ಸ್ವಭಾವ ಪ್ರಭಾವ: ‘ನಮ್ಮ ಇಸ್ಲಾಂಪೂರಕ್ಕೆ ವಹಾಬಿಸಮ್ ಕಾಲಿಟ್ಟಿಲ್ಲ, ಸಂಘಪರಿವಾರ ಕೆಮ್ಮಂಗಿಲ್ಲ’

|

Updated on: Mar 26, 2022 | 3:17 PM

Hindu Muslim: ಇಲ್ಲಿ ಹಿಂದೂಗಳ ಮನೆಯಲ್ಲಿ ಏನಾದರೂ ಸಂಭ್ರಮದ ಕಾರ್ಯಕ್ರಮಗಳಿದ್ದಾಗ, ಪ್ರಥಮ ಪಂಕ್ತಿಯ ಭೋಜನಕ್ಕೆ ಐದು ಜನ ಮುಲ್ಲಾಗಳೇ ಇರಬೇಕು. ಮುಸಲ್ಮಾನರೇನಾದರೂ ಒಳ್ಳೆಯ ಕೆಲಸ ಪ್ರಾರಂಭಿಸುವಾಗ ಅದನ್ನು ಕುರುಬರೇ ನಡೆಸಿಕೊಡಬೇಕು.

ಸ್ವಭಾವ ಪ್ರಭಾವ: ‘ನಮ್ಮ ಇಸ್ಲಾಂಪೂರಕ್ಕೆ ವಹಾಬಿಸಮ್ ಕಾಲಿಟ್ಟಿಲ್ಲ, ಸಂಘಪರಿವಾರ ಕೆಮ್ಮಂಗಿಲ್ಲ’
ಲೇಖಕ ಉಮರ್ ಫಾರೂಕ್ ಎಚ್.ಎಲ್.
Follow us on

ಸ್ವಭಾವ ಪ್ರಭಾವ : ನಾವದೆಷ್ಟೇ ಎದೆಸೆಟೆಸಿ ನಿಂತು ಆರ್ಭಟಿಸಿದರೂ ವಾಸ್ತವದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಪರಸ್ಪರ ಅವಲಂಬಿತರು ಎನ್ನುವುದು ಕಟುಸತ್ಯ. ಅಭಿವೃದ್ಧಿ-ತಂತ್ರಜ್ಞಾನ ಈ ಅವಲಂಬನೆಯಿಂದ ಮುಕ್ತಗೊಳಿಸುತ್ತಿದೆ ಎಂದೆನ್ನಿಸಿದರೂ ಅದರ ಪರಿಣಾಮಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳಲಾರೆವು. ಏಕೆಂದರೆ ನಾಗರಿಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಕನಸು ಗುರಿಗಳಿಗೆ ತಕ್ಕಂಥ ವೇಗ ನಮಗೆ ಮುಖ್ಯ. ಮೈಮನಸ್ಸನ್ನು ಬೆಸೆದಿರುವ ಬಹುಸಂಸ್ಕೃತಿಯ ಸ್ವೀಕಾರ, ಸಹಕಾರ ಮತ್ತದರ ನಿಧಾನಲಯದ ಅರಿವಿನ ಸೊಬಗು, ಅಂತಃಕರಣದ ತೇವ, ಪ್ರಜ್ಞೆಯ ಆಳ ನಮಗಿಂದು ಬೇಡ. ಹಾಗಾಗಿ ನಮ್ಮ ಬೇರುಗಳಿಗೆ ಕತ್ತರಿ ಬೀಳುವಾಗ ಜಾಣಕುರುಡರಾಗಿರುತ್ತೇವೆ. ಸ್ವಯಂಶೋಧನೆಗೆ ಒಳಪಡುವ ಏಕಾಂತ, ಅಧ್ಯಯನಶೀಲತೆ ನಮಗೆ ಭಯ ತರಿಸುತ್ತದೆ, ಒಂಟಿತನ ಒಡ್ಡುತ್ತದೆ. ಅದಕ್ಕೇ ಸದಾ ಗೌಜಿ, ಗದ್ದಲ, ವಿವಾದದೊಂದಿಗೆ ಗುಂಪು ಕಟ್ಟಿಕೊಳ್ಳುತ್ತ ಹುಸಿ ಶಕ್ತಿಶಾಲಿತನ ಮೆರೆಯುವುದೇ ನಮಗಿಷ್ಟ!; ಈ ಧರ್ಮದವರನ್ನು ಹೊರಗಿಡಿ, ಆ ಧರ್ಮದವರನ್ನು ಹೊರಗಿಡಿ ಎನ್ನುವ ಕೂಗುಮಾರಿಗಳೇ, ದಯವಿಟ್ಟು ನಿಮ್ಮ ಮೂಲಸ್ವಭಾವವೇನು, ಪ್ರಭಾವವೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಿ. ಪ್ರಭಾವ ಎನ್ನುವುದು ಎಂದಿಗೂ ಸ್ವನಾಶವೇ.

