ರಾಜಕಾರಣದಿಂದ ದೂರ ಹೋಗಬೇಡಿ, ನಿರ್ಧಾರ ಬದಲಿಸಿ: ನಟ ರಜನಿಕಾಂತ್​ಗೆ ಅಭಿಮಾನಿಗಳ ಮನವಿ

|

Updated on: Jan 10, 2021 | 5:15 PM

ಭಾನುವಾರ ಚೆನ್ನೈನ ವಲ್ಲುವಾರ್ ಕೋಟ್ಟಂನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ12.30ರ ಹೊತ್ತಿಗೆ ಸುಮಾರು 2,000 ಅಭಿಮಾನಿಗಳು ಒಂದೆಡೆ ಸೇರಿ ರಜನಿಕಾಂತ್ ಅವರು ರಾಜಕೀಯಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.

ರಾಜಕಾರಣದಿಂದ ದೂರ ಹೋಗಬೇಡಿ, ನಿರ್ಧಾರ ಬದಲಿಸಿ: ನಟ ರಜನಿಕಾಂತ್​ಗೆ ಅಭಿಮಾನಿಗಳ ಮನವಿ
ರಜನಿಕಾಂತ್ ಅಭಿಮಾನಿಗಳು
Follow us on

ಚೆನ್ನೈ : ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ನಿರ್ಧಾರವನ್ನು ದಯವಿಟ್ಟು ವಾಪಸ್ ತೆಗೆದುಕೊಳ್ಳಿ ಎಂದು ನಟ  ರಜನಿಕಾಂತ್ ಅವರಲ್ಲಿ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಭಾನುವಾರ ಚೆನ್ನೈನ ವಲ್ಲುವಾರ್ ಕೋಟ್ಟಂನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ12.30ರ ಹೊತ್ತಿಗೆ ಸುಮಾರು 2,000 ಅಭಿಮಾನಿಗಳು ಒಂದೆಡೆ ಸೇರಿ ರಜನಿಕಾಂತ್ ಅವರು ರಾಜಕೀಯಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ. ‘ವಾ ತಲೈವಾ ವಾ’ (ತಲೈವಾ ಬನ್ನಿ ), ‘ಇಪ್ಪೊ ಇಲ್ಲಾಮಾ ಎಪ್ಪೊವುಂ ಇಲ್ಲ’ (ಈಗ ಇಲ್ಲದೇ ಇದ್ದರೆ ಮುಂದೆಂದೂ ಇಲ್ಲ) ಎಂದು ಹಲವರು ಘೋಷಣೆ ಕೂಗಿದ್ದಾರೆ. ಈ ರೀತಿ ಕಾರ್ಯಕ್ರಮ ನಡೆಸಲು ಒಂದು ಗಂಟೆ ಅವಧಿ ನೀಡಿದ ಪೊಲೀಸರು 200 ಮಂದಿಗಷ್ಟೇ ಅವಕಾಶ ಕಲ್ಪಿಸಿದ್ದರು. ಆದರೆ 2000 ಸಾವಿರಕ್ಕಿಂತಲೂ ಹೆಚ್ಚು ಅಭಿಮಾನಿಗಳು ಅಲ್ಲಿ ಸೇರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಯಾವುದೇ ರೀತಿಯ ಪ್ರತಿಭಟನೆಗಳನ್ನು ಮಾಡಬೇಡಿ ಎಂದು ರಜನಿ ಮಕ್ಕಳ್ ಮಂದ್ರ ಪಕ್ಷ ಪದೇ ಪದೇ ಒತ್ತಾಯಿಸಿದ್ದರೂ ಭಾನುವಾರ ಶಾಂತಿಯುತ ಪ್ರತಿಭಟನೆ ನಡೆದಿದೆ. ಈ ರೀತಿಯ ಪ್ರತಿಭಟನೆಯಲ್ಲಿ ಭಾಗಿಯಾಗಬೇಡಿ ಎಂದು ಮಂದ್ರ ಹೈಕಮಾಂಡ್ ಜನರಲ್ಲಿ ಮನವಿ ಮಾಡಿತ್ತು. ಈ ರೀತಿಯ ಪ್ರತಿಭಟನೆಗಳಿಂದ ತಮ್ಮ ನಾಯಕನ ಭಾವನೆಗೆ ನೋವುಂಟಾಗುವುದಲ್ಲದೆ, ಈ ರೀತಿ ಕಾರ್ಯಕ್ರಮದ ಆಯೋಜಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೈಕಮಾಂಡ್ ಎಚ್ಚರಿಸಿತ್ತು.

