ಹೆದ್ದಾರಿಯಲ್ಲಿ ಬೈಕ್​ ಸವಾರನನ್ನು ತಡೆದು ನಿಲ್ಲಿಸಿದ ತಮಿಳುನಾಡು ಪೊಲೀಸ್​​; ಕಾರಣವನ್ನು ನೀವು ಊಹಿಸಲೂ ಸಾಧ್ಯವಿಲ್ಲ !-ವಿಡಿಯೋ ನೋಡಿ

|

Updated on: Mar 25, 2021 | 4:07 PM

ಪೊಲೀಸ್ ಕೊಟ್ಟ ಪುಟ್ಟ ಬಾಟಲಿಯನ್ನು ತನ್ನ ಬ್ಯಾಗ್​​ನಲ್ಲಿಟ್ಟುಕೊಂಡ ಅರುಣ್​, ಅಲ್ಲಿಂದ ಆದಷ್ಟು ವೇಗವಾಗಿ ಹೋಗುತ್ತಾರೆ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪೊಲೀಸ್​ ಹೇಳಿದ ಬಸ್​ ಅವರಿಗೆ ಕಾಣಿಸುತ್ತದೆ. ಅದರ ಬಲಭಾಗಕ್ಕೆ ಹೋಗಿ, ಚಾಲಕನ ಬಳಿ ಬಸ್​ ನಿಲ್ಲಿಸುವಂತೆ ಮನವಿ ಮಾಡುತ್ತಾರೆ.

ಹೆದ್ದಾರಿಯಲ್ಲಿ ಬೈಕ್​ ಸವಾರನನ್ನು ತಡೆದು ನಿಲ್ಲಿಸಿದ ತಮಿಳುನಾಡು ಪೊಲೀಸ್​​; ಕಾರಣವನ್ನು ನೀವು ಊಹಿಸಲೂ ಸಾಧ್ಯವಿಲ್ಲ !-ವಿಡಿಯೋ ನೋಡಿ
ಕರ್ನಾಟಕ ಬೈಕ್​​ ಸವಾರನನ್ನು ತಡೆದ ಪೊಲೀಸ್​
Follow us on

ನೀವು ನಿಮ್ಮ ಬೈಕ್​​ನಲ್ಲೋ, ಕಾರಿನಲ್ಲೋ ಹೋಗುತ್ತಿದ್ದಾಗ ಪೊಲೀಸರು ತಡೆದರೆ ಮನಸಲ್ಲಿ ನೂರು ಪ್ರಶ್ನೆ, ಅಸಮಾಧಾನ ಹುಟ್ಟುತ್ತದೆ. ಅಯ್ಯೋ ಯಾಕಾದ್ರೂ ಇದಾರೋ..? ಇನ್ನೇನು ದಾಖಲೆ ಕೇಳ್ತಾರೋ? ಸುಮ್ಮನೆ ಹಣ ಕೇಳ್ತಾರೆ, ಎಲ್ಲ ಸರಿಯಾಗಿದ್ರೂ ಬೇಗ ಬಿಡೋದಿಲ್ಲ.. ಎಂಬಿತ್ಯಾದಿ ಗೊಣಗಾಟ ಮನಸಲ್ಲೇ ಶುರುವಾಗುತ್ತದೆ. ಆದರೆ ಇಲ್ಲೊಬ್ಬ ಬೈಕ್ ಸವಾರ ತನ್ನನ್ನು ಟ್ರಾಫಿಕ್​ ಪೊಲೀಸ್ ಅಧಿಕಾರಿಯೊಬ್ಬ ತಡೆದಿದ್ದು ವಿಶೇಷ ಕಾರಣಕ್ಕೆ. ಯಾವುದೇ ಟ್ರಾಫಿಕ್​ ನಿಯಮದ ಬಗ್ಗೆ ಮಾತನಾಡಲು ಅಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಆ ವಿಶೇಷ ಕ್ಷಣದ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ತನ್ನನ್ನು ತಾನು ಅನ್ನಿ ಅರುಣ್​ ಎಂದು ಪರಿಚಯ ಮಾಡಿಕೊಂಡಿರುವ ಯುವಕ ಘಟನೆಯನ್ನು ವಿಡಿಯೋ ಮೂಲಕವೇ ವಿವರಿಸಿದ್ದಾರೆ. ಅರುಣ್​ ಬೈಕ್​ನಲ್ಲಿ ಪಾಂಡಿಚೇರಿಯಿಂದ ತಮಿಳುನಾಡಿನ ತೆಂಕಸಿಗೆ ಪ್ರಯಾಣ ಮಾಡುತ್ತಿರುತ್ತಾರೆ. ಮಾರ್ಗ ಮಧ್ಯೆ ಪೊಲೀಸ್ ಒಬ್ಬರು ಅವರನ್ನು ತಡೆದು ನಿಲ್ಲಿಸುತ್ತಾರೆ. ತಮ್ಮ ಗಾಡಿ ನಿಲ್ಲಿಸಿದ ಅರುಣ್​ ಬಳಿ, ನೀವು ಕರ್ನಾಟಕದವರಾ ಎಂದು ಪ್ರಶ್ನಿಸುತ್ತಾರೆ. ಆಗ ಹೌದು ಎಂದ ಅರುಣ್​ಗೆ, ಇಲ್ಲಿಂದ ಕರ್ನಾಟಕಕ್ಕೆ ಹೋಗುತ್ತಿರುವ ತಮಿಳುನಾಡು ರಾಜ್ಯ ಸರ್ಕಾರಿ ಬಸ್​​ವೊಂದರಲ್ಲಿ ಕುಳಿತಿದ್ದ ವೃದ್ಧ ಮಹಿಳೆಯೊಬ್ಬರು ಈ ಔಷಧಿ ಬಾಟಲಿಯನ್ನು ಬೀಳಿಸಿಕೊಂಡು ಹೋಗಿದ್ದಾರೆ. ನೀವು ಆ ಸಾರಿಗೆ ಬಸ್​​ನ್ನು ಹೇಗಾದರೂ ಚೇಸ್​ ಮಾಡಿ, ನಿಲ್ಲಿಸಿ. ನಂತರ ಈ ಬಾಟಲಿಯನ್ನು ಅವರಿಗೆ ತಲುಪಿಸಿ ಎಂದು ಒಂದು ಚಿಕ್ಕ ಔಷಧಿ ಬಾಟಲಿಯನ್ನು ಅರುಣ್​ ಕೈಯಿಗೆ ಕೊಡುತ್ತಾರೆ.

