ಪಟನಾ: ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (LJP)ಯ ಏಕೈಕ ವಿಧಾನಪರಿಷತ್ ಸದಸ್ಯೆ (MLC) ನೂತನ್ ಸಿಂಗ್ ಸೋಮವಾರ ಬಿಜೆಪಿಗೆ ಸೇರಿದ್ದಾರೆ. ಕಳೆದ ವಾರ ಎಲ್ ಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೇಶವ್ ಸಿಂಗ್ ಸೇರಿದಂತೆ 200 ಸದಸ್ಯರು ಜೆಡಿ(ಯು) ಸೇರಿದ್ದರು. 2020 ವಿಧಾನಸಭೆ ಚುನಾವಣೆಗೆ ಮುನ್ನ ಪಾಸ್ವಾನ್ ಅವರ ಪಕ್ಷಕ್ಕೆ ಸೇರಿದ್ದ ಮಾಜಿ ಶಾಸಕ, ಬಿಜೆಪಿ ನಾಯಕ ರಾಮೇಶ್ವರ್ ಚೌರಾಸಿಯಾ ಕಳೆದ ವಾರ ಎಲ್ಜೆಪಿ ತೊರೆದಿದ್ದರು.
ಬಿಜೆಪಿ ಸಚಿವ ನೀರಜ್ ಸಿಂಗ್ ಅವರ ಪತ್ನಿಯಾಗಿದ್ದಾರೆ ನೂತನ್ ಸಿಂಗ್. ನಾವಿಬ್ಬರೂ ಜತೆಯಾಗಿ ಕೆಲಸ ಮಾಡುವ ಉದ್ದೇಶದಿಂದ ನಾನು ಬಿಜೆಪಿ ಸೇರಿದೆ ಎಂದು ಬಿಜೆಪಿ ಅಧ್ಯಕ್ಷ, ಸಂಸದ ಸಂಜಯ್ ಜೈಸ್ವಾಲ್ ಅವರ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರಿದ ನೂತನ್ ಸಿಂಗ್ ಹೇಳಿದ್ದಾರೆ. ನೂತನ್ ಸಿಂಗ್ ಅವರು ಎಲ್ಜೆಪಿ ತೊರೆದ ಕಾರಣ 75 ಸದಸ್ಯರಿರುವ ಬಿಹಾರ ವಿಧಾನಪರಿಷತ್ನಲ್ಲಿ ಎಲ್ಜೆಪಿಗೆ ಯಾವುದೇ ಸೀಟು ಇಲ್ಲದಾಗಿದೆ. ಎಲ್ಜೆಪಿಯ ಏಕೈಕ ಶಾಸಕ ರಾಜ್ ಕುಮಾರ್ ಸಿಂಗ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆ ಸಭೆ ನಡೆಸಿದ ನಂತರ ಜೆಡಿ(ಯು) ಸೇರುವ ಸಾಧ್ಯತೆ ಇದೆ ಎಂಬ ವದಂತಿ ಕೇಳಿ ಬಂದಿದೆ.
ವಿಧಾನಪರಿಷತ್ ವಲ್ಲಿ ಜೆಡಿ(ಯು) 23 ಸದಸ್ಯರನ್ನು ಹೊಂದಿದ್ದು, ಬಿಜೆಪಿಗೆ 21 ಸದಸ್ಯರಿದ್ದಾರೆ. ಎನ್ಡಿಎ ಮೈತ್ರಿಕೂಟದ ಎಚ್ಎಎಂ(ಎಸ್) ಮತ್ತು ವಿಐಪಿ ಪಕ್ಷ ತಲಾ ಒಬ್ಬ ಸದಸ್ಯರನ್ನು ಹೊಂದಿದೆ. ವಿಪಕ್ಷ ಆರ್ ಜೆಡಿಯಲ್ಲಿ 6, ಕಾಂಗ್ರೆಸ್-4 ಮತ್ತು ಸಿಪಿಐ- 2 ಸದಸ್ಯರನ್ನು ಹೊಂದಿದೆ. ಒಬ್ಬ ಸ್ವತಂತ್ರ ಎಂಎಲ್ಸಿ ಮತ್ತು 16 ಸೀಟುಗಳು ಖಾಲಿ ಇವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ವಿರುದ್ಧ ಪಾಸ್ವಾನ್ ಅವರ ಎಲ್ಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಎಲ್ ಜೆಪಿ ಎನ್ ಡಿಎಯ ಅಂಗವಾಗಿ ನಾವು ಪರಿಗಣಿಸುವುದಿಲ್ಲ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದ್ದರು. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಎಚ್ಎಎಂ(ಎಸ್) ವಕ್ತಾರ ಡಾನೀಶ್ ರಿಜ್ವಾನ್, ಚಿರಾಗ್ ಪಾಸ್ವಾನ್ ಅವರ ಹಂಬಲಗಳೇ ಅವರಿಗೆ ಮುಳುವಾಗಿದೆ ಎಂದಿದ್ದಾರೆ.
