ಜಮ್ಮು-ಕಾಶ್ಮೀರದ ಕುಲಗಾಂವ್ನಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಉಗ್ರರು (Terrorists) ಬಲಿಯಾಗಿದ್ದಾರೆ. ಕುಲಗಾಂವ್ನ ರೆಡ್ವಾನಿ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನಚಕಮಕಿ ಶುರುವಾಗಿತ್ತು. ಈಗಲೂ ಕೂಡ ಅಲ್ಲಿ ಎನ್ಕೌಂಟರ್ ಮುಂದುವರಿಯುತ್ತಿದೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಾಶ್ಮೀರ ವಲಯದ ಪೊಲೀಸರು, ಇಬ್ಬರು ಅಪರಿಚಿತ ಉಗ್ರರು ಹತ್ಯೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಹಾಗೇ, ಈ ಉಗ್ರರ ಹೆಸರು, ಯಾವ ಸಂಘಟನೆಗೆ ಸೇರಿದವರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯವೂ ಶುರುವಾಗಿದೆ.
ಮೊನ್ನೆ ಪುಲ್ವಾಮಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಸಿಬ್ಬಂದಿ ದಾಳಿಗೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಫೆರೋಜ್ ಅಹ್ಮದ್ ದಾರ್ ಎಂಬಾತ ಬಲಿಯಾಗಿದ್ದ. ಇವನು ಅನೇಕ ಉಗ್ರಕೃತ್ಯಗಳಲ್ಲಿ ಭಾಗಿಯಾಗಿದ್ದ. ಅದರಲ್ಲೂ ಮುಖ್ಯವಾಗಿ 2018ರಲ್ಲಿ ಶೋಪಿಯಾನಾದ ಜೈನಾಪೋರಾದಲ್ಲಿ ನಡೆದ ಉಗ್ರರ ದಾಳಿಯಲ್ಲೂ ಈತ ಪಾಲ್ಗೊಂಡಿದ್ದ. ಅಂದಿನ ದಾಳಿಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು. ಅಷ್ಟೇ ಅಲ್ಲ, 2019ರ ಫೆಬ್ರವರಿಯಲ್ಲಿ ಇಶ್ರಾತ್ ಮುನೀರ್ ಎಂಬ ಹುಡುಗಿಯ ಹತ್ಯೆಯಲ್ಲೂ ಈತನ ಕೈವಾಡ ಇತ್ತು. ಅದೇ ವರ್ಷ ಅಕ್ಟೋಬರ್ನಲ್ಲಿ ಸ್ಥಳೀಯನಲ್ಲದ ಕಾರ್ಮಿಕ ಚರಣಜೀತ್ ಎಂಬಾತನನ್ನು ಉಗ್ರರು ಕೊಂದು ಹಾಕಿದ್ದರು. ಅದರಲ್ಲೂ ಸಹ ದಾರ್ ಭಾಗಿಯಾಗಿದ್ದ. ಸದ್ಯ ಜಮ್ಮು-ಕಾಶ್ಮೀರದ ಸುತ್ತಲೂ ಉಗ್ರರ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ರಕ್ಷಣಾ ಪಡೆ ಸಿಬ್ಬಂದಿ ಜೀವವೂ ಹೋಗುತ್ತಿದ್ದು, ಇನ್ನೊಂದೆಡೆ ಭಯೋತ್ಪಾದಕರನ್ನು ಹೆಡೆಮುರಿಕಟ್ಟಲಾಗುತ್ತಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ಬಳಿಕ ರವೀಂದ್ರ ಜಡೇಜಾ ಮಾಡಿದ ಟ್ವೀಟ್ ಫುಲ್ ವೈರಲ್: ಏನು ಗೊತ್ತೇ?
Published On - 11:26 am, Thu, 16 December 21