
ನವದೆಹಲಿ, ಅಕ್ಟೋಬರ್ 17: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರಿಗೆ ಇಂದು ದೆಹಲಿ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ. ಶಾಂತಿ ಮುಚ್ಚಳಿಕೆ ಹಾಗೂ 50,000 ರೂ.ಗಳ ಶ್ಯೂರಿಟಿ ಬಾಂಡ್ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಕನ್ನಾಟ್ ಪ್ಲೇಸ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಲೆಹ್ರಾ ದೋ ತಿರಂಗ’ ಪ್ರತಿಭಟನಾ ರ್ಯಾಲಿಗೂ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷೆ ನೇಹಾ ಬೋರಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇಂದು ಬೆಳಿಗ್ಗೆ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನೇಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅಭಿಜಿತ್ ದಿಪ್ಕೆ ಅವರನ್ನು ಎಸ್ಇಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ: ‘ಕೆನ್ನೆಗೆ ಹೊಡೆದು, ಅಸಭ್ಯ ವರ್ತನೆ’; ಸಿಜೆಪಿ ರ್ಯಾಲಿ ವೇಳೆ ಸಿಆರ್ಪಿಎಫ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್
ದೆಹಲಿ ಪೊಲೀಸ್ ಕಾಯ್ದೆಯ ಸೆಕ್ಷನ್ 65ರ ಅಡಿಯಲ್ಲಿ ನೇಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಅಭಿಜಿತ್ ದಿಪ್ಕೆ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 126 ಮತ್ತು 170ರಡಿ ಸಾರ್ವಜನಿಕ ಶಾಂತಿಭಂಗದ ಆರೋಪದ ಮೇಲೆ ಹೊಸ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದಕ್ಕೂ ಮೊದಲು ಅಕ್ಟೋಬರ್ 10ರಂದು ದೆಹಲಿ ವಿಮಾನ ನಿಲ್ದಾಣದಲ್ಲೂ ಇವರನ್ನು ಇಂತಹದ್ದೇ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿತ್ತು.
ಇಂದು ಬೆಳಗ್ಗೆ ಬಿಡುಗಡೆಯ ಬಳಿಕ ಮಾತನಾಡಿದ ನೇಹಾ ಬೋರಾ, ದೆಹಲಿ ಪೊಲೀಸರು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಮುನ್ನೆಚ್ಚರಿಕೆ ಬಂಧನಗಳು ಸಂಪೂರ್ಣ ಅಕ್ರಮ ಎಂದು ಟೀಕಿಸಿದ್ದರು. ಅಲ್ಲದೆ, ವಿವಾದಾತ್ಮಕ ಎಸ್ಐಆರ್ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಿ ಜೈಲಿಗೆ ಹೋಗಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ದೆಹಲಿಯಲ್ಲಿ ಬಿಗುವಿನ ವಾತಾವರಣ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನ, ಐಸಾ ಮುಖ್ಯಸ್ಥೆ ನೇಹಾ ಬೋರಾ ಬಿಡುಗಡೆ!
150ಕ್ಕೂ ಹೆಚ್ಚು ಜನ ವಶಕ್ಕೆ:
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಂಚಾರ ದಟ್ಟಣೆಯನ್ನು ತಡೆಯಲು ಪೊಲೀಸರು ಸುಮಾರು 150 ಜನರನ್ನು ವಶಕ್ಕೆ ಪಡೆದಿದ್ದರು. ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ತ್ವರಿತ ಕಾರ್ಯಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