PM Narendra Modi: ಮುಸ್ಲಿಮರ ವಿರುದ್ದ ದ್ವೇಷ ಕಾರಬೇಡಿ ಎಂದು ಬಿಜೆಪಿ ನಾಯಕರಿಗೆ ಮೋದಿ‌ ಖಡಕ ಸೂಚನೆ

| Updated By: ವಿವೇಕ ಬಿರಾದಾರ

Updated on: Jan 18, 2023 | 6:41 AM

ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಸಮುದಾಯದ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ತಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ.

PM Narendra Modi: ಮುಸ್ಲಿಮರ ವಿರುದ್ದ ದ್ವೇಷ ಕಾರಬೇಡಿ ಎಂದು ಬಿಜೆಪಿ ನಾಯಕರಿಗೆ ಮೋದಿ‌ ಖಡಕ ಸೂಚನೆ
Image Credit source: Hindustan Times
Follow us on

ನವದೆಹಲಿ: ದೆಹಲಿಯಲ್ಲಿ (Delhi) ಎರಡು ದಿನಗಳ ಕಾಲ ನಡೆದ ಬಿಜೆಪಿ (BJP) ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಆಡಿರುವ ಒಂದು ಮಾತು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.‌ ಮುಸ್ಲಿಂ (Muslim) ಸಮುದಾಯದ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ಮೋದಿ ತಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ. ದೇಶದ ಅನೇಕ ಸಮುದಾಯಗಳು ಬಿಜೆಪಿಗೆ ಮತ ಹಾಕುವುದಿಲ್ಲ, ಆದರೆ ಬಿಜೆಪಿ ಕಾರ್ಯಕರ್ತರು ಮುಸ್ಲಿಂ ಸಮುದಾಯಕ್ಕೆ ಅಗೌರವ ತೋರದೆ, ಉತ್ತಮ ಸಮನ್ವಯತೆ ಸ್ಥಾಪಿಸಿ ಅವರೊಂದಿಗೆ ಉತ್ತಮ ನಡವಳಿಕೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ಹಿಂದೆ ಹೈದರಾಬಾದ್ ಕಾರ್ಯಕಾರಿಣಿಯಲ್ಲಿಯೂ ಪ್ರಧಾನಿ ಇದೇ ಮಾತನ್ನು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಇಂತಹ ಹೇಳಿಕೆ ನೀಡಬೇಕಾಯಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೋದಿಯವರ ಈ ಹೇಳಿಕೆಗಳ ನಂತರ ಬಿಜೆಪಿ ನಾಯಕರು ಮುಸ್ಲಿಂರ ವಿರುದ್ಧದ ದ್ವೇಷದ ಹೇಳಿಕೆಗಳು ಕಡಿಮೆಯಾಗಬಹುದೇ? ಆ ಸಮುದಾಯಕ್ಕೆ ತೆಗಳಿದರೆ ಮಾತ್ರ ಮತಗಳು ಬರುತ್ತವೆ ಎನ್ನುವ ಲೆಕ್ಕಾಚಾರದಲ್ಲಿರುವ ಮುಖಂಡರಿಂದ ಮುಸ್ಲಿಂ ಸಮಯದಾಯದ ವಿರುದ್ಧ ಮೌನ ವಹಿಸುವುದು ಸಾಧ್ಯವಾ..? ಎನ್ನುವ ಪ್ರಶ್ನೆ ಕಾಡತೊಡಗಿದೆ.

