ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಂ ಬೆಳಗ್ಗೆಯೇ ಜವರಾಯ ವಕ್ಕರಿಸಿದ್ದಾನೆ. ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟವರೇ ಹೆಚ್ಚಾಗಿದ್ದಾರೆ. ಲೋಕ ನಾಯಕ್ ಆಸ್ಪತ್ರೆಯೊಂದರಲ್ಲೇ 34 ಜನ ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಬೆಳಗ್ಗೆ 5 ಗಂಟೆ ಸುಮಾರಿಗೆ ಸ್ಕೂಲ್ ಬ್ಯಾಗ್, ಬಾಟಲ್ ತಯಾರಿಕೆ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ನಿದ್ರೆಯಲ್ಲಿದ್ದ ಕಾರ್ಮಿಕರು ಚಿರನಿದ್ರೆಗೆ ಜಾರಿದ್ದಾರೆ. ಬೆಂಕಿ ಮಧ್ಯೆ ಸಿಲುಕಿದ ಕೆಲ ಕಾರ್ಮಿಕರು ಹೊರಬರಲಾಗದೆ ಸಜೀವ ದಹನವಾಗಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದವರು 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ.