
ನವದೆಹಲಿ : ರೈತರ ಹೋರಾಟಕ್ಕೆ ಸಂಬಂಧಿಸಿ ಪರಿಸರವಾದಿ ಗ್ರೇಟ್ ಥನ್ಬರ್ಗ್ (Greta Thunberg)
ಹಂಚಿಕೊಂಡಿದ್ದ ಟೂಲ್ ಕಿಟ್ ಪ್ರಕರಣದಲ್ಲಿ ಪರಿಸರವಾದಿ ದಿಶಾ ರವಿ (Disha Ravi) ಬಂಧನವನ್ನು ಖಂಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರೈತರಿಗೆ ಬೆಂಬಲ ನೀಡುವುದು ಅಪರಾಧವಲ್ಲ ಎಂದು ಟ್ವೀಟ್ ಮಾಡಿದ್ದಾರೆ.
21ರ ಹರೆಯದ ದಿಶಾ ರವಿ ಅವರ ಬಂಧನವು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ದಾಳಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಪರಿಸರವಾದಿ ದಿಶಾ ರವಿ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದರು. ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿವೆ. ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಘಟನೆ ಈ ಟೂಲ್ಕಿಟ್ ಸೃಷ್ಟಿಸಿದೆ ಎಂದು ಈ ಹಿಂದೆ ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇದನ್ನು ಪ್ರಸಾರ ಮಾಡಿರುವ ಆರೋಪ ದಿಶಾ ಮೇಲಿದೆ.
ಇದನ್ನೂ ಓದಿ: Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ
ನಾನು ಟೂಲ್ ಕಿಟ್ ಮಾಡಿಲ್ಲ. ನಾವು ರೈತರಿಗೆ ಬೆಂಬಲ ನೀಡಲು ಬಯಸುತ್ತೇವೆ. ಫೆಬ್ರವರಿ 3ರಂದು ನಾನು ಎರಡು ಸಾಲು ಎಡಿಟ್ ಮಾಡಿದ್ದೇನೆ ಎಂದು ಭಾನುವಾರ ದೆಹಲಿ ಕೋರ್ಟ್ ನಲ್ಲಿ ದಿಶಾ ರವಿ ಹೇಳಿದ್ದರು.