 

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಇಸ್ಲಾಂಪೂರದಲ್ಲಿ ವಾಸಿಸುತ್ತಿರುವ ಲೇಖಕ ಉಮರ್ ಫಾರೂಖ್ ಎಚ್. ಎಲ್ ಬರಹ.

ಮೂಲಭೂತವಾದಿಗಳ ದೊಡ್ಡ ಸಮಸ್ಯೆ ಎಂದರೆ ಜನರನ್ನು ಧರ್ಮದ ಲಗೇಜು ಹೊರುವ ಕೂಲಿಗಳಂತೆ ಕಾಣುವುದು. ಅವರು, ದೇವರು ಧರ್ಮಗಳನ್ನು ಪ್ರೀತಿಸುವುದನ್ನು ಕಲಿಸದೆ, ಗಡಗಡ ನಡುಗುವ ಪ್ರಜೆಗಳನ್ನು ಸೃಷ್ಟಿಸಲು ಬಯಸುತ್ತಾರೆ. ಆದರೆ ಜನರಿಗೆ ದೈವಭಕ್ತಿಯ ಜೊತೆಗೆ ನಿತ್ಯ ಜೀವನದ ಕಷ್ಟಗಳನ್ನು ಎದುರಿಸಲು ಸಹಮಾನವರ ಜತೆ ಬದುಕಲು ಬೇಕಿರುವುದು ಪ್ರೀತಿ ಹಾಗೂ ಅದರಿಂದ ಪಡೆಯುವ ಉಲ್ಲಾಸ ಮತ್ತು ಚೈತನ್ಯ. ಮೂಲಭೂತವಾದಿಗಳಿಗೆ ಈ ಸರಳ ಸತ್ಯ ಅರ್ಥವೇ ಆಗುವುದಿಲ್ಲ. ಅವರಿಗದು ಬೇಕಾಗಿಯೂ ಇಲ್ಲ.

ಭಾರತವೆಂದರೆ ಬರೀ ಭೂಮಿಯ ಒಂದು ತುಂಡಲ್ಲ, ಮಣ್ಣಲ್ಲ, ನೆಲವಲ್ಲ, ಗಡಿಯಲ್ಲ, ನೀರಲ್ಲ. ಮನಸ್ಸು, ಮಾಂಸ, ಮಜ್ಜೆಗಳಿಂದ ತುಂಬಿಕೊಂಡಿರುವ ಮತ್ತು ಭಾವನಾತ್ಮಕವಾಗಿ  ಆಶ್ರಯ ಕೊಟ್ಟಿರುವ ದೇಶ. ಇಲ್ಲಿ ಹಲವಾರು ಜಾತಿ, ಮತ-ಧರ್ಮಗಳಿವೆ, ಸಂಸ್ಕೃತಿಗಳಿವೆ, ಪಂಥ-ಪಂಗಡಗಳಿವೆ, ಭಾಷೆಗಳಿವೆ. ಪ್ರತಿಯೊಂದಕ್ಕೂ ತನ್ನದೇ ಆದ ಗತ ಇತಿಹಾಸವಿದೆ. ಆ ಇತಿಹಾಸ ಸರ್ವಕಾಲಕ್ಕೂ ಬಹುತ್ವದಲ್ಲಿ ಏಕತೆಯನ್ನು ಪ್ರತಿಪಾದಿಸಿದೆ. ಅನುಭವ ಹೇಳಿಕೊಳ್ಳುವಷ್ಟು ಹಿರಿಯ ವಯಸ್ಕ ನಾನಲ್ಲವಾದರೂ, ಹಿರಿಯರು ಹೇಳುತ್ತಿದ್ದ ಕೋಮುಸೌಹಾರ್ದ ಘಟನೆಗಳು ನನಗಿನ್ನೂ ಚೆನ್ನಾಗಿ ನೆನಪಿವೆ.

ನನ್ನದು ಉತ್ತರ ಕರ್ನಾಟಕ. ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ಕುಗ್ರಾಮ. ಇಲ್ಲಿ ಇವತ್ತಿಗೂ, ಯಾವತ್ತಿಗೂ ಮುಸ್ಲಿಮರ ಮುಖ ನೋಡದಿದ್ದರೆ ಹಿಂದೂಗಳಿಗೆ, ಹಿಂದೂಗಳ ಮುಖ ನೋಡದಿದ್ದರೆ ಮುಸ್ಲಿಮರಿಗೆ ಬೆಳಕು ಹರಿಯುವುದೇ ಇಲ್ಲ, ಸೂರ್ಯನ ಕಿರಣಗಳು ಭೂಮಿಗೆ ತಾಗುವುದೇ ಇಲ್ಲ. ನನ್ನ ಊರಿನಲ್ಲಿರುವ ಸೈಫುಲ್ ಖಾದ್ರಿ ದರ್ಗಾಕ್ಕೆ ಅಮವಾಸ್ಯೆಗೊಮ್ಮೆ ಬಂದು, ಹರಕೆ ಹೊತ್ತು ಅದನ್ನು ತೀರಿಸಿ ನಿಷ್ಠೆಯಿಂದ ನಡೆದುಕೊಳ್ಳುವವರಲ್ಲಿ ಮುಸ್ಲಿಮರಿಗಿಂತ ಎರಡು ಪಟ್ಟು ಹಿಂದೂಗಳೇ ಹೆಚ್ಚು. ದೂರದೂರಿಗೆ ಉದ್ಯೋಗ ಅರಸಿ ಹೋಗುವ ನನ್ನೂರಿನ ಹಿಂದೂಗಳು, ಗ್ರಾಮದೇವತೆಗಳ ಜಾತ್ರೆಗೆ ಆಗಮಿಸದಿದ್ದರೂ, ಮೊಹರಂ ಹಬ್ಬಕ್ಕೆ ತಪ್ಪದೇ ಹಾಜರಾಗುತ್ತಾರೆ. ಅಷ್ಟೇಕೆ, ತಮ್ಮ ಸಂಬಂಧಿಕರನ್ನೂ ಕರೆದು ತಂದು ಹಬ್ಬವನ್ನು ಹರ್ಷದಿಂದ ಆಚರಿಸುತ್ತಾರೆ.

ಹಾಗಂತ ನನ್ನೂರಿನ ಮುಸ್ಲಿಮರೇನು ಅಸಹಿಷ್ಣುಗಳೇ? ಖಂಡಿತ ಇಲ್ಲ. ಊರಿನಲ್ಲಿರುವ ದೇವಾಲಯಗಳ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮುಸ್ಲಿಮರದ್ದೂ ಅರ್ಧದಷ್ಟು ಪಾಲಿದೆ. ಈಗಲೂ ಜಾತ್ರೆಗಳಿಗೆ ಚಂದಾ ಕೊಟ್ಟು ಜಾತ್ರೆಯಲ್ಲಿ ಹಿಂದೂಗಳೊಂದಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ.

