ಭೋಪಾಲ್ – ಉಜ್ಜೈನ್ ರೈಲು ಸ್ಫೋಟ, 7 ಅಪರಾಧಿಗಳಿಗೆ ಮರಣದಂಡನೆ; ಮೋದಿ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದ ಉಗ್ರರು

|

Updated on: Feb 28, 2023 | 9:57 PM

ಅಪರಾಧಿಗಳು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದರು. ಸಿರಿಯಾ ಮತ್ತು ಇರಾಕ್​ಗೆ ಪಲಾಯನ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

ಭೋಪಾಲ್ - ಉಜ್ಜೈನ್ ರೈಲು ಸ್ಫೋಟ, 7 ಅಪರಾಧಿಗಳಿಗೆ ಮರಣದಂಡನೆ; ಮೋದಿ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದ ಉಗ್ರರು
ಎನ್​ಐಎ (ಸಾಂದರ್ಭಿಕ ಚಿತ್ರ)
Image Credit source: prajavani.net
Follow us on

ನವದೆಹಲಿ: ಭೋಪಾಲ್ – ಉಜ್ಜೈನ್ ಪ್ಯಾಸೆಂಜರ್​​ ರೈಲಿನಲ್ಲಿ 2017ರಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದ (Bhopal-Ujjain passenger train blast case) 8 ಮಂದಿ ಅಪರಾಧಿಗಳ ಪೈಕಿ 7 ಮಂದಿಗೆ ಉತ್ತರ ಪ್ರದೇಶದ ಎನ್​​ಐಎ ನ್ಯಾಯಾಲಯ ಮರಣದಂಡನೆ ಶಿಕ್ಷೆ (Death Sentence) ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ಮತ್ತೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಅಪರಾಧಿಗಳಾದ ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್, ಅಝರ್, ಆತಿಫ್​ ಮುಜಾಫರ್, ಡ್ಯಾನಿಶ್, ಮಿರ್ ಹುಸೇನ್ ಮತ್ತು ಆಸಕಿಫ್ ಇಕ್ಬಾಲ್​ಗೆ ಮರಣದಂಡನೆ ವಿಧಿಸಲಾಗಿದೆ. ಮತ್ತೊಬ್ಬ ಅಪರಾಧಿ ಆತಿಫ್​ ಇರಾಕಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಅಪರಾಧಿಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದರು ಎನ್ನಲಾಗಿದೆ.

2017ರ ಮಾರ್ಚ್ 7ರಂದು ಭೋಪಾಲ್ – ಉಜ್ಜೈನ್ ಪ್ಯಾಸೆಂಜರ್​​ ರೈಲಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿ 10 ಮಂದಿ ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್​ ಬೆಂಬಲಿತ ಉಗ್ರರು ಭಾರತದಲ್ಲಿ ನಡೆಸಿದ ಮೊದಲ ದಾಳಿ ಇದು ಎನ್ನಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಶಂಕಿತ ಉಗ್ರರನ್ನು ಎನ್​ಕೌಂಟರ್​​ನಲ್ಲಿ ಹತ್ಯೆ ಮಾಡಲಾಗಿತ್ತು. ಉಳಿದವರನ್ನು ಬಂಧಿಸಲಾಗಿತ್ತು. ನಂತರ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಉಗ್ರರು ಸ್ವಯಂಪ್ರೇರಿತರಾಗಿ ದಾಳಿ ನಡೆಸಿದ್ದಾರೆ, ಇಸ್ಲಾಮಿಕ್ ಸ್ಟೇಟ್​ನಿಂದ ಹಣಕಾಸು ನೆರವು ಪಡೆದಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.

ಬಂಧಿತ ಉಗ್ರರು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದರು ಎಂದು ಎನ್​ಐಎ ನಂತರ ತಿಳಿಸಿತ್ತು. ಅಲ್ಲದೆ, ದಾಳಿಯಲ್ಲಿ ಶಾಮೀಲಾದ ಉಗ್ರರು ಸಿರಿಯಾ ಮತ್ತು ಇರಾಕ್​ಗೆ ಪಲಾಯನ ಮಾಡಲು ಯತ್ನಿಸಿದ್ದರು ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:56 pm, Tue, 28 February 23