ದೆಹಲಿ ಮಾರ್ಚ್ 01: ಡಿಎಂಕೆ (DMK) ನೇತೃತ್ವದ ತಮಿಳುನಾಡು (Tamil Nadu) ಸರ್ಕಾರದ ಜಾಹೀರಾತಿನಲ್ಲಿ ‘ತಪ್ಪಾಗಿ’ ಚೀನಾದ ರಾಕೆಟ್ ಫೋಟೋ ಹಾಕಿ ಮುಜುಗರಕ್ಕೀಡಾಗಿದೆ. ಇದೇ ಹೊತ್ತಲ್ಲಿ ಬಿಜೆಪಿ, ಮಾರ್ಚ್ 1 ರಂದು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ. ಅಂದ ಹಾಗೆ ಬಿಜೆಪಿ ಸ್ಟಾಲಿನ್ ಅವರಿಗೆ ಶುಭಾಶಯ ಕೋರಿದ್ದು ಮ್ಯಾಂಡರಿನ್ನಲ್ಲಿ. ಜಾಹೀರಾತಿನಲ್ಲಿ ಚೀನಾ ರಾಕೆಟ್ ಚಿತ್ರ ಬಳಸಿದ್ದಕ್ಕಾಗಿ ಬಿಜೆಪಿ ಸ್ಟಾಲಿನ್ ಅವರಿಗೆ ಚೀನಾದ ಭಾಷೆಯಲ್ಲೇ ಶುಭಾಶಯ ತಿಳಿಸಿ ಕುಟುಕಿದೆ.
ತಮಿಳುನಾಡು ಬಿಜೆಪಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಸಹ ಸ್ಟಾಲಿನ್‌ಗೆ ಮ್ಯಾಂಡರಿನ್ ಹುಟ್ಟುಹಬ್ಬದ ಶುಭಾಶಯದ ಸಿದ್ಧ ಕರಡನ್ನು ಒದಗಿಸಿದ್ದು, ಪ್ರತಿಯೊಬ್ಬರೂ ಸ್ಟಾಲಿನ್ ಅವರ ಜನ್ಮದಿನದಂದು ಶುಭಾಶಯಗಳನ್ನು ಕೋರಲು ಬಯಸಿದರೆ ಅದನ್ನು ಬಳಸಬೇಕೆಂದು ಒತ್ತಾಯಿಸಿದೆ.
On behalf of @BJP4Tamilnadu, here’s wishing our Honourable CM Thiru @mkstalin avargal a happy birthday in his favourite language! May he live a long & healthy life! pic.twitter.com/2ZmPwzekF8
— BJP Tamilnadu (@BJP4TamilNadu) March 1, 2024
ಜನ್ಮದಿನದ ಶುಭಾಶಯಗಳು ಸ್ಟಾಲಿನ್! ನಿಮಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಹಾರೈಸುತ್ತೇವೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಸ್ಟಾಲಿನ್ ಅವರನ್ನು ಕೆಣಕಲು ವಿನೂತನ ರೀತಿಯಲ್ಲಿ ಪೋಸ್ಟ್ ಮಾಡಿದ ಬಿಜೆಪಿಯ ಈ ಟ್ವೀಟ್ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 28 ರಂದು ಕುಲಶೇಖರಪಟ್ಟಿಣಂನಲ್ಲಿ ಇಸ್ರೋದ ಹೊಸ ಉಡಾವಣಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ಮಾಡುವಾಗ ಪ್ರಕಟಿಸಿದ್ದ ಡಿಎಂಕೆ ಜಾಹೀರಾತಿನಲ್ಲಿದ್ದ ತಪ್ಪನ್ನು ಬಿಜೆಪಿ ಲೇವಡಿ ಮಾಡಿದೆ.
“ತಮಿಳುನಾಡಿನ ಇಸ್ರೋ ಉಡಾವಣಾ ಪ್ಯಾಡ್‌ನ ಕ್ರೆಡಿಟ್ ಪಡೆಯಲು ಅವರು ಚೀನಾದ ಸ್ಟಿಕ್ಕರ್ ಅನ್ನು ಅಂಟಿಸಿದ್ದಾರೆ. ಇದು ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು, ಬಾಹ್ಯಾಕಾಶ ಕ್ಷೇತ್ರ, ನಿಮ್ಮ ತೆರಿಗೆ ಹಣ ಮತ್ತು ನಿಮಗೆ (ದೇಶ) ಮಾಡಿದ ಅವಮಾನವಾಗಿದೆ” ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ, “ಇಂದು ಡಿಎಂಕೆಯ ಜಾಹೀರಾತು ಹಾಸ್ಯಾಸ್ಪದವಾಗಿದೆ. ಅವರು ಭಾರತೀಯ ವಿಜ್ಞಾನ ಮತ್ತು ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಅವಮಾನಿಸಿದ್ದಾರೆ, ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.
ಭಾರತ ಚೀನಾವನ್ನು ಶತ್ರು ರಾಷ್ಟ್ರ ಎಂದು ಘೋಷಿಸಿದೆಯೇ ಎಂದು ಡಿಎಂಕೆ ಸಂಸದೆ ಕನಿಮೊಳಿ ಕೇಳಿದ್ದು ಅಲ್ಲಿಂದ ಯಾವುದೇ ಕ್ಷಮೆಯಾಚನೆ ಬಂದಿಲ್ಲ. ಮೋದಿ ಅವರೇ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ ಎಂದು ಕನಿಮೊಳಿ ತಿಳಿಸಿದರು.
ಇದನ್ನೂ ಓದಿ: SDPI: ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಣಕ್ಕಿಳಿಯಲಿದೆ ಎಸ್‌ಡಿಪಿಐ
ಡಿಎಂಕೆ ಸಚಿವೆ ಅನಿತಾ ರಾಧಾಕೃಷ್ಣನ್ ಅವರು ಡಿಸೈನರ್ ಕಡೆಯಿಂದ ನಡೆದಿರುವ ತಪ್ಪು ಎಂದು ಒಪ್ಪಿಕೊಂಡಿದ್ದು ಕಣ್ತಪ್ಪಿನಿಂದ ಹೀಗಾಗಿದೆ ಎಂದಿದ್ದಾರೆ. ”ಕುಲಶೇಖರಪಟ್ಟಣಂ ಪ್ರದೇಶದಲ್ಲಿ ರಾಕೆಟ್ ಉಡಾವಣಾ ಪ್ಯಾಡ್ ಸ್ಥಾಪನೆಗೆ ಸಂಬಂಧಿಸಿದಂತೆ ನಾವು ನೀಡಿದ್ದ ಪತ್ರಿಕೆಯ ಜಾಹೀರಾತಿನಲ್ಲಿ ಸಣ್ಣ ತಪ್ಪಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಜಾಹೀರಾತಿನಲ್ಲಿ ಚೀನಾ ಧ್ವಜದ ಚಿತ್ರ ವಿನ್ಯಾಸ ಮಾಡಿದವರ ತಪ್ಪು ಅದು. ಜಾಹೀರಾತಿನಲ್ಲಿನ ತಪ್ಪು ನಮ್ಮ ಗಮನಕ್ಕೆ ಬಂದಿರಲಿಲ್ಲ” ಎಂದು ಡಿಎಂಕೆ ನಾಯಕಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