ಆದಾಗ್ಯೂ, ರಜನಿ ಮಕ್ಕಳ್ ಮಂದ್ರದ ಹಿರಿಯ ನೇತಾರ ಎನ್. ರಾಮಧಾಸ್ ಅವರ ನೇತೃತ್ವದಲ್ಲಿ ಬೆಳಗ್ಗೆಯೇ ರಜನಿ ಅಭಿಮಾನಿಗಳು ಕಾರ್ಯಕ್ರಮ ನಡೆಯುವಲ್ಲಿಗೆ ಬಂದು ಸೇರಿದ್ದರು. ಕೆಲವು ಅಭಿಮಾನಿಗಳು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಬಂದಿದ್ದು, ತಮಿಳುನಾಡಿನ ವಿವಿಧ ಭಾಗದಿಂದ ಅಭಿಮಾನಿಗಳನ್ನು ಕರೆತರಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಭಟನಾ ಕಾರ್ಯಕ್ರಮದ ನಂತರ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜತೆ ಮಾತನಾಡಿದ ರಾಮಧಾಸ್, ಶಾಂತಿಯುತ ಪ್ರತಿಭಟನೆ ಯಶಸ್ವಿಯಾಗಿದೆ. ನಮ್ಮ ಮನವಿ ಕೇಳಿ ತಲೈವಾ ಮರಳಿ ಬರಬಹುದು. ಈ ನಗರವೇ ಇಂದು ಅವರ ಪಾದದಲ್ಲಿದೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ, ಭಯಪಡುವ ಅಗತ್ಯವೇನಿಲ್ಲ ಎಂದು ತೋರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಬೇರೆಯವರಿಗಿಂತ ಹೆಚ್ಚಾಗಿ ನಾವು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೇವೆ. ಅವರು ಮನೆಯಲ್ಲೇ ಕುಳಿತು ವರ್ಚುವಲ್ ಪ್ರಚಾರ ಮಾಡಿದರೆ ಸಾಕು. ನಾವು ಪ್ರತಿ ಮನೆಗೆ ಹೋಗಿ ತಲೈವರ್ ಗಾಗಿ ಮತಯಾಚಿಸುತ್ತೇವೆ. ಅವರು ಮನೆಯಲ್ಲಿ ವಿಶ್ರಾಂತಿ ಪಡೆಯಲಿ. ಅವರ ಒಂದೇ ಒಂದು ಟ್ವೀಟ್, ಅವರು ಪೋಸ್ಟಿಸುವ ವಿಡಿಯೊ  ಇಡೀ ಜಗತ್ತಿನ ಗಮನ ಸೆಳೆಯುತ್ತದೆ. ತಲೈವರ್ ರಾಜಕೀಯ ಪ್ರವೇಶಿಸಲಿ ಎಂದು ಜನರು ಬಯಸುತ್ತಾರೆ. ನಮ್ಮ ಪ್ರತಿಭಟನೆ ಬಗ್ಗೆ ತಲೈವರ್​ಗೆ ಖುಷಿಯಾಗಿದೆ ಎಂದು ಕೆಲವು ಮೂಲಗಳು ನಮಗೆ ತಿಳಿಸಿವೆ. ಪೊಂಗಲ್ ಹಬ್ಬದ ಹೊತ್ತಿಗೆ ಖುಷಿ ಸುದ್ದಿ ಸಿಗಬಹುದೆಂದು ನಾವು ಭಾವಿಸುತ್ತೇವೆ. ತಮಿಳುನಾಡಿನ ಜನರ ಅಭಿವೃದ್ಧಿಗಾಗಿ ಅವರು ನಿರ್ಧಾರವನ್ನು ಬದಲಿಸುತ್ತಾರೆ. ನಮ್ಮ ಮತ ತಲೈವರ್​ಗೆ ಮಾತ್ರ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಗುಡ್​ಬೈ ಹೇಳಿದ ರಜನಿಕಾಂತ್! ‘ರಾಜಕೀಯಕ್ಕೆ ಇಳಿಯದೆಯೂ ನಾನು ಜನರ ಸೇವೆ ಮಾಡಬಲ್ಲೆ..’

 

Published On - 5:12 pm, Sun, 10 January 21