ಸಾಕು ನಾಯಿ ಸಾವು: ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ 2 ಲಕ್ಷ ರೂ. ವೆಚ್ಚದಲ್ಲಿ ಸಮಾಧಿ ನಿರ್ಮಿಸಿದ ಕುಟುಂಬ

ಆಂಧ್ರಪ್ರದೇಶದ ಬಾಪಟ್ಲಾ ಕುಟುಂಬವೊಂದು ತಮ್ಮ ಪ್ರೀತಿಯ ರೋಟ್‌ವೀಲರ್ ನಾಯಿ 'ಹೆಕ್ಟರ್'‌ಗೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದೆ. 10 ವರ್ಷಗಳ ಕಾಲ ಕುಟುಂಬದ ಸದಸ್ಯನಾಗಿದ್ದ ಹೆಕ್ಟರ್ ಕ್ಯಾನ್ಸರ್‌ನಿಂದ ಮೃತಪಟ್ಟಾಗ, ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮಾಧಿ ಮತ್ತು ವಿಗ್ರಹವನ್ನು ನಿರ್ಮಿಸಿ ತಮ್ಮ ನಿಷ್ಠಾವಂತ ಶ್ವಾನಕ್ಕೆ ಭಾವಪೂರ್ಣ ವಿದಾಯ ಹೇಳಿದ್ದಾರೆ.

ಸಾಕು ನಾಯಿ ಸಾವು: ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ 2 ಲಕ್ಷ ರೂ. ವೆಚ್ಚದಲ್ಲಿ ಸಮಾಧಿ ನಿರ್ಮಿಸಿದ ಕುಟುಂಬ
ಹೆಕ್ಟರ್ ಶ್ವಾನ

Updated on: Oct 06, 2026 | 2:49 PM

ಇಂದಿನ ಸ್ವಾರ್ಥಪರ ಪ್ರಪಂಚದಲ್ಲಿ ಮನುಷ್ಯ-ಮನುಷ್ಯರ ನಡುವೆಯೇ ಪ್ರೀತಿ, ವಾತ್ಸಲ್ಯ ಕಮ್ಮಿಯಾಗುತ್ತಿರುವಾಗ, ಆಂಧ್ರಪ್ರದೇಶದ ಕುಟುಂಬವೊಂದು ತಾವು ಸಾಕಿ ಬೆಳೆಸಿದ ನಾಯಿಯ ಮೇಲಿನ ಪ್ರೀತಿಯಿಂದ ಎಲ್ಲರೂ ಹುಬ್ಬೇರಿಸುವಂತಹ ಕೆಲಸ ಮಾಡಿದೆ. ತಮ್ಮ ಮನೆಯ ಸದಸ್ಯನಂತಿದ್ದ ನಾಯಿ ಸಾವನ್ನಪ್ಪಿದಾಗ, ಅದಕ್ಕೆ ಹಿಂದೂ ಧರ್ಮದ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ, ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮಾಧಿ ಮತ್ತು ವಿಗ್ರಹವನ್ನು ನಿರ್ಮಿಸಿ ತಮ್ಮ ನಿಷ್ಠಾವಂತ ಶ್ವಾನಕ್ಕೆ ಭಾವಪೂರ್ಣ ವಿದಾಯ ಹೇಳಿದ್ದಾರೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಯದ್ದನಪೂಡಿ ಗ್ರಾಮದಲ್ಲಿ ನಡೆದ ಈ ಆತ್ಮೀಕ ಘಟನೆಯ ವಿವರ ಇಲ್ಲಿದೆ.

10 ವರ್ಷಗಳ ಅವಿನಾಭಾವ ಸಂಬಂಧ; ಕುಟುಂಬದ ಸದಸ್ಯನಾಗಿದ್ದ ‘ಹೆಕ್ಟರ್’:

ಬಾಪಟ್ಲಾ ಜಿಲ್ಲೆಯ ಯದ್ದನಪೂಡಿ ಗ್ರಾಮದ ನಿವಾಸಿ ಬಂದ್ಲ ಸತೀಶ್ ಅವರ ಕುಟುಂಬವು 10 ವರ್ಷಗಳ ಹಿಂದೆ ‘ರಾಟ್‌ವೀಲರ್’ (Rottweiler) ತಳಿಯ ಮುದ್ದಾದ ನಾಯಿಮರಿಯೊಂದನ್ನು ಮನೆಗೆ ತಂದಿದ್ದರು. ಅದಕ್ಕೆ ಪ್ರೀತಿಯಿಂದ ‘ಹೆಕ್ಟರ್’ ಎಂದು ಹೆಸರಿಟ್ಟಿದ್ದರು. ಕಾಲಕ್ರಮೇಣ ಈ ನಾಯಿ ಕೇವಲ ಸಾಕುಪ್ರಾಣಿಯಾಗಿ ಉಳಿಯದೆ, ಆ ಕುಟುಂಬದ ಒಬ್ಬ ಸದಸ್ಯನಂತೆಯೇ ಬೆಳೆದುಬಂತು. ತನ್ನ ನಿಷ್ಠೆ ಹಾಗೂ ಪ್ರೀತಿಯಿಂದ ಬಂದ್ಲ ಸತೀಶ್ ಕುಟುಂಬದ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದ ಹೆಕ್ಟರ್, ಇಡೀ ಮನೆಗೆ ಕಾವಲುಗಾರನಾಗಿ ಮತ್ತು ಪ್ರೀತಿಯ ಮಗನಂತೆ ಆಸರೆಯಾಗಿದ್ದ.

