ಭೋಜಶಾಲಾ ವಿವಾದ: ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ನಿರಾಕರಣೆ, ಸಂಕೀರ್ಣದೊಳಗೆ ನಮಾಜ್ ನಿಷೇಧ ಯಥಾವತ್ತು

ಭೋಜಶಾಲಾ-ಕಮಲ್ ಮೌಲಾ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ನಿರಾಕರಿಸಿದೆ. ಸಂಕೀರ್ಣದೊಳಗೆ ನಮಾಜ್ ನಿಷೇಧ ಯಥಾವತ್ತು ಮುಂದುವರಿದಿದ್ದು, ಶುಕ್ರವಾರ ಮಧ್ಯಾಹ್ನ ಹೊರಭಾಗದ ತೆರೆದ ಪ್ರದೇಶದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಸಿಜೆಐ ಸೂಕ್ಷ್ಮತೆಯ ಬಗ್ಗೆ ಎಚ್ಚರಿಕೆ ನೀಡಿದ್ದು, ಮುಂದಿನ ವಿಚಾರಣೆ ಜುಲೈ ಮೂರನೇ ವಾರದಲ್ಲಿ ನಡೆಯಲಿದೆ.

ಭೋಜಶಾಲಾ ವಿವಾದ: ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ನಿರಾಕರಣೆ, ಸಂಕೀರ್ಣದೊಳಗೆ ನಮಾಜ್ ನಿಷೇಧ ಯಥಾವತ್ತು
ಭೋಜಶಾಲಾ

Updated on: Jul 14, 2026 | 3:01 PM

ನವದೆಹಲಿ, ಜುಲೈ 14: ದೇಶದ ಮತ್ತೊಂದು ಅತ್ಯಂತ ಸೂಕ್ಷ್ಮ ಧಾರ್ಮಿಕ ಕೇಂದ್ರವಾದ ಮಧ್ಯಪ್ರದೇಶದ ಧಾರ್ ಜಿಲ್ಲೆಯ ‘ಭೋಜಶಾಲಾ-ಕಮಲ್ ಮೌಲಾ ಮಸೀದಿ’ ಸಂಕೀರ್ಣವನ್ನು ದೇವಾಲಯವೆಂದು ಘೋಷಿಸಿದ್ದ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಇದರೊಂದಿಗೆ ಸಂಕೀರ್ಣದ ಒಳಭಾಗದಲ್ಲಿ ಮುಸ್ಲಿಮರು ನಮಾಜ್(Namaz) ಮಾಡುವುದಕ್ಕೆ ಇದ್ದ ನಿಷೇಧ ಸದ್ಯಕ್ಕೆ ಮುಂದುವರೆದಿದೆ.

ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (CJI) ನೇತೃತ್ವದ ಪೀಠವು ಮಧ್ಯಂತರ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ. ಅದರಂತೆ, ಭೋಜಶಾಲಾ ಸಂಕೀರ್ಣದ ಒಳಗೆ ಯಾವುದೇ ನಮಾಜ್ ಮಾಡಲು ಅವಕಾಶವಿರುವುದಿಲ್ಲ. ಬದಲಿಗೆ, ಸಂಕೀರ್ಣದ ಪಕ್ಕದಲ್ಲಿರುವ ತೆರೆದ ಜಾಗದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿ ಶುಕ್ರವಾರ ಮಧ್ಯಾಹ್ನ 1 ರಿಂದ 3 ರವರೆಗೆ ಪ್ರಾರ್ಥನೆ ಸಲ್ಲಿಸಲು ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇವು ಬಹಳ ಸೂಕ್ಷ್ಮ ವಿಷಯಗಳು, ತಾಳ್ಮೆಯಿಂದಿರಿ: ಸಿಜೆಐ ಕಿವಿಮಾತು

ವಿಚಾರಣೆಯ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಅಗತ್ಯವನ್ನು ಮುಖ್ಯ ನ್ಯಾಯಮೂರ್ತಿಗಳು ಬಲವಾಗಿ ಒತ್ತಿ ಹೇಳಿದರು. ‘‘ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ. ಇಲ್ಲಿ ನ್ಯಾಯಾಲಯ ಆತುರದಲ್ಲಿ ನೀಡುವ ಯಾವುದೇ ಸಣ್ಣ ಆದೇಶವೂ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಬಹುದು ಮತ್ತು ಕಾನೂನು,ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸಬಹುದು. ಹೈಕೋರ್ಟ್ ಆದೇಶದ ಬೆನ್ನಲ್ಲೇ ಉಂಟಾಗಿರುವ ರಾಜ್ಯದ ಅಸಹಾಯಕತೆಯನ್ನು ನಾವು ಗಮನಿಸಿದ್ದೇವೆ. ಹಾಗಾಗಿ ಎರಡೂ ಧರ್ಮದವರು ತಾಳ್ಮೆಯಿಂದ ಇರಬೇಕು’’ ಎಂದು ಸಿಜೆಐ ಹೇಳಿದ್ದಾರೆ.

ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ವೀಕರಿಸಿದ ಪೀಠವು, ಹಿಂದೂ ಪಕ್ಷಗಳು, ಕೇಂದ್ರ ಸರ್ಕಾರ, ಮಧ್ಯಪ್ರದೇಶ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಸಮೀಕ್ಷೆ (ASI) ಇಲಾಖೆಗೆ ಅಧಿಕೃತ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೋರಿದೆ. ಅಷ್ಟೇ ಅಲ್ಲದೆ, ನ್ಯಾಯಾಲಯದ ಲಿಖಿತ ಅನುಮತಿಯಿಲ್ಲದೆ ಎಎಸ್‌ಐ ಸಂಸ್ಥೆಯು ವಿವಾದಿತ ಸ್ಥಳದಲ್ಲಿ ಯಾವುದೇ ರೀತಿಯ ರಚನಾತ್ಮಕ ಬದಲಾವಣೆಗಳನ್ನು ಮಾಡುವಂತಿಲ್ಲ ಎಂದು ಕಠಿಣ ಆದೇಶ ನೀಡಿದೆ.