ಇಲ್ಲಿ ಹಿಂದೂಗಳ ಮನೆಯಲ್ಲಿ ಏನಾದರೂ ಸಂಭ್ರಮದ ಕಾರ್ಯಕ್ರಮಗಳಿದ್ದಾಗ, ಪ್ರಥಮ ಪಂಕ್ತಿಯ ಭೋಜನಕ್ಕೆ ಐದು ಜನ ಮುಲ್ಲಾಗಳೇ ಇರಬೇಕು. ಮುಸಲ್ಮಾನರೇನಾದರೂ ಒಳ್ಳೆಯ ಕೆಲಸ ಪ್ರಾರಂಭಿಸುವಾಗ ಅದನ್ನು ಕುರುಬರೇ ನಡೆಸಿಕೊಡಬೇಕು.

ನಮ್ಮೂರಿನಲ್ಲಿ ನೋಡಲಿಕ್ಕೆ ಮನುಷ್ಯರು ಮಾತ್ರವೇ ಕಾಣುತ್ತಾರೆಯೇ ಹೊರತು ಹಿಂದೂ-ಮುಸ್ಲಿಮರಲ್ಲ. ಇಲ್ಲಿ ವಹಾಬಿಸಮ್ ಕಾಲಿಟ್ಟಿಲ್ಲ, ಸಂಘಪರಿವಾರ ಕೆಮ್ಮಂಗಿಲ್ಲ. ಮೂಲಭೂತವಾದಕ್ಕೆ ಅವಕಾಶವೇ ಇಲ್ಲ. ಮೊಹರಂ ಪದ ಹಾಡುವ ಹಾಡುಗಾರರಲ್ಲಿ ಅರ್ಧಕ್ಕಿಂತ ಹೆಚ್ಚು ಹಿಂದೂಗಳೇ!

ಇದನ್ನೂ ಓದಿ : Book Release: ಶೆಲ್ಫಿಗೇರುವ ಮುನ್ನ; ‘ಚಿಮ್ಮಿದ ರಕ್ತ’ ಇಂದು ಉಮರ್ ಫಾರೂಕ್ ಪುಸ್ತಕ ಬಿಡುಗಡೆ

ಇದು ಸೂಫಿ ಸಂತರು-ಲಿಂಗಾಯತ ಶರಣರು ನಡೆದಾಡಿದಂತಹ ಪುಣ್ಯಭೂಮಿ. ಕೋಮು ಸೌಹಾರ್ದತೆಗೆ ಪರಮ ಮಾದರಿಯಂತಿರುವ ಈ ಮಣ್ಣಿನಲ್ಲಿ ಕೋಮು ವೈಷಮ್ಯದ ವಿಷ ಬೀಜ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಅವು ಖಂಡಿತ ಫಲ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಏಕೆಂದರೆ ಸೂಫಿ ಸಂತರು – ಲಿಂಗಾಯತ ಶರಣರು ಸೌಹಾರ್ದತೆಯ ಶಿಖರವನ್ನೇ ಕಟ್ಟಿ ಹೋಗಿದ್ದಾರೆ. ಇವತ್ತಿಗೂ ಇಲ್ಲಿ ಧಾರ್ಮಿಕ ಸಾಮರಸ್ಯ ಸಾರುವ ಹಲವಾರು ಕತೆಗಳು ಜನಜನಿತವಾಗಿವೆ.

ಇಲಕಲ್ಲಿನ ಪ್ರಸಿದ್ಧ ಸೂಫಿಗಳಾದ ಹಜರತ್ ಮುರ್ತುಜ್ ಖಾದ್ರಿ ಹಾಗೂ ಶರಣರಾದ ಗುರು ಮಹಾಂತ ಶ್ರೀಗಳು ಗಳಸ್ಯ-ಕಂಠಸ್ಯ ಸ್ನೇಹಿತರಂತೆ. ಇಬ್ಬರೂ ಒಟ್ಟಾಗಿಯೇ ಇಲಕಲ್ಲಿನಲ್ಲಿ ಸಮಾಜಸೇವೆ ಮಾಡುತ್ತಿದ್ದರಂತೆ. ಸಮಾಜವನ್ನು ವ್ಯಸನಮುಕ್ತವನ್ನಾಗಿ ಮಾಡುವುದೇ ಅವರ ಉದ್ದೇಶವಾಗಿತ್ತಂತೆ.

