ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಯುವತಿಯರ (Woman) ಮೇಲೆ ಆ್ಯಸಿಡ್ ದಾಳಿಗಳು (Acid Attack) ನಡೆಯುತ್ತಿವೆ. ಎಲ್ಲೆಂದರಲ್ಲಿ ಆ್ಯಸಿಡ್, ವಿಕೃತರ ಕೈಗೆ ಸಿಗುತ್ತಿರುವುದು ಆ್ಯಸಿಡ್ ದಾಳಿ ಸುಲಭವಾಗುವಂತೆ ಮಾಡಿದೆ. ದೇಶದಲ್ಲಿ ಶೇ. 78 ರಷ್ಟು ಪ್ರಕರಣಗಳಲ್ಲಿ ಆ್ಯಸಿಡ್ ದಾಳಿಗೆ ಪ್ರೇಮ ವೈಫಲ್ಯ (Love Failure), ಮದುವೆಯಾಗಲು ನಿರಾಕರಣೆಯ ಕಾರಣಗಳಿಂದ ನಡೆದಿವೆ. ಆ್ಯಸಿಡ್ ದಾಳಿಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನಿಗೆ ತಿದ್ದುಪಡಿ ತರಲಾಗಿದೆ.
ಶೇ. 78 ರಷ್ಟು ಆ್ಯಸಿಡ್ ದಾಳಿಗೆ ಪ್ರೇಮ ವೈಫಲ್ಯ, ಸೆಕ್ಸ್ ನಿರಾಕರಣೆ ಕಾರಣ
ಭಾರತದಲ್ಲಿ ಕಾನೂನು ಎಷ್ಟೇ ಬಿಗಿಯಾಗಿದ್ದರೂ, ಯುವತಿಯರ ಮೇಲಿನ ಆ್ಯಸಿಡ್ ದಾಳಿಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಈಗಲೂ ದೇಶದಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ಆ್ಯಸಿಡ್ ವಿಕೃತರ ಕೈಗೆ ಸಿಗುತ್ತಿದೆ. ಪ್ರೇಮ ವೈಫಲ್ಯ, ಏಕಮುಖ ಪ್ರೇಮ, ಮದುವೆಗೆ ನಿರಾಕರಣೆ, ಸೆಕ್ಸ್ ಗೆ ನಿರಾಕರಣೆಯ ಕಾರಣಗಳಿಂದ ವಿಕೃತ ಮನಸ್ಸಿನ ಯುವಕರು, ಯುವತಿಯ ಮುಖದ ಸೌಂದರ್ಯವನ್ನೇ ಹಾಳು ಮಾಡಲು ಯುವತಿಯರ ಮುಖದ ಮೇಲೆ ಆ್ಯಸಿಡ್ ಎರಚುತ್ತಿದ್ದಾರೆ. ಆ್ಯಸಿಡ್ ನಿಂದ ಯುವತಿಯರ ಮುಖದ ಸೌಂದರ್ಯ ವಿರೂಪವಾಗುತ್ತಿದೆ. ಬಳಿಕ ಹತ್ತಾರು ಸಂಕಷ್ಟಗಳನ್ನು ಯುವತಿಯರು ಜೀವನ ಪರ್ಯಂತ ಎದುರಿಸಬೇಕಾಗಿದೆ. ದೇಶದಲ್ಲಿ ಶೇ.78 ರಷ್ಟು ಆ್ಯಸಿಡ್ ದಾಳಿ ಪ್ರಕರಣಗಳಿಗೆ ಪ್ರೇಮ ವೈಫಲ್ಯ, ಸೆಕ್ಸ್ ಗೆ ನಿರಾಕರಣೆ, ಮದುವೆಯಾಗಲು ನಿರಾಕರಣೆ, ಆಸ್ತಿ ವಿವಾದ, ವರದಕ್ಷಿಣೆ ತರದಿರುವುದು ಕಾರಣ ಎಂದು ಸರ್ವೇಯೊಂದು ಹೇಳಿದೆ. ಭಾರತದಲ್ಲಿ ಆ್ಯಸಿಡ್ ದಾಳಿಯ ಸಂತ್ರಸ್ತರು ಯುವತಿಯರು.
