ಭರೂಚ್: ಮುಸ್ಲಿಂ ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿ ನಿಧಾನವಾಗಿ ಆಗಾಗ ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಗುಜರಾತ್ನ ಭರೂಚ್ ಜಿಲ್ಲೆಯ ಪಾಲಿಕೆ ಚುನಾವಣೆಯಲ್ಲಿ ಒಟ್ಟು 31 ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. 9 ತಾಲೂಕಾ ಪಂಚಾಯತ್, 4 ನಗರ ಪಾಲಿಕೆ, ಭರೂಚ್ ಜಿಲ್ಲಾ ಪಂಚಾಯತ್ಗಳಿಗೆ ಫೆಬ್ರವರಿ 28ರಂದು ಚುನಾವಣೆ ನಡೆಯಲಿದ್ದು, ಒಟ್ಟು 320 ಸ್ಥಾನಗಳಿಗೆ ಬಿಜೆಪಿ ಒಟ್ಟು 31 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. 31 ಅಭ್ಯರ್ಥಿಗಳ ಪೈಕಿ 17 ಅಭ್ಯರ್ಥಿಗಳು ಮಹಿಳೆಯರೇ ಆಗಿದ್ದಾರೆ ಎಂಬುದು ಸಹ ಮಹತ್ವ ಪಡೆದಿದೆ. ಹಲವು ಕಾರಣಗಳಿಂದಾಗಿ ದಕ್ಷಿಣ ಗುಜರಾತ್ನ ಸ್ಥಳೀಯ ಆಡಳಿಗಳಿಗೆ ನಡೆಯುತ್ತಿರುವ ಚುನಾವಣೆ ದೇಶದ ಗಮನ ಸೆಳೆಯುತ್ತಿದೆ.
ಈ ಅಭ್ಯರ್ಥಿಗಳಲ್ಲಿ ಬಹುತೇಕರು ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದವರೇ ಆಗಿದ್ದು, ಭರೂಚ್ನಲ್ಲಿ ಈ ಬಾರಿ ಇದುವರೆಗಿನ ಚುನಾವಣೆಗಿಂತ ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಾರುತಿಸಿನ್ಹ್ ಅತೋದರಿಯಾ ತಿಳಿಸಿದ್ದಾರೆ. ಕೆಲ ತಿಂಗಳಿಂದ ಕಾಂಗ್ರೆಸ್ನಿಂದ ಬಿಜೆಪಿಗೆ ತಮ್ಮ ಬೆಂಬಲಿಗರ ಜತೆ ಹಲವು ಕಾಂಗ್ರೆಸ್ ಸ್ಥಳೀಯ ನಾಯಕರು ಸೇರ್ಪಡೆಗೊಂಡಿದ್ದಾರೆ. ಈ ಪಕ್ಷಾಂತರದ ಲಾಭವನ್ನು ಪಡೆಯಲು ಬಿಜೆಪಿಯು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಸಹಜವಾಗಿಯೇ ಮಣೆ ಹಾಕಿದೆ.
ಮತದಾರರು ಯಾರು?
ಭರೂಚ್ನಲ್ಲಿ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿದ್ದು, ಜತೆಗೆ ಬುಡಕಟ್ಟು ಸಮುದಾಯದ ಮತಗಳು ಸಹ ಈ ಹಿಂದಿನ ಚುನಾವಣೆಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದಿದೆ. ಸ್ಥಳೀಯ ಪಾಲಿಕೆಗಳನ್ನು ಗೆಲ್ಲಲು ಮುಸ್ಲಿಂ ಮತಗಳು ಅನಿವಾರ್ಯ ಎಂಬುದನ್ನು ಮನಗಂಡಿರುವ ಬಿಜೆಪಿ ಸಹಜವಾಗಿಯೇ ಈಬಾರಿ ಈ ಸಮುದಾಯಕ್ಕೆ ಒತ್ತು ನೀಡಿದೆ.
ಕಣಕ್ಕಿಳಿಯಲಿದೆ ಎಐಎಂಐಎಂ
ಅಲ್ಲದೇ ಈ ವರ್ಷ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸಹ ಮೊದಲ ಬಾರಿಗೆ ಭರೂಚ್ ಸ್ಥಳೀಯ ಪಾಲಿಕೆಗಳಿಗೆ ಸ್ಪರ್ಧಿಸಿದ್ದು, ಕಾಂಗ್ರೆಸ್, ಬಿಜೆಪಿಗಳಿಗೆ ಹೊಸ ತಲೆನೋವು ಎದುರಾಗಿದೆ. ಸಾಂಪ್ರದಾಯಿಕ ಮುಸ್ಲಿಂ ಮತಗಳನ್ನು ನಿರಾಯಾಸವಾಗಿ ಸೆಳೆಯುವ ಶಕ್ತಿಯಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಈವರೆಗೆ ಅಧಿಕಾರ ಹೊಂದಿದ್ದ ಕಾಂಗ್ರೆಸ್ಗೆ ಮುಳುವಾಗಲಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ಭರೂಚ್ನ ಚುನಾವಣಾ ಅಂಗಳದಿಂದ ಕೇಳಿಬರುತ್ತಿದೆ. ಭರೂಚ್ನ್ನು ಲೋಕಸಭೆಯಲ್ಲಿ ಮೂರು ಬಾರಿ ಪ್ರತಿನಿಧಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ನಿಧನರಾಗಿದ್ದು ಕಾಂಗ್ರೆಸ್ ಕೈಯನ್ನು ಕಟ್ಟಿಹಾಕಿದಂತಾಗಿದೆ. ಅವರ ಅನುಪಸ್ಥಿತಿ ಕಾಂಗ್ರೆಸ್ಗೆ ಪೆಟ್ಟು ನೀಡುವ ಸಾಧ್ಯತೆಯನ್ನು ಕಾಂಗ್ರೆಸ್ಸಿಗರೇ ಒಪ್ಪಿಕೊಳ್ಳುತ್ತಾರೆ.
ಸ್ಥಳೀಯ ನಾಯಕರ ಪಕ್ಷಾಂತರ, ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದ ಕಮಲ, ಅಸಾದುದ್ದೀನ್ ಓವೈಸಿಯ ಎಐಎಂಐಎಂ ಪಕ್ಷದ ಸ್ಪರ್ಧೆ ಮತ್ತು ಹಿರಿಯ ಕಾಂಗ್ರೆಸ್ ನಾಯಕನ ನಿಧನ ಭರೂಚ್ನಲ್ಲಿ ತರಲಿರುವ ಬದಲಾವಣೆಗಳನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಡ್ರ್ಯಾಗನ್ ಫ್ರೂಟ್ಗೆ ಮರುನಾಮಕರಣ; ಇನ್ಮುಂದೆ ಈ ಹಣ್ಣು ‘ಕಮಲಂ’ ಎಂದ ಮುಖ್ಯಮಂತ್ರಿ
Published On - 11:18 am, Fri, 12 February 21