ಹೈದರಾಬಾದ್: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಲಹ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಹಿರಂಗವಾದ ಬೆನ್ನಲ್ಲೇ, ಎಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದಿದ್ದು, ಮುಸ್ಲಿಂ ನಾಯಕರು ಇನ್ನೂ ಎಷ್ಟು ದಿನ ಕಾಂಗ್ರೆಸ್ ಪಕ್ಷದ ಗುಲಾಮಗಿರಿ ಮಾಡಬೇಕು ಎಂದು ಕೆಂಡಕಾರಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗುಲಾಮ್ ನಬಿ ಅಜಾದ್ ಸೇರಿದಂತೆ ಕೆಲ ಹಿರಿಯ ನಾಯಕರು ಬಿಜೆಪಿ ಜತೆ ಶಾಮಿಲಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರೆೆಂದು ವರದಿಯಾದ ಬೆನ್ನಲ್ಲೇ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಗುಲಾಮ್ ನಬಿ ಆಜಾದ್ ನಮಗೆ ಬಿಜೆಪಿ ‘ಬಿ’ ಟೀಮ್ ಎಂದು ಮೂದಲಿಸಿದ್ದರು. ಈಗ ಅವರೇ ಬಿಜೆಪಿ ಜತೆ ಶಾಮಿಲಾಗಿದ್ದಾರೆಂದು ಅವರ ಪಕ್ಷದ ನಾಯಕರೇ ಹೇಳುತ್ತಿದ್ದಾರೆ ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.
ಅಷ್ಟೇ ಅಲ್ಲ ಮುಸ್ಲಿಂ ನಾಯಕರು ಇನ್ನೂ ಎಷ್ಟು ದಿನ ಕಾಂಗ್ರೆಸ್ ಪಕ್ಷದ ಗುಲಾಮಗಿರಿ ಮಾಡುತ್ತೀರಿ ಎಂದು ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರಿಗೆ ಓವೈಸಿ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುವ ಬಗ್ಗೆ ಮುಸ್ಲಿಂ ನಾಯಕರು ಚಿಂತಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದ್ರೆ ಈ ನಡುವೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್, ರಾಹುಲ್ ಗಾಂಧಿ ಹಾಗೇ ಹೇಳಿಲ್ಲ. ಇಂತಹ ಮಾತುಗಳೇ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ವಿವಾದಕ್ಕೆ ತೇಪೆ ಎಳೆಯುವ ಪ್ರಯತ್ನ ಮಾಡಿದ್ದಾರೆ.