ಒಂದು ದಿನ ದಿಢೀರನೇ ಹಜರತ್ ಮುರ್ತುಜ್ ಖಾದ್ರಿಯವರು ಕೊನೆಯುಸಿರೆಳೆದು ಬಿಟ್ಟರು. ಸುದ್ದಿ ತಿಳಿದು ಆಘಾತಗೊಂಡ ಗುರು ಮಹಾಂತ ಶ್ರೀಗಳು ಓಡೋಡಿ ಬಂದು ಮುರ್ತುಜ್ ಖಾದ್ರಿಯವರ ಗೋರಿಯ ಮೇಲೆ ಬಿದ್ದು ಅಳತೊಡಗಿದರು. ‘ದೋಸ್ತಾ, ನೀಯಾಕಾ ನಂಕಿಂತ ಮದ್ಲಾ ಹೋಗ್ಬುಟ್ಟಿ. ನೀ ಬಂದ ನಂಗ ಮಣ್ಣ್ ಕೊಡಬೇಕಿತ್ತ. ನಾ ಬಂದ ನಿಂಗ ಮಣ್ಣ್ ಕೊಡುವಂಗಾತಲ್ಲೋ’ ಅಂತ ಅಳಲಿಕ್ಕೆ ಶುರು ಮಾಡಿದಾಗ ‘ನೀ ಏನು ಚಿಂತಿ ಮಾಡ್ಬ್ಯಾಡಾ. ನೀ ಸತ್ಮ್ಯಾಗ ನಿಂಗ್ ಮಣ್ಣ್ ಕೊಡಾಕಾ ನಾ ಬಂದ ಬರ್ತೀನಿ’ ಅನ್ನೋ ಅಶರೀರವಾಣಿ ಗುರು ಮಹಾಂತ ಶ್ರೀಗಳಿಗೆ ಕೇಳಿಸಿತ್ತಂತೆ.

ಆ ಒಂದು ದಿನ ಬಹುಬೇಗ ಬಂದುಬಿಟ್ಟಿತ್ತು. ಹಠಾತ್ತನೆ ಗುರು ಮಹಾಂತ ಶ್ರೀಗಳು ಕೊನೆಯುಸಿರೆಳೆದಿದ್ದರು. ಇತ್ತ ಶ್ರೀಗಳ ದೇಹವನ್ನು ಆರಡಿ ಆಳದಲ್ಲಿ ತೋಡಿದ ಸಮಾಧಿಯೊಳಗೆ ಇಳಿಸುತ್ತಲೇ, ಅತ್ತ ಹಜರತ್ ಮುರ್ತುಜ್ ಖಾದ್ರಿಯವರ ಗೋರಿಯಿಂದ ಬಹುದೊಡ್ಡ ಬಿರುಗಾಳಿ ಎದ್ದು, ಅಲ್ಲಿನ ಧೂಳಿನ ಕಣಗಳೆಲ್ಲ ಬಂದು ಶ್ರೀಗಳ ಸಮಾಧಿ ಮೇಲೆ ‘ಧೊಪ್’ ಅಂತ ಬಿದ್ದಿತ್ತಂತೆ.