ಮತ್ತಷ್ಟು ಓದಿ: ಹೊನ್ನಾವರ: ಅಝಾನ್ ಮೊಳಗಿಸುತ್ತಿದ್ದ ಪವಿತ್ರ ಕ್ಷಣದಲ್ಲೇ ಇಹಲೋಕ ತ್ಯಜಿಸಿದ ಮೌಲ್ವಿ

ವಿವಾದದ ಹಿನ್ನೆಲೆ ಮತ್ತು ಹೈಕೋರ್ಟ್ ನೀಡಿದ್ದ ಟ್ವಿಸ್ಟ್

ಈ ಇಡೀ ಸಂಘರ್ಷಕ್ಕೆ ಕಾರಣವಾಗಿದ್ದು ಮೇ 15 ರಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪು. ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ಪೀಠವು, 11ನೇ ಶತಮಾನದ ಈ ಸ್ಮಾರಕವು ಮೂಲತಃ ವಾಗ್ದೇವಿ ದೇವಾಲಯ ಮತ್ತು ಪ್ರಾಚೀನ ಸಂಸ್ಕೃತ ಕಲಿಕಾ ಕೇಂದ್ರವಾಗಿತ್ತು ಎಂದು ತೀರ್ಪು ನೀಡಿತ್ತು.

ಇದಕ್ಕೂ ಮುನ್ನ, 2003 ರ ಎಎಸ್‌ಐ ನಿಯಮದ ಪ್ರಕಾರ ಹಿಂದೂಗಳು ಪ್ರತಿ ಮಂಗಳವಾರ ಪೂಜೆ ಮಾಡಲು ಹಾಗೂ ಮುಸ್ಲಿಮರು ಪ್ರತಿ ಶುಕ್ರವಾರ ಒಳಗೆ ನಮಾಜ್ ಮಾಡಲು ಅವಕಾಶವಿತ್ತು. ಆದರೆ ಹೈಕೋರ್ಟ್ ಈ ಹಳೆಯ ವ್ಯವಸ್ಥೆಯನ್ನು ರದ್ದುಗೊಳಿಸಿ, ಒಳಗೆ ನಮಾಜ್ ಮಾಡುವುದನ್ನು ಸಂಪೂರ್ಣ ನಿಷೇಧಿಸಿತ್ತು. ಅಲ್ಲದೆ, ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಿಸಲು ಧಾರ್ ನಗರದಲ್ಲೇ ಪರ್ಯಾಯ ಭೂಮಿಯನ್ನು ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇದನ್ನು ಮಸೀದಿಯ ಉಸ್ತುವಾರಿ ಖಾಜಿ ಮೊಯಿನುದ್ದೀನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಜುಲೈ 3ನೇ ವಾರದಲ್ಲಿ ಅಂತಿಮ ಜಿದ್ದಾಜಿದ್ದಿ

ಐತಿಹಾಸಿಕ ಪ್ರಾಮುಖ್ಯತೆ: ಇತಿಹಾಸಕಾರರ ಪ್ರಕಾರ, ಈ ಭೋಜಶಾಲೆಯನ್ನು ತತ್ವಜ್ಞಾನಿ ಹಾಗೂ ಕಲಾ ಪೋಷಕನಾಗಿದ್ದ ರಾಜ ಭೋಜನ ಕಾಲದಲ್ಲಿ ನಿರ್ಮಿಸಲಾಗಿತ್ತು. ನಂತರದ ಮೊಘಲ್ ಆಡಳಿತಾವಧಿಯಲ್ಲಿ ಇದರ ಒಂದು ಭಾಗವನ್ನು ಕಮಲ್ ಮೌಲಾ ಮಸೀದಿಯಾಗಿ ಪರಿವರ್ತಿಸಲಾಯಿತು ಎಂಬುದು ಹಿಂದೂಗಳ ವಾದವಾಗಿದೆ. ಅಯೋಧ್ಯೆ ಮತ್ತು ಜ್ಞಾನವಾಪಿಯಂತೆಯೇ ಇದು ಕೂಡ ದೇಶದ ಅತ್ಯಂತ ಹಳೆಯ ಧಾರ್ಮಿಕ ವಿವಾದಗಳಲ್ಲಿ ಒಂದಾಗಿದೆ.

ಸುಪ್ರೀಂ ಕೋರ್ಟ್ ಸದ್ಯಕ್ಕೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಮಧ್ಯಂತರ ಆದೇಶ ನೀಡಿದ್ದು, ಪ್ರಕರಣದ ಮುಂದಿನ ಪ್ರಮುಖ ವಿಚಾರಣೆಯನ್ನು ಜುಲೈ ಮೂರನೇ ವಾರದಲ್ಲಿ ಕೈಗೆತ್ತಿಕೊಳ್ಳಲಿದೆ. ಜುಲೈ ಅಂತ್ಯದ ವೇಳೆಗೆ ದೇಶದ ಅತ್ಯುನ್ನತ ನ್ಯಾಯಾಲಯವು ಈ ಸೂಕ್ಷ್ಮ ಬಿಕ್ಕಟ್ಟಿಗೆ ಶಾಶ್ವತ ಪರಿಹಾರದ ದಾರಿ ತೋರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us