ಕ್ಯಾನ್ಸರ್ ಜೊತೆ ಹೋರಾಟ; ಕಣ್ಣೀರಿನ ವಿದಾಯ:

ಕೆಲವು ದಿನಗಳ ಹಿಂದೆ ಹೆಕ್ಟರ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ. ಪಶುವೈದ್ಯರ ಬಳಿ ತಪಾಸಣೆಗೊಳಪಡಿಸಿದಾಗ ಹೆಕ್ಟರ್‌ಗೆ ಕ್ಯಾನ್ಸರ್ (Cancer) ಇರುವುದು ಪತ್ತೆಯಾಯಿತು. ಕಾಯಿಲೆ ತೀವ್ರವಾಗಿದ್ದರಿಂದ ನಾಯಿ ಬದುಕುವ ಸಾಧ್ಯತೆ ತೀರ ಕಡಿಮೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಆದರೂ ಭರವಸೆ ಕಳೆದುಕೊಳ್ಳದ ಸತೀಶ್ ಕುಟುಂಬ, ಎಷ್ಟೇ ಖರ್ಚಾಗಲಿ ಪರವಾಗಿಲ್ಲ ಎಂದು ಹಲವು ಪ್ರಾಣಿ ಆಸ್ಪತ್ರೆಗಳಿಗೆ ಅಲೆದಾಡಿ ಚಿಕಿತ್ಸೆ ಕೊಡಿಸಿದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಹೆಕ್ಟರ್ ಕೊನೆಯುಸಿರೆಳೆದನು. 10 ವರ್ಷಗಳ ಕಾಲ ತಮ್ಮ ಜೊತೆಗಿದ್ದ ಪ್ರೀತಿಯ ಶ್ವಾನದ ಅಗಲಿಕೆಯಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿತು.

ಇದನ್ನೂ ಓದಿ: ಪ್ರಾಣಿ ಪ್ರಿಯರಿಗೆ ಗುಡ್​​ನ್ಯೂಸ್​​: ದಕ್ಷಿಣ ಆಫ್ರಿಕಾದ ಚೀತಾಗಳು ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ಲಭ್ಯ

ಅಜ್ಜನ ಸಮಾಧಿಯ ಪಕ್ಕದಲ್ಲೇ ಅಂತ್ಯಕ್ರಿಯೆ ಮತ್ತು ಭವ್ಯ ಸ್ಮಾರಕ:

ಮನೆಯಲ್ಲಿದ್ದ ಮನುಷ್ಯರು ತೀರಿದಾಗ ಯಾವ ರೀತಿ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆಯೋ, ಅದೇ ರೀತಿ ಹೆಕ್ಟರ್‌‌ಗೂ ಅಂತಿಮ ವಿದಾಯ ಹೇಳಲು ಬಂದ್ಲ ಸತೀಶ್ ಕುಟುಂಬ ನಿರ್ಧರಿಸಿತು. ತಮ್ಮ ಕೃಷಿ ಭೂಮಿಯಲ್ಲಿದ್ದ ಅಜ್ಜ ಬಂದ್ಲ ಹನುಮಯ್ಯ ಅವರ ಸಮಾಧಿಯ ಪಕ್ಕದಲ್ಲೇ ಹೆಕ್ಟರ್‌ನನ್ನು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ದಹನ ಮಾಡಲಾಯಿತು.

ವಿಗ್ರಹ ಪ್ರತಿಷ್ಠಾಪನೆ:

ಹೆಕ್ಟರ್‌ನ ನೆನಪು ಸದಾ ಜೀವಂತವಾಗಿರಬೇಕೆಂದು ಆ ಕುಟುಂಬ ಸುಮಾರು 2 ಲಕ್ಷ ರೂಪಾಯಿ ವೆಚ್ಚ ಮಾಡಿ ಸುಂದರವಾದ ಸ್ಮಾರಕ ಸಮಾಧಿಯನ್ನು ನಿರ್ಮಿಸಿದೆ. ಅಷ್ಟೇ ಅಲ್ಲದೆ, ಹೆಕ್ಟರ್‌ನಂತೆಯೇ ಕಾಣುವ ವಿಶೇಷ ಶ್ವಾನದ ವಿಗ್ರಹವನ್ನು ಆ ಸಮಾಧಿಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಯಾವುದೇ ಸ್ವಾರ್ಥವಿಲ್ಲದೆ ಮೂಗ ಜೀವಿಯೊಂದರ ಮೇಲೆ ಸತೀಶ್ ಕುಟುಂಬ ತೋರಿಸಿದ ಈ ನಿಷ್ಕಲ್ಮಷ ಪ್ರೀತಿ ಮತ್ತು ಕರುಣೆ ಪ್ರತಿಯೊಬ್ಬರ ಮನಸ್ಸನ್ನು ತಟ್ಟಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us