ಪೊಲೀಸ್ ಕೊಟ್ಟ ಪುಟ್ಟ ಬಾಟಲಿಯನ್ನು ತನ್ನ ಬ್ಯಾಗ್​​ನಲ್ಲಿಟ್ಟುಕೊಂಡ ಅರುಣ್​, ಅಲ್ಲಿಂದ ಆದಷ್ಟು ವೇಗವಾಗಿ ಹೋಗುತ್ತಾರೆ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪೊಲೀಸ್ ಅಧಿಕಾರಿ​ ಹೇಳಿದ ಬಸ್​ ಅವರಿಗೆ ಕಾಣಿಸುತ್ತದೆ. ಅದರ ಬಲಭಾಗಕ್ಕೆ ಹೋಗಿ, ಚಾಲಕನ ಬಳಿ ಬಸ್​ ನಿಲ್ಲಿಸುವಂತೆ ಮನವಿ ಮಾಡಿ ಔಷಧಿಯನ್ನು ಮಹಿಳೆಗೆ ತಲುಪಿಸುತ್ತಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡ ಅರುಣ್​, ನಾನು ಇಂಥದ್ದೊಂದು ಒಳ್ಳೆಯ ಕಾರಣಕ್ಕೆ ಪೊಲೀಸ್​ ಅಧಿಕಾರಿಯಿಂದ ತಡೆಯಲ್ಪಡುತ್ತೇನೆ ಎಂದುಕೊಂಡಿರಲಿಲ್ಲ. ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ. ವಿಡಿಯೋ 17 ಸಾವಿರಕ್ಕೂ ಅಧಿಕ ವೀವ್ಸ್​ ಪಡೆದಿದೆ. ನೆಟ್ಟಿಗರು ಪೊಲೀಸ್ ಮತ್ತು ಅರುಣ್​ ಇಬ್ಬರನ್ನೂ ಸಿಕ್ಕಾಪಟೆ ಹೊಗಳಿದ್ದಾರೆ. ಅಷ್ಟೇ ಅಲ್ಲ, ಬಸ್​ ಚಾಲಕನ್ನೂ ಶ್ಲಾಘಿಸಿದ್ದಾರೆ. ಈ ಮೂವರಲ್ಲೂ ಮಾನವೀಯತೆ ಎಂಬುದು ಜಾಸ್ತಿಯೇ ಇದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು, ಬೈಕ್ ಸವಾರನನ್ನ ಸಾಯಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತೀಯಾ -ಹೆಚ್.ವಿಶ್ವನಾಥ್ ಕಿಡಿಕಿಡಿ

Published On - 2:31 pm, Thu, 25 March 21