
ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಶುಭ ಸುದ್ದಿ ನೀಡಿದೆ. ದೇಶಾದ್ಯಂತ ಇರುವ ತನ್ನ ಒಂಬತ್ತು ಉತ್ಪಾದನಾ ಘಟಕಗಳಲ್ಲಿ ಒಟ್ಟು 660 ‘ಕುಶಲಕರ್ಮಿ ಗ್ರೇಡ್-4’ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ ಒಟ್ಟು ಏಳು ಪ್ರಮುಖ ಟ್ರೇಡ್ಗಳಲ್ಲಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು BHEL ನ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
BHEL ಕುಶಲಕರ್ಮಿ ನೇಮಕಾತಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 21, 2026 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 18 ರ ರಾತ್ರಿ 11:45 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಇನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBT) ಡಿಸೆಂಬರ್ 11, 2026 ರಂದು ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ.
ಪ್ರಕಟಿತ ಅಧಿಸೂಚನೆಯ ಪ್ರಕಾರ ಒಟ್ಟು 660 ಹುದ್ದೆಗಳನ್ನು ವಿವಿಧ ಏಳು ಟ್ರೇಡ್ಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಫಿಟ್ಟರ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂದರೆ 278 ಹುದ್ದೆಗಳಿವೆ. ಉಳಿದಂತೆ ವೆಲ್ಡರ್ ವಿಭಾಗದಲ್ಲಿ 104, ಮೆಷಿನಿಸ್ಟ್ ವಿಭಾಗದಲ್ಲಿ 101 ಹಾಗೂ ಎಲೆಕ್ಟ್ರಿಷಿಯನ್ ವಿಭಾಗದಲ್ಲಿ 90 ಹುದ್ದೆಗಳಿವೆ. ಹಾಗೆಯೇ ಟರ್ನರ್ ವಿಭಾಗಕ್ಕೆ 52, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ವಿಭಾಗಕ್ಕೆ 23 ಮತ್ತು ಫೌಂಡ್ರಿಮ್ಯಾನ್ ವಿಭಾಗಕ್ಕೆ 12 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ ಸಂಬಂಧಿತ ಟ್ರೇಡ್ನಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC/ITI) ಅಥವಾ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (NAC) ಹೊಂದಿರಬೇಕಾಗುತ್ತದೆ. ಪ್ರತಿ ಟ್ರೇಡ್ಗೆ ಅನುಗುಣವಾಗಿ ಕನಿಷ್ಠ ಅಂಕಗಳು ಹಾಗೂ ಇತರ ಷರತ್ತುಗಳು ಬದಲಾಗುವುದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಅವಶ್ಯಕ.
ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!
ಅಭ್ಯರ್ಥಿಗಳ ಪ್ರಾಥಮಿಕ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಮೂಲಕ ಮಾಡಲಾಗುತ್ತದೆ. CBT ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಅಧಿಸೂಚನೆಯಲ್ಲಿ ತಿಳಿಸಿರುವ ಮಾನದಂಡಗಳಂತೆ ಪ್ರಮಾಣಪತ್ರಗಳ ಪರಿಶೀಲನೆ ಮತ್ತು ಕೌಶಲ್ಯ ಪರೀಕ್ಷೆಗೆ (Skill Test) ಕರೆಯಲಾಗುತ್ತದೆ. ಪರೀಕ್ಷಾ ವಿಧಾನ, ಅರ್ಜಿ ಶುಲ್ಕ ಹಾಗೂ ವಯೋಮಿತಿ ಸಡಿಲಿಕೆಯ ಕುರಿತಾದ ಹೆಚ್ಚಿನ ವಿವರಗಳನ್ನು BHEL ಅಧಿಕೃತ ಪ್ರಕಟಣೆಯಲ್ಲಿ ಪರಿಶೀಲಿಸಬಹುದು.
ಅರ್ಹ ಅಭ್ಯರ್ಥಿಗಳು BHEL ನ ಅಧಿಕೃತ ಕ್ಯಾರಿಯರ್ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ನಿಯಮಗಳ ಪ್ರಕಾರ ಒಬ್ಬ ಅಭ್ಯರ್ಥಿಯು ಕೇವಲ ಒಂದು ಉತ್ಪಾದನಾ ಘಟಕ ಮತ್ತು ಒಂದು ಟ್ರೇಡ್ಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆದ್ದರಿಂದ ಸೂಕ್ತವಾದ ಘಟಕ ಮತ್ತು ಟ್ರೇಡ್ ಆಯ್ಕೆ ಮಾಡುವ ಮೊದಲು ಖಾಲಿ ಹುದ್ದೆಗಳ ವಿವರಗಳನ್ನು ಪರಿಶೀಲಿಸಿ, ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