ಭಾರತದಲ್ಲಿ 2013ರ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆಯಡಿ ಆ್ಯಸಿಡ್ ದಾಳಿಯ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಜೊತೆಗೆ ಐಪಿಸಿ ಸೆಕ್ಷನ್ 320, 322, 325,326 ಮತ್ತು ಐಪಿಸಿ ಸೆಕ್ಷನ್ 307ರಡಿ ಕೇಸ್ ದಾಖಲಿಸಲಾಗುತ್ತಿದೆ. ಐಪಿಸಿ ಸೆಕ್ಷನ್ 320ರಡಿ ತೀವ್ರವಾಗಿ ಗಾಯಗೊಳಿಸುವುದು, ಐಪಿಸಿ ಸೆಕ್ಷನ್ 322ರಡಿ ಸ್ವಪ್ರೇರಣೆಯಿಂದ ತೀವ್ರವಾಗಿ ಗಾಯಗೊಳಿಸುವುದು, ಐಪಿಸಿ ಸೆಕ್ಷನ್ 325ರಡಿ ತೀವ್ರವಾಗಿ ಗಾಯಗೊಳಿಸುವುದಕ್ಕೆ 7 ವರ್ಷಗಳವರೆಗೆ ಜೈಲುಶಿಕ್ಷೆ, ಐಪಿಸಿ ಸೆಕ್ಷನ್ 326ರಡಿ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಇದೆ. ಐಪಿಸಿ ಸೆಕ್ಷನ್ 307ರಡಿ ಕೊಲೆಯತ್ನದ ಕೇಸ್ ದಾಖಲಿಸಲಾಗುತ್ತೆ.
ಜಾಲಹಳ್ಳಿ ಪೊಲೀಸ್ ಸ್ಟೇಷನ್ ವರ್ಸಸ್ ಜೋಸೇಫ್ ರೋಡ್ರಿಗಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ , ಕೆಳ ನ್ಯಾಯಾಲಯ ನೀಡಿದ್ದ 2 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ಇನ್ನೂ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದೆ. ಆರೋಪಿ ಜೋಸೆಫ್ ರೋಡ್ರಿಗಸ್ ಎಂಬಾತ ತನ್ನ ಕೈ ಕೆಳಗಿನ ಉದ್ಯೋಗಿ ಹಸೀನಾ ಹುಸೇನ್ ಉದ್ಯೋಗ ತ್ಯಜಿಸುತ್ತೇನೆಂದು ಹೇಳಿದ್ದಕ್ಕೆ ಒಂದೂವರೆ ಲೀಟರ್ ಆ್ಯಸೀಡ್ ಅನ್ನು ಆಕೆಯ ಮೈ ಮೇಲೇ ಸುರಿದಿದ್ದ.
ಭಾರತದಲ್ಲಿ ಆ್ಯಸಿಡ್ ದಾಳಿಯಲ್ಲಿ ಹೆಚ್ಚು ಪ್ರಚಾರವಾಗಿದ್ದು ದೆಹಲಿಯ ಲಕ್ಷ್ಮಿ ಅಗರವಾಲ್ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣ. ದೆಹಲಿಯ ತುಘಲಕ್ ರಸ್ತೆಯಲ್ಲಿ ಇಬ್ಬರು ಯುವಕರು 15 ವರ್ಷದ ಲಕ್ಷ್ಮಿ ಅಗರವಾಲ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದರು. ಯುವಕರಲ್ಲಿ ಒಬ್ಬ ಲಕ್ಷ್ಮಿ ಅಗರವಾಲ್ ರನ್ನು ಮದುವೆಯಾಗಲು ಬಯಸಿದ್ದ. ನಿರಾಕರಿಸಿದ್ದಕ್ಕೆ ಆ್ಯಸಿಡ್ ದಾಳಿ ನಡೆಸಿದ್ದ. ಲಕ್ಷ್ಮಿಅಗರವಾಲ್ ದೇಶದಲ್ಲಿ ಆ್ಯಸಿಡ್ ಮಾರಾಟವನ್ನು ನಿರ್ಬಂಧಿಸಬೇಕೆಂದು ಕೋರಿ 27 ಸಾವಿರ ಜನರ ಸಹಿ ಸಂಗ್ರಹಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಆ್ಯಸಿಡ್ ಮಾರಾಟಕ್ಕೆ ಸುಪ್ರೀಂ ನಿರ್ಬಂಧ