ಇತ್ತೀಚೆಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂದರ್ಶನವೊಂದರಲ್ಲಿ ಹಿಂದೂ ಸಮಾಜ ಸಾವಿರಾರು ವರ್ಷಗಳಿಂದ ಗುಲಾಮರಾಗಿದ್ದಾರೆ. ಇದರಿಂದಾಗಿ ಕೆಲವೊಮ್ಮೆ ಹಿಂದೂ ಸಮುದಾಯದ ಕಡೆಯಿಂದ ಆಕ್ರಮಣಕಾರಿ ನಡವಳಿಕೆ ಕಂಡುಬರುತ್ತದೆ ಎಂದಿದ್ದರು. ಇತಿಹಾಸದ ದೃಷ್ಟಿಯಲ್ಲಿ ಹಿಂದೂ ಸಮುದಾಯದ ಈ ಸಿಟ್ಟು ಸರಿಯಾಗಿದೆ ಎಂದು ಭಾಗವತ್ ಪರೋಕ್ಷವಾಗಿ ಬೆಂಬಲಿಸಿದರು. ಮೋಹನ್ ಭಾಗವತ್ ಅವರ ಈ ಹೇಳಿಕೆಗೆ ವ್ಯತಿರಿಕ್ತವಾಗಿ ಮುಸ್ಲಿಂ ಸಮುದಾಯದ ಪರ ಸಹಾನುಭೂತಿಯಿಂದ ಯೋಚಿಸುವಂತೆ ಪ್ರಧಾನಿ ಮೋದಿಯವರು ಕಾರ್ಯಕಾರಿಣಿಯಲ್ಲಿ ಉಪದೇಶ ನೀಡಿದ್ದಾರೆ. ಪ್ರಧಾನಿ ಮೋದಿಯವರ ಹೇಳಿಕೆ ಭಾಗವತ್‌ ಅವರ ಹೇಳಿಕೆಗಿಂತ ಭಿನ್ನವಾಗಿದೆ.

ಇದನ್ನೂ ಓದಿ:ಲೋಕಸಭಾ ಚುನಾವಣೆಗೆ ಕೇವಲ 400 ದಿನಗಳು ಬಾಕಿ ಉಳಿದಿವೆ‌, ಎಲ್ಲ ಮತದಾರರನ್ನು ತಲುಪಿ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಕಾರ್ಯಕಾರಿಣಿಯಲ್ಲಿ ಪಸ್ಮಾಂಡ ಮುಸ್ಲಿಮರನ್ನು ಬಿಜೆಪಿಯೊಂದಿಗೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಸಕಾರಾತ್ಮಕ ಕಾರ್ಯಕ್ರಮಗಳ ಮೂಲಕ ಅವರನ್ನು ಸೆಳೆಯುವ ಬಗ್ಗೆ ಸಲಹೆ ನೀಡಿದ್ದರು. ಇದರಿಂದ ಗುಜರಾತ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಒಂದಷ್ಟು ಲಾಭ ಸಿಕ್ಕಿದ್ದು, ಮುಸ್ಲಿಂ ಸಮುದಾಯದ ಒಂದಷ್ಟು ಮತಗಳು ಬಿಜೆಪಿ ಖಾತೆಗೆ ಬಂದಿವೆ. ಆದರೆ ಪ್ರಧಾನಿಯವರ ಮನವಿಯ ನಂತರವೂ ಕೆಲವು ಬಿಜೆಪಿ ನಾಯಕರು ಮುಸ್ಲಿಮರು ಮತ್ತು ಅವರ ಧಾರ್ಮಿಕ ಚಿಹ್ನೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದು ದೇಶದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತ್ತು. ಈ ಕಾರಣಕ್ಕಾಗಿ ಬಿಜೆಪಿ ತನ್ನ ಇಬ್ಬರು ಹಿರಿಯ ನಾಯಕರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಿತ್ತು.

ಮೋದಿಯವರ ಮುಸ್ಲಿಂ ಮೇಲಿನ ಮಮಕಾರಕ್ಕೆ ‘G20’ ಕಾರಣ ಇರಬಹುದೇ..?

ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಸ್ಲಿಂ ಪರವಾಗಿ ಹೇಳಿಕೆಯನ್ನು ಏಕೆ ನೀಡಿದ್ದಾರೆ ಎನ್ನುವುದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಗೊಂದಲ ಶುರುವಾಗಿದೆ. ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವ ಗೋಜಿಗೆ ಬಿದ್ದಿದ್ದಾರೆ‌. ಆದರೆ ಮೋದಿಯವರ ಹೇಳಿಕೆಯ ಹಿಂದೆ ನಾನಾ ತಂತ್ರಗಾರಿಕೆ ಅಡಗಿರುತ್ತೆ‌. ಈ ವರ್ಷ ಭಾರತ ಜಿ20 ಆತಿಥ್ಯ ವಹಿಸುತ್ತಿದೆ‌. ಇಡೀ ವಿಶ್ವದಲ್ಲೇ ಉತ್ತಮ ಸ್ಥಾನ ಪಡೆಯುವತ್ತ ದೇಶ ಸಾಗುತ್ತಿದೆ. ವಿಶ್ವದ ಗಮನ ಭಾರತದತ್ತ ನೆಟ್ಟಿರುವ ಜಿ20 ಕೂಟಕ್ಕೆ ಈ ವರ್ಷ ಭಾರತ ಆತಿಥ್ಯ ವಹಿಸುತ್ತಿರುವುದು ಈ ಮೋದಿಯವರ ಹೇಳಿಕೆಯ ಹಿಂದಿನ ತಂತ್ರಗಾರಿಕೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಳೆದ ವರ್ಷ ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿ ನಾಯಕರು ಮಾಡಿದ ಅಸಭ್ಯ ಹೇಳಿಕೆಗಳಿಂದಾಗಿ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಿತ್ತು. ಕೆಲವು ಮುಸ್ಲಿಂ ರಾಷ್ಟ್ರಗಳು ಭಾರತದ ಆಡಳಿತ ಪಕ್ಷದ ನಾಯಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದವು ಮತ್ತು ಭಾರತದಿಂದ ಆಮದು ಮಾಡಿಕೊಳ್ಳುವುದನ್ನು ಮರುಪರಿಶೀಲಿಸುವಂತೆ ಒತ್ತಡ ಹೆಚ್ಚಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇಮೇಜ್ ಗಟ್ಟಿಯಾಗುತ್ತಿರುವಾಗ ತಮ್ಮದೇ ಪಕ್ಷದ ನಾಯಕರ ಹೇಳಿಕೆಗಳಿಂದ ಭಾರತದ ಘನತೆ ಹಾಳಾಗುವುದನ್ನು ಅವರು ಬಯಸುವುದಿಲ್ಲ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.

ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಶಕ್ತಿಯಾಗುವ ಹಾದಿಯಲ್ಲಿ ಮುನ್ನಡೆಯುತ್ತಿದೆ. ಈ ಬೆಳವಣಿಗೆ ಮಧ್ಯೆ ದೇಶದ ಸುಮಾರು 15ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಪ್ರತ್ಯೇಕಿಸುವ ಮೂಲಕ ದೇಶವನ್ನು ವಿಶ್ವದ ಅಂತರರಾಷ್ಟ್ರೀಯ ಶಕ್ತಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಮೋದಿ ಅರಿತಿದ್ದಾರೆ. ಇದೇ ಕಾರಣಕ್ಕೆ ಮೋದಿ‌ಯವರು ತಮ್ಮ ಮನದಲ್ಲಿ ಮೂಡಿರುವ ಅನುಮಾನಗಳನ್ನು ಹೋಗಲಾಡಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಘಪರಿವಾದ ನಡೆ ತದ್ವಿರುದ್ಧವಾಗಿದೆ.‌ ಮೋದಿಯವರು ಮುಸ್ಲಿಂ‌‌ ಮೇಲೆ‌ ಸಹನೂಭೂತಿ ತೋರುತ್ತಿದ್ದಾರೆ ಎನ್ನುವಷ್ಟರಲ್ಲೇ ಸಂಘದ ನಾಯಕರು ಮುಸ್ಲಿಂ ದ್ವೇಷದ ಭಾಷಣಗಳನ್ನು ನೀಡುತ್ತಲೆ ಇದ್ದಾರೆ.

ವರದಿ-ಹರೀಶ್ ಟಿವಿ9 ನವದೆಹಲಿ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:41 am, Wed, 18 January 23