ಅಹಮದಾಬಾದ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣ; 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ

| Updated By: shivaprasad.hs

Updated on: Feb 18, 2022 | 12:15 PM

Ahmedabad serial bomb blast case: ಅಹಮದಾಬಾದ್‌ನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ.

ಅಹಮದಾಬಾದ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣ; 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ
2008ರ ಸ್ಫೋಟದ ನಂತರದ ದೃಶ್ಯ (ಸಂಗ್ರಹ)
Follow us on

ಗಾಂಧಿನಗರ: ಅಹಮದಾಬಾದ್‌ನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ (Ahmedabad serial bomb blast case) ಸಂಬಂಧಪಟ್ಟಂತೆ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ. UAPS ಪ್ರಕಾರ 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಶುಕ್ರವಾರ (ಫೆ.18) ಆದೇಶ ನೀಡಿದೆ. ಅಪರಾಧಿಗಳು ಅಹಮದಾಬಾದ್, ಭೋಪಾಲ್, ಗಯಾ, ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿನ ಜೈಲುಗಳಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಜುಲೈ 26, 2008 ರಂದು ಅಹಮದಾಬಾದ್​ ನಗರದಲ್ಲಿ ಸರಣಿ ಸ್ಫೋಟ ನಡೆದಿತ್ತು. ಅದರಲ್ಲಿ 56 ಜನರು ಮೃತರಾಗಿದ್ದರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಫೆಬ್ರವರಿ 8, 2022 ರಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.

ಜುಲೈ 26, 2008 ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್‌ನ ವಿವಿಧ ಪ್ರದೇಶಗಳಲ್ಲಿ 20 ಬಾಂಬ್‌ಗಳು ಸ್ಫೋಟಗೊಂಡಿದ್ದವು. ಸ್ಫೋಟಗಳಲ್ಲಿ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ (IM) ಸದಸ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. 2002ರ ಗೋಧ್ರಾ ನಂತರದ ಗಲಭೆಗೆ ಪ್ರತೀಕಾರವಾಗಿ ಐಎಂ ಭಯೋತ್ಪಾದಕರು ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಈ ಕುರಿತು ಎಎನ್​ಐ ಟ್ವೀಟ್ ಇಲ್ಲಿದೆ:

ಇತ್ತೀಚೆಗೆ ಖುಲಾಸೆಗೊಂಡಿದ್ದ 28 ಆರೋಪಿಗಳು:

2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 77 ಆರೋಪಿಗಳ ಪೈಕಿ 28 ಮಂದಿಯನ್ನು ಗುಜರಾತ್‌ನ ವಿಶೇಷ ನ್ಯಾಯಾಲಯ ಫೆಬ್ರವರಿ 8ರಂದು ಖುಲಾಸೆಗೊಳಿಸಿತ್ತು. ಉಳಿದ 49 ಜನರನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು. ಅವರಿಗೆ ಇಂದು (ಫೆ.18) ಶಿಕ್ಷೆಯ ಪ್ರಮಾಣ ಘೋಷಿಸಲಾಗಿದೆ.

ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ)ಯ ಬಣವಾದ ಇಂಡಿಯನ್ ಮುಜಾಹಿದೀನ್ (ಐಎಂ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವವರು ಈ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಈ ಹಿಂದೆ 85 ಜನರನ್ನು ಬಂಧಿಸಿದ್ದರು. ಆದರೆ, 78 ಜನರ ವಿರುದ್ಧ ಮಾತ್ರ ವಿಚಾರಣೆ ಪ್ರಾರಂಭವಾಗಿತ್ತು. ಆರೋಪಿಗಳ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಲಾಗಿತ್ತು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. 2013ರಲ್ಲಿ ಕೆಲವು ಆರೋಪಿಗಳು ವಿಚಾರಣೆಯ ಸಮಯದಲ್ಲಿ ಜೈಲಿನಲ್ಲಿ 213 ಅಡಿ ಉದ್ದದ ಸುರಂಗವನ್ನು ಕೊರೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಪಿಟಿಐ ವರದಿ ಮಾಡಿತ್ತು.

ಇದನ್ನೂ ಓದಿ:

ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ಮತ್ತೊಂದು ಎಡವಟ್ಟು? ವೈದ್ಯರ ನಿರ್ಲಕ್ಷ್ಯಕ್ಕೆ ಮುದ್ದಾದ ಮಗು ಬಲಿ

ಪ್ರಧಾನಿ ಮೋದಿ- ಅಬು ಧಾಬಿ ದೊರೆ ನಡುವೆ ದ್ವಿಪಕ್ಷೀಯ ಸಂಬಂಧ ಶೃಂಗಸಭೆ ಇಂದು

Published On - 11:56 am, Fri, 18 February 22