
ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ (BOB) ಉತ್ತಮ ಅವಕಾಶವನ್ನು ನೀಡಿದೆ. ದೇಶಾದ್ಯಂತ ಇರುವ ಬ್ಯಾಂಕ್ ಶಾಖೆಗಳಲ್ಲಿ ನಿಯಮಿತ ಆಧಾರದ ಮೇಲೆ ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 2,482 ಬ್ಯಾಂಕ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು ಹುದ್ದೆಗಳಲ್ಲಿ ಆಂಧ್ರಪ್ರದೇಶ ರಾಜ್ಯದಲ್ಲಿ 80 ಹುದ್ದೆಗಳು ಹಾಗೂ ತೆಲಂಗಾಣ ರಾಜ್ಯದಲ್ಲಿ 50 ಹುದ್ದೆಗಳು ಖಾಲಿ ಇವೆ. ಆಸಕ್ತರು ವೆಬ್‌ಸೈಟ್‌ಗೆ ಭೇಟಿ ನೀಡಿ ವಿವರ ಪರಿಶೀಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಪೂರ್ಣಗೊಳಿಸಿರಬೇಕು. ಇದರೊಂದಿಗೆ ನಿಗದಿತ ವಾಣಿಜ್ಯ ಬ್ಯಾಂಕಿನಲ್ಲಿ ಕನಿಷ್ಠ ಒಂದು ವರ್ಷದ ಹುದ್ದೆಗೆ ಸಂಬಂಧಿಸಿದ ಸೇವಾನುಭವ ಹೊಂದಿರುವುದು ಕಡ್ಡಾಯವಾಗಿದೆ.
ಅಭ್ಯರ್ಥಿಯು ತಾನು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಸಮರ್ಥರಿರಬೇಕು. ಆಗಸ್ಟ್ 1, 2026 ರ ವೇಳೆಗೆ ಅಭ್ಯರ್ಥಿಗಳ ವಯಸ್ಸು 21 ರಿಂದ 30 ವರ್ಷಗಳ ನಡುವೆ ಇರಬೇಕು. ನಿಯಮಾವಳಿಗಳ ಪ್ರಕಾರ SC/ST ಗೆ 5 ವರ್ಷ, OBC ಗೆ 3 ವರ್ಷ ಮತ್ತು PwBD ಅಭ್ಯರ್ಥಿಗಳಿಗೆ ಗರಿಷ್ಠ 15 ವರ್ಷಗಳ ವಯೋಮಿತಿ ಸಡಿಲಿಕೆ ಸಿಗಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಮೂಲ ವೇತನ ರೂ. 48,480 ರಿಂದ ಆರಂಭವಾಗಿ ರೂ. 85,920 ರವರೆಗೆ ಇರಲಿದೆ. ಇದರ ಜೊತೆಗೆ ಬ್ಯಾಂಕ್ ನಿಯಮಗಳ ಪ್ರಕಾರ ವಿವಿಧ ಭತ್ಯೆಗಳು ಸಿಗಲಿವೆ. ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ ರೂ. 850 ಹಾಗೂ SC, ST, PwBD, ESM ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 175 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆಯನ್ನು ವಿವಿಧ ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲು ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದಾದ ನಂತರ ಸೈಕೋಮೆಟ್ರಿಕ್ ಪರೀಕ್ಷೆ, ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ಹಾಗೂ ಕೊನೆಯದಾಗಿ ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಂತಿಮ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ
ಆನ್‌ಲೈನ್ ಪರೀಕ್ಷೆಯು ಒಟ್ಟು 120 ನಿಮಿಷಗಳ ಕಾಲ ನಡೆಯಲಿದ್ದು, 120 ಬಹು ಆಯ್ಕೆ ಪ್ರಶ್ನೆಗಳಿಗೆ 120 ಅಂಕಗಳನ್ನು ನಿಗದಿಪಡಿಸಲಾಗಿದೆ. ಇಂಗ್ಲಿಷ್, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ/ಆರ್ಥಿಕ ಜಾಗೃತಿ ಹಾಗೂ ತಾರ್ಕಿಕ ಮತ್ತು ಪರಿಮಾಣಾತ್ಮಕ ಆಪ್ಟಿಟ್ಯೂಡ್ ವಿಭಾಗಗಳಿಂದ ತಲಾ 30 ಪ್ರಶ್ನೆಗಳು ಬರಲಿವೆ. ಪ್ರತಿ ತಪ್ಪು ಉತ್ತರಕ್ಕೆ 0.25 ಋಣಾತ್ಮಕ (Negative) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 7ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ವೀಕ್ಷಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