ಮಧ್ಯರಾತ್ರಿ ಅರಣ್ಯ ಪ್ರದೇಶದಲ್ಲಿ ಕೆಟ್ಟು ನಿಂತ ಸರ್ಕಾರಿ ಸಾರಿಗೆ ಬಸ್, ಪ್ರಯಾಣಿಕರಿಗೆ ನರಕ ದರ್ಶನ!

|

Updated on: Oct 19, 2023 | 4:31 PM

Andhra Pradesh: ವಿಶಾಖಪಟ್ಟಣಂ ಡಿಪೋಗೆ ಸೇರಿದ AP31Z 0339 ಸಂಖ್ಯೆಯ RTC ಬಸ್ ಭದ್ರಾಚಲಂನಿಂದ ವಿಶಾಖಪಟ್ಟಣದ ಕಡೆಗೆ ಹೊರಟಿತ್ತು. ಅಲ್ಲೂರಿ ಸೀತಾರಾಮರಾಜು ಜಿಲ್ಲೆ ಜಿ.ಕೆ. ಸ್ಟ್ರೀಟ್ ಮಂಡಲದ ದಾರಾಳಮ್ಮ ಘಾಟ್ ರಸ್ತೆ ಹತ್ತುವಾಗ ಬಸ್ ಹಠಾತ್ತನೆ ನಿಂತಿದೆ. ಚಾಲಕ ಇಳಿದು ಪರಿಶೀಲಿಸಿದನು. ಎಲ್ಲಿಯೂ ಲೋಪ ಕಾಣಿಸಲಿಲ್ಲ. ಕೊನೆಗೆ ಡೀಸೆಲ್ ಟ್ಯಾಂಕ್ ಪರಿಶೀಲಿಸಿದಾಗ ಅದರಲ್ಲಿ...

ಮಧ್ಯರಾತ್ರಿ ಅರಣ್ಯ ಪ್ರದೇಶದಲ್ಲಿ ಕೆಟ್ಟು ನಿಂತ ಸರ್ಕಾರಿ ಸಾರಿಗೆ ಬಸ್, ಪ್ರಯಾಣಿಕರಿಗೆ ನರಕ ದರ್ಶನ!
ಮಧ್ಯರಾತ್ರಿ ಅರಣ್ಯ ಪ್ರದೇಶದಲ್ಲಿ ಕೆಟ್ಟು ನಿಂತ ಸರ್ಕಾರಿ ಸಾರಿಗೆ ಬಸ್
Follow us on

ವಿಶಾಖಪಟ್ಟಣಂ, ಅಕ್ಟೋಬರ್ 19: ಆಂದ್ರ ಸರ್ಕಾರಿ ಸಾರಿಗೆ ಸಂಸ್ಥೆಗೆ ಸೇರಿದ ಆ ಬಸ್ (ಆರ್‌ಟಿಸಿ ಬಸ್ -APSRTC) ಮಧ್ಯರಾತ್ರಿಯಲ್ಲಿ ಪ್ರಯಾಣಿಸುತ್ತಿತ್ತು. ಮಕ್ಕಳು, ವೃದ್ಧರು, ಮಹಿಳೆಯರು ಸೇರಿ ಸುಮಾರು 40 ಪ್ರಯಾಣಿಕರು ಆ ಬಸ್​​ನಲ್ಲಿದ್ದರು! ಆದರೆ ದಟ್ಟ ಅರಣ್ಯ ಪ್ರದೇಶವನ್ನು (Forest) ತಲುಪಿದ ಕೂಡಲೇ ಆ ಬಸ್ಸು ಹಠಾತ್ತನೆ ನಿಂತುಬಿಟ್ಟಿತು. ಚಾಲಕ ಕೆಳಗಿಳಿದು ಪರಿಶೀಲಿಸಿದಾಗ… ದೋಷ ಏನೆಂಬುದು ಪತ್ತೆಯಾಗಲಿಲ್ಲ. ನಂತರ ಡೀಸೆಲ್ ತೈಲ ಟ್ಯಾಂಕ್ ಮುಚ್ಚಳವನ್ನು ತೆಗೆದು ಪರಿಶೀಲಿಸಿದರೆ… ಅದರಲ್ಲಿ ಸ್ವಲ್ಪವೂ ಇಂಧನ ಇರಲಿಲ್ಲ. ಡೀಸೆಲ್ ಇಲ್ಲದೆ ಬಸ್ ಮುಂದೆ ಚಲಿಸುತ್ತದೆಯೇ? ಮಧ್ಯರಾತ್ರಿಯಲ್ಲಿ ದಟ್ಟವಾದ ಕಾಡಿನಲ್ಲಿ ಸಿಲುಕಿದ ಪ್ರಯಾಣಿಕರ ಪರಿಸ್ಥಿತಿ (Passengers) ಏನೆಂಬುದು ಇಷ್ಟೊತ್ತಿಗೆ ನಿಮಗೆ ಅರ್ಥವಾಗಿರುತ್ತದೆ.. ಚಳಿಯಲ್ಲಿ ಗಡಗಡ ನಡುಗುತ್ತಾ, ಅದಕ್ಕಿಂತಾ ಹೆಚ್ಚಾಗಿ ಅರಣ್ಯ ಭಯದಲ್ಲಿ ತತ್ತರಿಸುತ್ತಾ, ಅದರ ಜೊತೆಗೆ ಕಳ್ಳರ ಭಯವೂ ಕಾಡುತ್ತಾ.. ಪ್ರತಿ ಕ್ಷಣವೂ ಆಂದೋಲನಕಾರಿಯಾಗಿ ಕಳೆಯುತ್ತಾ.. ಅಬ್ಬಾ ಅದು ನರಕಸದೃಶವೇ ಸರಿ.

ವಿಶಾಖಪಟ್ಟಣಂ (Visakhapatnam) ಡಿಪೋಗೆ ಸೇರಿದ AP31Z 0339 ಸಂಖ್ಯೆಯ RTC ಬಸ್ ಭದ್ರಾಚಲಂನಿಂದ ವಿಶಾಖಪಟ್ಟಣದ ಕಡೆಗೆ ಹೊರಟಿತ್ತು. ಅಲ್ಲೂರಿ ಸೀತಾರಾಮರಾಜು ಜಿಲ್ಲೆ ಜಿ.ಕೆ. ಸ್ಟ್ರೀಟ್ ಮಂಡಲದ ದಾರಾಳಮ್ಮ ಘಾಟ್ ರಸ್ತೆ ಹತ್ತುವಾಗ ಬಸ್ ಹಠಾತ್ತನೆ ನಿಂತಿದೆ. ಚಾಲಕ ಇಳಿದು ಪರಿಶೀಲಿಸಿದನು. ಎಲ್ಲಿಯೂ ಲೋಪ ಕಾಣಿಸಲಿಲ್ಲ. ಕೊನೆಗೆ ಡೀಸೆಲ್ ಟ್ಯಾಂಕ್ ಪರಿಶೀಲಿಸಿದಾಗ ಅದರಲ್ಲಿ ಇಂಧನ ಪೂರ್ತಿ ಖಾಲಿಯಾಗಿರುವುದು ಕಂಡು ಬಂದಿದೆ. ಮಧ್ಯರಾತ್ರಿ ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರಿದ್ದರು.

ಒಂದೆಡೆ ಮಾವೋವಾದಿಗಳ ಭಯ, ಮತ್ತೊಂದೆಡೆ ಕಳ್ಳರ ಭಯವಿತ್ತು. ಚಾಲಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರಯಾಣಿಕರ ಪರಿಸ್ಥಿತಿಯನ್ನು ಆರ್‌ಟಿಸಿ ಅಧಿಕಾರಿಗಳ ಗಮನಕ್ಕೆ ತಂದರು. ಆರ್‌ಟಿಸಿ ಅಧಿಕಾರಿಗಳು ಸ್ಪಂದಿಸಿ ಸೀಳೇರುವಿನಲ್ಲಿದ್ದ ರಾತ್ರಿ ನಿಲುಗಡೆ ಬಸ್ ಅನ್ನು ಆ ಅರಣ್ಯ ಪ್ರದೇಶದತ್ತ ಕಳಿಸಿದರು. ಸ್ಥಗಿತಗೊಂಡಿರುವ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ವಿಶಾಖಪಟ್ಟಣಕ್ಕೆ ಕರೆದೊಯ್ಯುವಂತೆ ಅಧಿಕಾರಿಗಳು ನೈಟ್ ಹಾಲ್ಟ್​​ ಬಸ್​​ ಚಾಲಕನಿಗೆ ಆದೇಶಿಸಿದರು. ಆವೇಳೆಗಾಗಲೇ ಎರಡು ಗಂಟೆ ಕಳೆದಿದೆ.

Also read: ನಟಿ, ಬಿಜೆಪಿ ಹಿರಿಯ ನಾಯಕಿ ವಿಜಯಶಾಂತಿ ಟ್ವೀಟ್, ತೆಲಂಗಾಣ ಬಿಜೆಪಿಯಲ್ಲಿ ಸಂಚಲನ

ಹಿರಿಯರು, ಮಕ್ಕಳು, ಮಹಿಳೆಯರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಾ ಕಾಲ ಕಳೆದಿದ್ದಾರೆ. ಅಂತೂ ಇಂತೂ ಸೀಳೇರುವಿನಿಂದ ನೈಟ್ ಹಾಲ್ಟ್​​ ಸರ್ವೀಸ್ ಬಸ್ ಘಟನಾ ಸ್ಥಳಕ್ಕೆ ತಲುಪುತ್ತಿದ್ದಂತೆ ಇಂಧನವಿಲ್ಲದ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ವಿಶಾಖಪಟ್ಟಣಕ್ಕೆ ಕರೆತಂದಿತು. ಇದರಿಂದಾಗಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ಟು ಪ್ರಯಾಣಿಕರು ಮತ್ತೊಂದು ಬಸ್ಸಿನಲ್ಲಿ ವಿಶಾಖಕ್ಕೆ ಬರುತ್ತಿದ್ದಂತೆ ಎಲ್ಲರೂ ಬದುಕಿದೆಯಾ ಬಡಜೀವವೇ ಎಂದಿದ್ದಾರೆ. ಆದರೆ ಈ ಘಟನೆಗೆ ಹೊಣೆ ಯಾರು..? ಬಸ್ ನಿಲ್ದಾಣದಿಂದ ಹೊರಡುವ ಮುನ್ನ ಆರ್ ಟಿಸಿ ಸಿಬ್ಬಂದಿ ಡೀಸೆಲ್ ಸಾಕಷ್ಟು ಇದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಬೇಕಿತ್ತು ಅಲ್ಲವಾ. ಇಲ್ಲಿ ಆರ್ ಟಿಸಿ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ತೋರುತ್ತಿದೆ.

ಆರ್ ಟಿಸಿ ಬಸ್ ಸರಿಯಾಗಿ ಡೀಸೆಲ್ ತುಂಬದೆ ಪ್ರಯಾಣಿಕರೊಂದಿಗೆ ಹೊರಟಿರುವುದು ಸ್ಪಷ್ಟವಾಗಿದೆ. ಅರ್ಧ ದಾರಿಯ ನಂತರ ಡೀಸೆಲ್ ಖಾಲಿಯಾಗಿ ದಾರಿ ಮಧ್ಯೆ ಕಾಡಿನಲ್ಲಿ ಆರ್ ಟಿಸಿ ಬಸ್ ನಿಂತಿದೆ. ಇದರಿಂದ ಪ್ರಯಾಣಿಕರು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಆರ್‌ಟಿಸಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹಲವಾರು ಪ್ರಯಾಣಿಕರು ಗಂಟೆಗಟ್ಟಲೆ ಚಿತ್ರಹಿಂಸೆ ಅನುಭವಿಸಬೇಕಾಯಿತು. ಇನ್ನಾದರೂ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