ದೆಹಲಿ: ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸುಮಾರು 4,000 ಕಿಮೀ ಭಾರತ್ ಜೋಡೋ ಯಾತ್ರೆ (Bharat Jodo Yatra )ಮಾಡಿದ ನಂತರ, ಮುಂದಿನ ವರ್ಷ ನಡೆಯುವ ಲೋಕಚುನಾವಣೆಯವರೆಗೂ ಪ್ರಚಾರದ ವೇಗವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ (Congress )ಈಗ ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್ ಪೋರಬಂದರ್ ವರೆಗೆ ಭಾರತ್ ಜೋಡೋ ಯಾತ್ರೆ 2.0 ಯಾತ್ರೆಗೆ ಪಕ್ಷ ಚಿಂತನೆ ನಡೆಸಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮತ್ತೊಂದು ಯಾತ್ರೆಗೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಶಕ್ತಿ ಇದೆ ಎಂದಿದ್ದಾರೆ. ರಾಹುಲ್ ಗಾಂಧಿ ಅವರ ದಕ್ಷಿಣದಿಂದ ಉತ್ತರದ ಯಾತ್ರೆ ಕಳೆದ ವರ್ಷ ಸೆಪ್ಟೆಂಬರ್ 7 ರಂದು ಪ್ರಾರಂಭವಾಗಿ ಜನವರಿ 30 ರಂದು ಶ್ರೀನಗರದಲ್ಲಿ ಕೊನೆಗೊಂಡಿತು.
ಪೂರ್ವ-ಪಶ್ಚಿಮ ಯಾತ್ರೆ, ಬಹುಶಃ ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ವರೆಗೆ ಯಾತ್ರೆಯನ್ನು ಪರಿಗಣಿಸಲಾಗುತ್ತಿದೆ ಆದರೆ ಅದರ ಸ್ವರೂಪವು ಭಾರತ್ ಜೋಡೋ ಯಾತ್ರೆಗಿಂತ ಸ್ವಲ್ಪ ಭಿನ್ನವಾಗಿರಬಹುದು ಎಂದು ಕಾಂಗ್ರೆಸ್ ಸಂಸದರು ಹೇಳಿದರು. ಹೊಸ ಯಾತ್ರೆಯು ಭಾರತ್ ಜೋಡೋ ಯಾತ್ರೆಗಾಗಿ ಸಜ್ಜುಗೊಳಿಸಲಾದ ವಿಸ್ತಾರವಾದ ಮೂಲಸೌಕರ್ಯ ಮತ್ತು ಕಡಿಮೆ ಯಾತ್ರಿಗಳನ್ನು ಹೊಂದಿರಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ: ರಾಹುಲ್ ಗಾಂಧಿ
ಪೂರ್ವದಿಂದ ಪಶ್ಚಿಮಕ್ಕೆ ಮಾರ್ಗವು ದಟ್ಟವಾದ ಕಾಡುಗಳು ಮತ್ತು ವಿಶಾಲವಾದ ನದಿಗಳಿಂದ ಕೂಡಿದೆ ಎಂದು ಹೇಳಿದ ಜೈರಾಮ್ ರಮೇಶ್, ಪ್ರಯಾಣವು ಹೆಚ್ಚಾಗಿ ಪಾದಯಾತ್ರೆಯಾಗಿರಬಹುದು. ಆದರೆ ಅಗತ್ಯವಿರುವ ಕಡೆ ಬಹು-ಮಾದರಿ ಯಾತ್ರೆಯೂ ಬೇಕಾಗಿ ಬರಬಹುದು ಎಂದಿದ್ದಾರೆ.
ಏಪ್ರಿಲ್‌ನಲ್ಲಿ ಕರ್ನಾಟಕ ಚುನಾವಣೆ ನಡೆಯಲಿದ್ದು, ಜೂನ್‌ನಿಂದ ಮುಂಗಾರು ಆರಂಭವಾಗಲಿದೆ. ನವೆಂಬರ್‌ನಲ್ಲಿ ಹೆಚ್ಚಿನ ರಾಜ್ಯ ಚುನಾವಣೆಗಳು ಇರುವುದರಿಂದ ಜೂನ್‌ಗಿಂತ ಮೊದಲು ಅಥವಾ ನವೆಂಬರ್‌ಗೆ ಮೊದಲು ಯಾತ್ರೆಯನ್ನು ಕೈಗೊಳ್ಳಬೇಕಾಗಬಹುದು.ಹೊಸ ಯಾತ್ರೆಯು ಭಾರತ್ ಜೋಡೋ ಯಾತ್ರೆಯಷ್ಟು ಸಮಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.
ಈ ಬಗ್ಗೆ ಮುಂದಿನ ಕೆಲವು ವಾರಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ರಾಯ್‌ಪುರದಲ್ಲಿ ನಡೆದ ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನದಲ್ಲಿ, ಭಾರತ್ ಜೋಡೋ ಯಾತ್ರೆಯ ಮೂಲಕ ಕೈಗೊಂಡ ತಪಸ್ಸನ್ನು ಮುಂದುವರಿಸಲು ಪಕ್ಷವು ಹೊಸ ಯೋಜನೆಯನ್ನು ರೂಪಿಸಬೇಕು ಮತ್ತು ಇಡೀ ದೇಶದೊಂದಿಗೆ ತಾವು ಅದರಲ್ಲಿ ಭಾಗವಹಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sun, 26 February 23