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆ್ಯಸಿಡ್ ದಾಳಿಯ ಅಪರಾಧಿಗೆ ಕನಿಷ್ಠ 10 ವರ್ಷ ಜೈಲುಶಿಕ್ಷೆ ವಿಧಿಸಬಹುದು. ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದು. ಲಕ್ಷ್ಮಿ ಅಗರವಾಲ್ ಅರ್ಜಿಯ ಕೇಸ್ ನಲ್ಲೇ ಸುಪ್ರೀಂ ಕೋರ್ಟ್ ದೇಶದಲ್ಲಿ ಆ್ಯಸಿಡ್ ಮಾರಾಟಕ್ಕೆ ಕೆಲ ಮಾರ್ಗಸೂಚಿ ನೀಡಿದೆ. ಮಾರಾಟಗಾರರು ಆ್ಯಸಿಡ್ ಖರೀದಿದಾರನ ವಿವರ ಸಂಗ್ರಹಿಸಿಟ್ಟುಕೊಳ್ಳಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆ್ಯಸಿಡ್ ಮಾರಾಟ ಮಾಡಬಾರದು. ಲೈಸೆನ್ಸ್ ಹೊಂದಿರುವವರು ಮಾತ್ರವೇ ಆ್ಯಸಿಡ್ ಮಾರಾಟ ಮಾಡಬೇಕು. ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಕೇಂದ್ರ, ರಾಜ್ಯ ಸರ್ಕಾರಗಳು 3 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಇದರಲ್ಲಿ ಒಂದು ಲಕ್ಷ ರೂಪಾಯಿಯನ್ನು ಆ್ಯಸಿಡ್ ದಾಳಿ ನಡೆದ 15 ದಿನದೊಳಗೆ ಚಿಕಿತ್ಸೆಗಾಗಿ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಉಳಿದ 2 ಲಕ್ಷ ರೂಪಾಯಿಯನ್ನು 2 ತಿಂಗಳೊಳಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
2015ರಲ್ಲಿ ಸುಪ್ರೀಂಕೋರ್ಟ್ ಖಾಸಗಿ, ಸರ್ಕಾರಿ ಆಸ್ಪತ್ರೆಗಳು ಆ್ಯಸಿಡ್ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಆದೇಶ ನೀಡಿದೆ. ಲಕ್ಷ್ಮಿ ಅಗರವಾಲ್ ಈಗ ದೇಶದಲ್ಲಿ ಆ್ಯಸಿಡ್ ಸಂತ್ರಸ್ತರ ನೇತೃತ್ವ ವಹಿಸಿ ಹೋರಾಟ ನಡೆಸಿದ್ದಾರೆ. ಚನ್ನಾವ್ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆಯ ನಿರ್ದೇಶಕಿಯಾಗಿ ದುಡಿಯುತ್ತಿದ್ದಾರೆ. ಲಕ್ಷ್ಮಿ ಅಗರವಾಲ್ ಜೀವನದ ಕಥೆಯನ್ನು ಆಧರಿಸಿ ಬಾಲಿವುಡ್ ನಲ್ಲಿ ಚಪಾಕ್ ಹೆಸರಿನ ಸಿನಿಮಾ ನಿರ್ಮಾಣ ಆಗಿದೆ. ಲಕ್ಷ್ಮಿ ಅಗರವಾಲ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಯೀಮ್ ಗೆ 10 ವರ್ಷ ಜೈಲುಶಿಕ್ಷೆ, ರಾಖಿಗೆ 7 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.
ಇನ್ನು ಆ್ಯಸಿಡ್ ದಾಳಿ ಸಂತ್ರಸ್ತೆ ರೇಣು ಶರ್ಮಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್, ಆ್ಯಸಿಡ್ ದಾಳಿ ಸಂತ್ರಸ್ತೆಗೆ ಉಚಿತ ಚಿಕಿತ್ಸೆ ನೀಡಬೇಕು, ವಿದ್ಯಾಭ್ಯಾಸಕ್ಕನುಗುಣವಾಗಿ ಸರ್ಕಾರಿ ನೌಕರಿ ನೀಡಬೇಕು ಎಂದು ಆದೇಶ ನೀಡಿದೆ.
ಆ್ಯಸಿಡ್ ದಾಳಿಗಳಲ್ಲಿ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ವರ್ಷಕ್ಕೆ 250 ರಿಂದ 300 ಆ್ಯಸಿಡ್ ದಾಳಿಯ ಪ್ರಕರಣಗಳು ದಾಖಲಾಗುತ್ತಿವೆ. ಇದು ಕಳವಳಕ್ಕೆ ಕಾರಣವಾಗಿದೆ. ಯುವತಿಯ ಮೇಲಿನ ಏಕಮುಖ ಪ್ರೇಮದಿಂದ ಯುವತಿಯ ಮುಖವನ್ನು ವಿರೂಪಗೊಳಿಸುವ ಆ್ಯಸಿಡ್ ದಾಳಿ ಪ್ರಕರಣಗಳಿಂದ ಸಂತ್ರಸ್ತ ಯುವತಿಯರು ಸಾಮಾಜಿಕ, ಆರ್ಥಿಕ, ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ.