಲ. ಡಾಕ್ಟರೇಟ್ ಸಂಶೋಧನೆ ಮಾಡಲು ಸಂಶೋಧನಾ ಫೆಲೋಶಿಪ್‌ಗಳು ಬಹುತೇಕ ಶೂನ್ಯವಾಗಿದ್ದವು.
ಮತ್ತೊಮ್ಮೆ ನನ್ನ ಭವಿಷ್ಯ ನಿರ್ಧಾರದ ನೆಲೆಗೆ ಬಂದು ನಿಂತ್ತಿತ್ತು ಸಂಶೋಧನೆಯ ನನ್ನ ಕನಸನ್ನ ನನಸು ಮಾಡುವ ಬಗ್ಗೆ ನನಗೆ ಯಾವುದೇ ಸುಳಿವು ಕಾಣಿಸಲಿಲ್ಲ ಆಮೇಲಾದದ್ದು ಒಂದು ನಂಬಲಾರದ ಪವಾಡ.