Brahmapuram Waste Plant: ವಾಯು ಮಾಲಿನ್ಯದಿಂದ ಉಸಿರುಗಟ್ಟಿದ ಕೊಚ್ಚಿ ನಗರ; ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಸಂಭವಿಸಿದ್ದೇನು?

|

Updated on: Mar 10, 2023 | 7:01 PM

ಕೊಚ್ಚಿಗೆ ತ್ಯಾಜ್ಯ ವಿಲೇವಾರಿ ಯಾವಾಗಲೂ ಪ್ರಮುಖ ಸಮಸ್ಯೆಯಾಗಿದೆ. 1998 ರಲ್ಲಿ, ಕೊಚ್ಚಿ ಕಾರ್ಪೊರೇಷನ್ ನಗರದಿಂದ 17 ಕಿಮೀ ದೂರದಲ್ಲಿರುವ ಬ್ರಹ್ಮಪುರಂನಲ್ಲಿ 37 ಎಕರೆ ಭೂಮಿಯನ್ನು ಖರೀದಿಸಿತು

Brahmapuram Waste Plant: ವಾಯು ಮಾಲಿನ್ಯದಿಂದ ಉಸಿರುಗಟ್ಟಿದ ಕೊಚ್ಚಿ ನಗರ; ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಸಂಭವಿಸಿದ್ದೇನು?
ಬ್ರಹ್ಮಪುರಂ ತ್ಯಾಜ್ಯ ಘಟಕ
Follow us on

ಮಾರ್ಚ್ 2 ರಿಂದು ಕೇರಳದ (Kerala) ಕೊಚ್ಚಿಯಲ್ಲಿರುವ ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ(Brahmapuram waste plant)ಸಂಭವಿಸಿದ ಬೃಹತ್ ಬೆಂಕಿಯಿಂದಾಗಿ ಆವರಿಸಿರುವ ವಿಷಕಾರಿ ಹೊಗೆ ಅಲ್ಲಿನ ನಿವಾಸಿಗಳನ್ನು ಉಸಿರುಗಟ್ಟಿಸಿದೆ. ಬೆಂಕಿಯನ್ನು ನಂದಿಸುವ ಪ್ರಯತ್ನಗಳು ಮುಂದುವರಿದಿದ್ದರೂ ಸಹ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುವ ವಿಷಕಾರಿ ಹೊಗೆಯಿಂದಾಗಿ ಕೊಚ್ಚಿ ಭಾರೀ ವಾಯು ಮಾಲಿನ್ಯವನ್ನು ಎದುರಿಸುತ್ತಿದೆ. ಕೇರಳ ಅಗ್ನಿಶಾಮಕ ದಳ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆ ಎಲ್ಲವೂ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿತ್ತು. ಬೆಂಕಿನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಸದ್ಯದ ದೊಡ್ಡ ಪ್ರಶ್ನೆ ಏನೆಂದರೆ ಬ್ರಹ್ಮಪುರಂ ತ್ಯಾಜ್ಯ ಘಟಕಕ್ಕೆ ಇಷ್ಟೊಂದು ಕಸ ಹೇಗೆ ಬಂತು? ಎಂಬುದು.

ಕೊಚ್ಚಿಗೆ ತ್ಯಾಜ್ಯ ವಿಲೇವಾರಿ ಯಾವಾಗಲೂ ಪ್ರಮುಖ ಸಮಸ್ಯೆಯಾಗಿದೆ. 1998 ರಲ್ಲಿ, ಕೊಚ್ಚಿ ಕಾರ್ಪೊರೇಷನ್ ನಗರದಿಂದ 17 ಕಿಮೀ ದೂರದಲ್ಲಿರುವ ಬ್ರಹ್ಮಪುರಂನಲ್ಲಿ 37 ಎಕರೆ ಭೂಮಿಯನ್ನು ಖರೀದಿಸಿತು. ಅಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಆಂಧ್ರಪ್ರದೇಶ ತಂತ್ರಜ್ಞಾನ ಅಭಿವೃದ್ಧಿ ನಿಗಮದೊಂದಿಗೆ 2005ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಯೋಜನೆ ವಿರೋಧಿಸಿ ನಿವಾಸಿಗಳಿಂದ ಭಾರೀ ಪ್ರತಿಭಟನೆಗಳು ನಡೆದಿದ್ದವು.

2007 ರಲ್ಲಿ, 15 ಎಕರೆ ಜೌಗು ಪ್ರದೇಶವನ್ನು ಪುನಃ ಪಡೆದುಕೊಳ್ಳಲಾಯಿತು ಮತ್ತು ಆ ಪ್ರದೇಶದಲ್ಲಿ ಒಂದು ಪ್ಲಾಂಟ್ ನಿರ್ಮಿಸಲಾಯಿತು. ದಿನಕ್ಕೆ 250 ಟನ್ ಸಾಮರ್ಥ್ಯದ ತ್ಯಾಜ್ಯ ಘಟಕವನ್ನು 2008 ರಲ್ಲಿ ಉದ್ಘಾಟಿಸಲಾಯಿತು. ಆದಾಗ್ಯೂ, ಒಂದೂವರೆ ವರ್ಷದಲ್ಲಿ ಆ ಪ್ಲಾಂಟ್ ಸ್ಥಗಿತವಾಯಿತು. ನಿರ್ಮಾಣ ದೋಷಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಯಿತಾದರೂ ಅದು ಏನೇನೂ ಆಗಿಲ್ಲ.

