ಮಾಜಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಭೇಟಿ ನೀಡಿದ ಸಿಎನ್ ಅಶ್ವಥ್ ನಾರಾಯಣ ಮತ್ತು ಮುನಿರತ್ನ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 29, 2023 | 7:35 PM

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಿದ್ದಿದ್ದ ಅಖಂಡ ಶ್ರೀನಿವಾಸ ಮೂರ್ತಿ ಬಹುಜನ ಸಮಾಜ ಪಕ್ಷದಿಂದ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅವರು ಬಿಜೆಪಿ ಸೇರಬಯಸಿದರೂ ಪಕ್ಷ ಸೇರಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಹುಟ್ಟುತ್ತದೆ.

ಬೆಂಗಳೂರು: ಬಿಜೆಪಿ ಶಾಸಕರಾದ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಹಾಗೂ ಮುನಿರತ್ನ (Munirathna) ಇಂದು ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ (Akhanda Srinivasa Murthy) ಮನೆಗೆ ಭೇಟಿ ನೀಡಿದ್ದರು. ಭೇಟಿಯ ಉದ್ದೇಶ ರಾಜಕಾರಣವಾಗಿರಲಿಲ್ಲ ಎಂದು ಅವರ ಮನೆಯಿಂದ ಹೊರಬಂದ ಬಳಿಕ ಅಶ್ವಥ್ ನಾರಾಯಣ ಹೇಳಿದರು. ನಿನ್ನೆಯಷ್ಟೇ ತೀರಿಕೊಂಡ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಅವರು ಶ್ರೀನಿವಾಸ್ ಗೆ ಭಾವನಾಗಬೇಕು, ಹಾಗಾಗಿ ಅವರು ದುಃಖದಲ್ಲಿರೋದರಿಂದ ಮಾತಾಡಿಸಿಕೊಂಡು ಹೋಗೋಣ ಅಂತ ಬಂದಿದ್ದು ಎಂದ ಅವರು, ತಾವೆಲ್ಲ ಏಕಕಾಲಕ್ಕೆ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬೇರೆ ಬೇರೆ ಪಕ್ಷವರಾದರೂ ತಮ್ಮ ನಡುವೆ ಸ್ನೇಹ ಮತ್ತು ಒಡನಾಟವಿದೆ ಎಂದು ಹೇಳಿದರು. ಶ್ರೀನಿವಾಸ್ ಬಿಜೆಪಿ ಸೇರುವ ಇಚ್ಛೆಯೇನಾದರೂ ವ್ಯಕ್ತಪಡಿಸಿದರೇ ಅಂತ ಕೇಳಿದ ಪ್ರಶ್ನೆಗೆ ಅಶ್ವಥ್ ನಾರಾಯಣ, ರಾಜಕಾರದ ಬಗ್ಗೆ ಮಾತಾಡಲು ಇದು ಸೂಕ್ತ ಸಮಯವಾಗಿರಲಿಲ್ಲ, ಆದರೆ ಕಾಂಗ್ರೆಸ್ ಬಳಸಿಕೊಂಡು ದೂರಮಾಡಿದ ಬಗ್ಗೆ ಅವರಲ್ಲಿ ನೋವಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