ಯಾದಗಿರಿ ಜಿಲ್ಲೆಯಲ್ಲಿ ತಿಂಥಣಿ ಎಂಬ ಊರಿದೆ. ಅಲ್ಲಿ ಮೋನಪ್ಪ ಮತ್ತು ಮೊಯಿನುದ್ದೀನ್ ಎಂಬ ಗುರು ಶಿಷ್ಯರು ಇದ್ದರಂತೆ. ಇಬ್ಬರೂ ಒಡನಾಡಿಗಳಾಗಿಯೇ ಸಮಾಜ ಸೇವೆ ಮಾಡುತ್ತಿದ್ದರಂತೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರಂತೆ. ಊಟ ಮಾಡುವಾಗ ಬೇಗ ಎದ್ದು ಬಿಡುತ್ತಿದ್ದ ಮೊಯಿನುದ್ದೀನ್ ಅವರ ತಟ್ಟೆಯಲ್ಲಿ ಉಳಿದ ಎಂಜಲನ್ನು ಗುರುವಾದ ಮೋನಪ್ಪ ತಿನ್ನುತ್ತಿದ್ದರಂತೆ. ಅಷ್ಟೇಕೆ, ‘ನಾವು ಸತ್ತ ಮೇಲೆ ನನ್ನ ಸಮಾಧಿ ಮೇಲೆ ಮೊಯಿನುದ್ದೀನನ ಸಮಾಧಿ ಇರಬೇಕೆಂದು’ ಮೋನಪ್ಪ ತನ್ನ ಭಕ್ತರಿಗೆ ತಾಕಿತು ಮಾಡಿದ್ದಾರಂತೆ. ಆ ಕಾರಣಕ್ಕಾಗಿಯೇ ತಿಂಥಣಿಯಲ್ಲಿ ಶಿಷ್ಯನಾದ ಮೊಯಿನುದ್ದೀನ್ ಅವರ ಸಮಾಧಿ ಕೆಳಗೆ ಮೋನಪ್ಪನವರ ಸಮಾಧಿ ಇದೆ. ಅಲ್ಲಿ ಹರಿಯುವ ನದಿ ನೀರು ಮೊದಲು ಮೊಯಿನುದ್ದೀನ್ ಅವರ ಸಮಾಧಿ ಮೇಲೆ ಬಿದ್ದು ನಂತರ ಮೋನಪ್ಪನವರ ಸಮಾಧಿ ಮೇಲೆ ಬೀಳುತ್ತದೆ. ಮೊಯಿನುದ್ದೀನ್ ಕುಡಿದು ಬಿಟ್ಟ ನೀರನ್ನು ಮೋನಪ್ಪ ಕುಡಿಯುತ್ತಾನೆ ಎನ್ನುವ ಪ್ರತೀತಿ ಆ ಊರಿನ ಜನರಲ್ಲಿದೆ.

ಇದನ್ನೂ ಓದಿ : ಸ್ವಭಾವ ಪ್ರಭಾವ: ಪ್ರೊಫೆಸರ್ ಟೇಟ್ ಮಹಾಶಯರೂ, ಮೃತರಿಗೆ ತರ್ಪಣವೂ

ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಬೆಸೆಯುವಂತಹ ಇಂತಹ ಸಾವಿರಾರು ನಿದರ್ಶನಗಳು ಇತಿಹಾಸದುದ್ದಕ್ಕೂ ನಮಗೆ ಸಿಗುತ್ತವೆ. ಜಾತ್ಯತೀತತೆ ಈ ದೇಶದ ಅಂತಃಸತ್ವವಾದರೆ, ಕೋಮು ಸೌಹಾರ್ದತೆ ನಾವು ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ನೈತಿಕ ಮೌಲ್ಯ.

‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ ಎಂದ ಮಹಾಕವಿ ಕುವೆಂಪುರವರ ಕರ್ನಾಟಕದಲ್ಲಿ ಕೋಮು ಸಾಮರಸ್ಯವನ್ನು ಭೇದಿಸುವಂತಹ ದುಷ್ಟಶಕ್ತಿಗಳು ದೀನೇದಿನೆ ಅಣಬೆಗಳಂತೆ ಚಿಗುರೊಡೆಯುತ್ತಿವೆ. ಈ ದುಷ್ಟಶಕ್ತಿಗಳು ಈ ನೆಲದ ಅಂತಃಸತ್ವವನ್ನು, ಪರಂಪರಾಗತ ಮೌಲ್ಯಗಳನ್ನು ಧ್ವಂಸಗೊಳಿಸುತ್ತಿವೆ. ಕೋಮು ವೈಷಮ್ಯದಿಂದ ಬಳಲುತ್ತಿರುವ ಕರ್ನಾಟಕಕ್ಕೆ ತುರ್ತಾಗಿ ಸಾಂಸ್ಕೃತಿಕ ಚಿಕಿತ್ಸೆಯಾಗಬೇಕಾದ ಅನಿವಾರ್ಯತೆ ಇದೆ. ಶಿಶುನಾಳ ಶರೀಫರು ರೂಪುಗೊಂಡಿದ್ದರ ಹಿಂದೆ ಗುರು ಗೋವಿಂದ ಭಟ್ಟರು ಇದ್ದರೆ, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿಯವರ ಸಾಧನೆಯ ಹಿಂದೆ ಅವರಿಬ್ಬರಿಗೂ ಗುರುವಾಗಿದ್ದ ಉಸ್ತಾದ್ ಅಬ್ದುಲ್ ಕರೀಂಖಾನರು ಇದ್ದರು. ಭಾರತದಂತಹ ಬಹುಸಂಸ್ಕೃತಿಯ, ಬಹುಭಾಷಿಕ, ಬಹುಧರ್ಮೀಯ ದೇಶದಲ್ಲಿ ಒಂದು ಸಮುದಾಯ ಸ್ವತಂತ್ರವಾಗಿ ಸಾಧನೆ ಮಾಡಿದೆ ಎಂದು ಹೇಳಲಿಕ್ಕಾಗುವುದಿಲ್ಲ. ನಾವಿದನ್ನು ಸಮುದಾಯಗಳ ಸಂಯುಕ್ತ ಸಾಧನೆ ಎಂದೇ ಕರೆಯಬೇಕು. ‘ನಮ್ಮಿಂದ ಅವರು ನಮ್ಮಿಂದ ಇವರು’ ಎನ್ನುವುದಕ್ಕಿಂತ ‘ನಾವೆಲ್ಲರೂ’ ಎನ್ನುವುದೇ ಉಚಿತವಾದದ್ದು.

ಕೋಮು ಸೌಹಾರ್ದತೆ, ಧಾರ್ಮಿಕ ಸಹಿಷ್ಣುತೆ ಎನ್ನುವುದು ನಮ್ಮ ನರನಾಡಿಗಳಲ್ಲಿ ಹರಿಯುವ ರಕ್ತವಾಗಿ, ದಿನನಿತ್ಯದ ಚಟುವಟಿಕೆಗಳಲ್ಲಿ ಬೆರೆತಿರಬೇಕು. ಆದರೆ ನಾವಿಂದು ಕೋಮು ಸಾಮರಸ್ಯಕ್ಕಾಗಿ ಪೂರ್ವಜರ ನಿದರ್ಶನಗಳನ್ನು ನೆನಪಿಸಿಕೊಳ್ಳುತ್ತಿದ್ದೇವೆಂದರೆ ದುರಂತವೇ ಸರಿ. ಅವರು ಅಲ್ಲಿ ಅಂಗಡಿ ಹಾಕಬಾರದು, ಇವರು ಇಲ್ಲಿ ವ್ಯಾಪಾರ ಮಾಡಬಾರದು ಎಂದು ಮನಸ್ಸುಗಳನ್ನು ವಿಭಜಿಸಿ, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವವರ ಹೊಟ್ಟೆ ತಣ್ಣಗಿರಲಿ. ಎಷ್ಟಾದರೂ ನಿಮ್ಮ ರಾಜಕೀಯ ತೀಟೆಗೆ ಶಾಲಾ-ಕಾಲೇಜಿನ ಮುಗ್ಧ ಮಕ್ಕಳ ಮನಸ್ಸಿನಲ್ಲಿಯೂ ಮತಾಂಧತೆಯ ಬೀಜ ಬಿತ್ತಿದವರಲ್ಲವೇ ನೀವು?

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : ಸ್ವಭಾವ ಪ್ರಭಾವ : ‘ಆದ್ರೂ ಮುಸ್ಲಿಮ್ಸ್ ಬಗ್ಗೆ ಕೇರ್ಫುಲ್ ಆಗಿ ಇರಬೇಕು’ ಹೀಗಂದ ಆ ನವಯುವಕ