
ಪಾಟ್ನಾ, ನವೆಂಬರ್ 10: ಸಾರ್ವಜನಿಕರ ದೂರುಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಮೇಲೆ ಬಿಹಾರ ಸರ್ಕಾರ 15 ಸರ್ಕಾರಿ ನೌಕರರನ್ನು ಅಮಾನತುಗೊಳಿಸಿದೆ. ವೃತ್ತ ಅಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಈ ಕ್ರಮಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಪರಿಹರಿಸದಿರುವುದು ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಅಮಾನತಿಗೆ ಕಾರಣ ಎಂದು ಸರ್ಕಾರ ತಿಳಿಸಿದೆ.
ಸಾರ್ವಜನಿಕ ಕುಂದುಕೊರತೆ ಶಿಬಿರದಲ್ಲಿ ಲೋಪ ಪತ್ತೆ
ಪಾಟ್ನಾದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ‘ಸಹಯೋಗ’ ಸಾರ್ವಜನಿಕ ಕುಂದುಕೊರತೆ ಪರಿಹಾರ ಕಾರ್ಯಕ್ರಮದಲ್ಲಿ ಈ ಲೋಪಗಳು ಬೆಳಕಿಗೆ ಬಂದಿವೆ. ಜನರು ಸಲ್ಲಿಸಿದ ದೂರುಗಳನ್ನು ಪರಿಶೀಲಿಸಿದಾಗ, ಕೆಲವು ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಗಮನಕ್ಕೆ ಬಂದಿದೆ. ಕಂದಾಯ ಮತ್ತು ಭೂ ಸುಧಾರಣೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ವಸತಿ ಹಾಗೂ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಗಳ ಸಿಬ್ಬಂದಿ ಅಮಾನತುಗೊಂಡವರಲ್ಲಿ ಸೇರಿದ್ದಾರೆ.
ಜನರ ಸಮಸ್ಯೆ ನಿರ್ಲಕ್ಷಿಸಿದರೆ ಕ್ರಮದ ಎಚ್ಚರಿಕೆ
ಸಾರ್ವಜನಿಕರ ದೂರುಗಳನ್ನು ಹಗುರವಾಗಿ ಪರಿಗಣಿಸಬಾರದು ಎಂದು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಬ್ಬ ನಾಗರಿಕನ ಸಮಸ್ಯೆಯನ್ನು ಪಾರದರ್ಶಕವಾಗಿ ಮತ್ತು ನಿಗದಿತ ಸಮಯದೊಳಗೆ ಪರಿಹರಿಸಬೇಕು. ಜನರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಹಾಗೂ ಅನಗತ್ಯ ವಿಳಂಬ ಮಾಡಬಾರದು ಎಂದು ಸೂಚಿಸಿದ್ದಾರೆ.
ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬರಬಾರದು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ.
ಇದನ್ನೂ ಓದಿ:
ರಾಹುಲ್ ಗಾಂಧಿಯ ರ‍್ಯಾಲಿಗೆ ಬಾರದೆ ಚಿಕ್ಕಪ್ಪನ ಅಂತ್ಯಕ್ರಿಯೆಗೆ ತೆರಳಿದ್ದ ಯೂತ್ ಕಾಂಗ್ರೆಸ್ ನಾಯಕ ಅಮಾನತು!
ಯಾವ ಇಲಾಖೆಯ ಎಷ್ಟು ಸಿಬ್ಬಂದಿಗೆ ಅಮಾನತು?
ವರದಿಗಳ ಪ್ರಕಾರ, ಅಮಾನತುಗೊಂಡ 15 ಮಂದಿಯಲ್ಲಿ ಅತಿ ಹೆಚ್ಚು ಸಿಬ್ಬಂದಿ ಕಂದಾಯ ಮತ್ತು ಭೂ ಸುಧಾರಣೆ ಇಲಾಖೆಗೆ ಸೇರಿದವರಾಗಿದ್ದಾರೆ.
– ಕಂದಾಯ ಮತ್ತು ಭೂ ಸುಧಾರಣೆ ಇಲಾಖೆ – 9 ಮಂದಿ
– ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ – 4 ಮಂದಿ
– ಗ್ರಾಮೀಣಾಭಿವೃದ್ಧಿ ಇಲಾಖೆ – 1
– ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ – 1
ಇವರು ಮುಂಗೇರ್, ಭೋಜ್‌ಪುರ, ಕಟಿಹಾರ್, ಭಾಗಲ್ಪುರ, ಅರಾರಿಯಾ, ಗಯಾ ಸೇರಿದಂತೆ 13 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸಹಯೋಗ ಕಾರ್ಯಕ್ರಮದ ವಿಶೇಷತೆ ಏನು?
ಬಿಹಾರ ಸರ್ಕಾರ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹರಿಸುವ ಉದ್ದೇಶದಿಂದ ‘ಸಹಯೋಗ’ ಕಾರ್ಯಕ್ರಮವನ್ನು ನಡೆಸುತ್ತಿದೆ. ಪ್ರತಿ ತಿಂಗಳ ಎರಡನೇ ಮಂಗಳವಾರ ಪಾಟ್ನಾದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಮುಖ್ಯಮಂತ್ರಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಾರೆ.
ಈ ಕಾರ್ಯಕ್ರಮದ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಬಹುದು. ದೂರುಗಳನ್ನು ಸ್ವೀಕರಿಸುವುದಷ್ಟೇ ಅಲ್ಲದೆ, ಅವುಗಳಿಗೆ ನಿಜವಾದ ಪರಿಹಾರ ಸಿಕ್ಕಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಹಯೋಗ ಪೋರ್ಟಲ್‌ನಲ್ಲಿ ಬಂದ ಅರ್ಜಿಗಳ ವಿಲೇವಾರಿ ಮತ್ತು ಪರಿಹಾರದ ಗುಣಮಟ್ಟವನ್ನು ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಕಾರ್ಯದರ್ಶಿಗಳು ಪರಿಶೀಲಿಸಬೇಕು ಎಂದು ಆದೇಶಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