ಮೇಘಾಲಯದಲ್ಲಿ ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್ ಸೇರುವ ಮೂಲಕ ಪಕ್ಷಕ್ಕೆ ದೊಡ್ಡ ಆಘಾತವನ್ನೇ ಕೊಟ್ಟಿದ್ದಾರೆ. ಅಲ್ಲಿ ಇದ್ದ 18 ಕಾಂಗ್ರೆಸ್ ಶಾಸಕರಲ್ಲಿ 12 ಮಂದಿ ಈಗ ಟಿಎಂಸಿಗೆ ಪಕ್ಷಾಂತರಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಮೇಘಾಲಯದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಇವರು ಮತ್ತು ಮೇಘಾಲಯ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ವಿನ್ಸೆಂಟ್ ಎಚ್.ಪಾಲಾ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಪ್ರದೇಶ ಕಾಂಗ್ರೆಸ್ ಕಮಿಟಿಗೆ ವಿನ್ಸೆಂಟ್ ಎಚ್.ಪಾಲಾ ಮುಖ್ಯಸ್ಥರಾಗಿ ನೇಮಕರಾದಾಗಿನಿಂದಲೂ ಮುಕುಲ್ ಸಂಗ್ಮಾ ಅಸಮಾಧಾನಗೊಂಡಿದ್ದರು. ಕಳೆದ ತಿಂಗಳಷ್ಟೇ ಮುಕುಲ್ ಸಂಗ್ಮಾ ಮತ್ತು ವಿನ್ಸೆಂಟ್ರನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ ಇಬ್ಬರ ಬೇಡಿಕೆಗಳನ್ನೂ ಆಲಿಸಿ ಮಾತುಕತೆ ನಡೆಸಿದ್ದರು.
ನಾನು ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕನಾಗಿದ್ದರೂ, ವಿನ್ಸೆಂಟ್ ಎಚ್.ಪಾಲಾರನ್ನು ನೇಮಕ ಮಾಡುವಾಗ ಒಂದು ಮಾತು ನನ್ನನ್ನು ಕೇಳಲಿಲ್ಲ ಎಂದು ಬಹಿರಂಗವಾಗಿಯೇ ಬೇಸರ ತೋಡಿಕೊಂಡಿದ್ದರು. ಅದಾದ ಬಳಿಕ ಅವರು ತೃಣಮೂಲ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಅದರಂತೆ ಅವರೀಗ ಒಟ್ಟು 11 ಶಾಸಕರೊಟ್ಟಿಗೆ ಟಿಎಂಸಿ ಸೇರ್ಪಡೆಯಾಗಿದ್ದಾರೆ. ಈಗ ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಮುಖ ವಿರೋಧಪಕ್ಷವಾಗಿ ಹೊರಹೊಮ್ಮಿದೆ.
ಇನ್ನು ತೃಣಮೂಲ ಕಾಂಗ್ರೆಸ್ಗೆ ಸೇರುವ ಊಹಾಪೋಹದ ಬಗ್ಗೆ ಹಿಂದೊಮ್ಮೆ ಪ್ರತಿಕ್ರಿಯೆ ನೀಡಿದ್ದ ಮುಕುಲ್ ಸಂಗ್ಮಾ, ನಾನು ಮತ್ತು ಬಂಡಾಯವೆದ್ದಿರುವ ಶಾಸಕರು ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದಾದ ಬಳಿಕವಷ್ಟೇ ಟಿಎಂಸಿ ಸೇರುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದರು. ಟಿಎಂಸಿ ಸದ್ಯ ರಾಷ್ಟ್ರಮಟ್ಟದಲ್ಲಿ ತನ್ನ ಪಕ್ಷವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಮೇಘಾಲಯದಲ್ಲಿ 2023ರಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಪಕ್ಷ ಸಂಘಟನೆ ಬಲಪಡಿಸುವ ದೃಷ್ಟಿಯಿಂದ ಪ್ರಶಾಂತ್ ಕಿಶೋರ್ ತಂಡ ಅಲ್ಲಿಯೇ ಇದೆ ಎಂದೂ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹಾಸನ: ಅಪ್ಪು ಅಗಲುವಿಕೆಯ ನೋವು; ನೇಣಿಗೆ ಶರಣಾದ ಅಭಿಮಾನಿ
Published On - 7:57 am, Thu, 25 November 21