ಎಲ್ಜೆಪಿ ಸದಸ್ಯರ ರಾಜೀನಾಮೆ ಪರ್ವ
ಫೆಬ್ರವರಿ 17ರಂದು ರಾಮೇಶ್ವರ್ ಚೌರಾಸಿಯಾ ಎಲ್ಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ 208 ನಾಯಕರು ಪಕ್ಷ ತೊರೆದು ಜೆಡಿಯು ಪಕ್ಷ ಸೇರಿದ್ದರು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಳ್ಳಲು ಚಿರಾಗ್ ಪಾಸ್ವಾನ್ ಅವರೇ ಕಾರಣ ಎಂದು ಈ ನಾಯಕರು ಆರೋಪಿಸಿದ್ದರು. ಪಕ್ಷಕ್ಕೆ ರಾಜೀನಾಮೆ ನೀಡಿದವರಲ್ಲಿ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಗಳ ಇದ್ದಾರೆ. ಜೆಡಿಯು ರಾಷ್ಟ್ರಾಧ್ಯಕ್ಷ ಆರ್.ಸಿ.ಪಿ ಸಿಂಗ್ ಮತ್ತು ರಾಜ್ಯಾಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ ಅವರ ಉಪಸ್ಥಿತಿಯಲ್ಲಿ ಈ ನಾಯಕರು ಜೆಡಿಯು ಸೇರಿದ್ದರು.
ಎಲ್ ಜೆಪಿಯ ಮಾಜಿ ವಕ್ತಾರ ಕೇಶವ್ ಸಿಂಗ್, ದೀನಾನಾಥ್ ಗಾಂಧಿ, ರಾಮನಾಥ್ ರಮಣ್ , ಪ್ರಶಾಂತ್ ಗುಪ್ತಾ ಮೊದಲಾದವರು ರಾಜೀನಾಮೆ ನೀಡಿದ ಪ್ರಮುಖರು. ರಾಜೀನಾಮೆ ಪರ್ವದ ಮಧ್ಯೆಯೇ ರೋಹ್ತಾಸ್ ಜಿಲ್ಲೆಯ ಎಲ್ ಜೆಪಿ ಅಧ್ಯಕ್ಷ ಅನಿಲ್ ಕುಮಾರ್ ಸಿಂಗ್ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ನಾನು ಅನಿಲ್ ಕುಮಾರ್ ಸಿಂಗ್, ಮೂರು ಬಾರಿ ಎಲ್ ಜೆಪಿ ಜಿಲ್ಲಾ ಅಧ್ಯಕ್ಷನಾದವನು, ಎಲ್ ಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿವರ ಪಟ್ಟಿಯಲ್ಲಿ ನನ್ನ ಹೆಸರು ನೋಡಿ ಬೇಸರವಾಗಿದೆ. ನಾನು ಪಕ್ಷ ತೊರೆದಿಲ್ಲ. ನಾನು ರಾಮ್ ವಿಲಾಸ್ ಪಾಸ್ವಾನ್ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ಪಕ್ಷದಲ್ಲಿಯೇ ಇದ್ದೇನೆ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಜೆಡಿಯುನಲ್ಲಿ ಅಸಮಾಧಾನ: ಶೀಘ್ರ 17 ಶಾಸಕರು ಆರ್ಜೆಡಿಗೆ ಸೇರ್ಪಡೆ?