ಏತನ್ಮಧ್ಯೆ, ಸಮೀಪದ ನಿವಾಸಿಗಳ ಬೇಡಿಕೆಯ ಮೇರೆಗೆ ಕೊಚ್ಚಿ ಕಾರ್ಪೊರೇಷನ್ ಇನ್ನೂ ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಒತ್ತಾಯಿಸಲಾಯಿತು. ಇಂದು ಬ್ರಹ್ಮಪುರಂ ತ್ಯಾಜ್ಯ ಘಟಕವು ಕೊಚ್ಚಿ ನಗರದ ಪ್ರಮುಖ ಐಟಿ ಪಾರ್ಕ್‌ಗಳ ಬಳಿ 110 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಶಾಪವಾಗಿ ಪರಿಣಮಿಸಿದ ಪ್ಲಾಸ್ಟಿಕ್

ಪ್ರಸ್ತುತ ಕೊಚ್ಚಿ ಕಾರ್ಪೊರೇಶನ್ ಹೊರತುಪಡಿಸಿ ಕಳಮಶ್ಶೇರಿ, ಆಲುವಾ, ಅಂಗಮಾಲಿ, ತೃಕ್ಕಾಕರ, ತ್ರಿಪುಣಿತರಾ ಪುರಸಭೆಗಳು ಮತ್ತು ಚೇರನಲ್ಲೂರು, ವಡವುಕೋಡ್ ಪುತ್ತಂಕುರಿಶ್ ಪಂಚಾಯತ್‌ಗಳು ಸಹ ತಮ್ಮ ತ್ಯಾಜ್ಯವನ್ನು ಬ್ರಹ್ಮಪುರಂ ತ್ಯಾಜ್ಯ ಘಟಕಕ್ಕೆ ಸುರಿಯುತ್ತವೆ.
ಬ್ರಹ್ಮಪುರಂ ತ್ಯಾಜ್ಯ ಘಟಕಕ್ಕೆ ಪ್ರತಿದಿನ 390 ಟನ್ ತ್ಯಾಜ್ಯ ಸುರಿಯಲಾಗುತ್ತದೆ. ಇದರಲ್ಲಿ 64 ಪ್ರತಿಶತ ಜೈವಿಕ ವಿಘಟನೀಯವಾಗಿದ್ದರೆ ಉಳಿದವು ಪ್ಲಾಸ್ಟಿಕ್ ಮತ್ತು ಇತರ ಜೈವಿಕ ವಿಘಟನೀಯವಲ್ಲದ ವಸ್ತುಗಳಾಗಿವೆ.

2012ರಿಂದ ಕೊಚ್ಚಿ ಕಾರ್ಪೊರೇಷನ್ ಬ್ರಹ್ಮಪುರಂನಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ಅನ್ನು ಪ್ರತಿ ಕೆಜಿಗೆ ರೂ.1.5 ದರದಲ್ಲಿ ಮಾರಾಟ ಮಾಡಲು ಭಾರತ್ ಟ್ರೇಡರ್ಸ್ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದಾಗ್ಯೂ, ಕಂಪನಿಯು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಅನ್ನು ಮಾತ್ರ ತೆಗೆದುಕೊಳ್ಳುತ್ತದೆ. ಉಳಿದವುಗಳನ್ನು ಸ್ಥಾವರದಲ್ಲಿಯೇ ಸುರಿಯಲಾಗುತ್ತದೆ.

ಚಾಲೂ ಆಗದ ವಿದ್ಯುತ್ ಸ್ಥಾವರ

2011 ರಲ್ಲಿ ಬ್ರಹ್ಮಪುರಂನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ತ್ಯಾಜ್ಯದಿಂದ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಯೋಜನೆಗಳನ್ನು ಪ್ರಾರಂಭಿಸಲಾಯಿತು. ಈ ಯೋಜನೆಗೆ 2015ರಲ್ಲಿ ಒಪ್ಪಂದವಾಗಿದ್ದು, 2018ರಲ್ಲಿ ಶಂಕುಸ್ಥಾಪನೆ ನಡೆದಿತ್ತು.ಆದರೆ ಅನುದಾನದ ಕೊರತೆಯಿಂದ 2020ರಲ್ಲಿ ಒಪ್ಪಂದ ರದ್ದಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಲವಾರು ಮಧ್ಯಸ್ಥಿಕೆಗಳ ಹೊರತಾಗಿಯೂ, ಕೊಚ್ಚಿ ಕಾರ್ಪೊರೇಷನ್ ಬ್ರಹ್ಮಪುರಂ ತ್ಯಾಜ್ಯ ನಿರ್ವಹಣಾ ಘಟಕದ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ.

ಕೊಚ್ಚಿಯಲ್ಲಿ ಉಸಿರುಗಟ್ಟುವ ಬೆಂಕಿಯ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಪಾಲಿಸದ ಕೊಚ್ಚಿ ಕಾರ್ಪೊರೇಷನ್‌ಗೆ 14.92 ಕೋಟಿ ರೂಪಾಯಿ ದಂಡ ವಿಧಿಸಿದೆ. ಆದರೆ, ಪಾಲಿಕೆ ಹೈಕೋರ್ಟ್‌ನಲ್ಲಿ ತಡೆ ಕೋರಿದೆ.

ಕಿಡಿಯುಗುಳುವ ಬ್ರಹ್ಮಪುರಂ: ಇಲ್ಲಿವರೆಗಿನ ಬೆಳವಣಿಗೆಗಳು

  1. ಮಾರ್ಚ್ 2 ರಂದು, ಕೊಚ್ಚಿಯ ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ದಕ್ಷಿಣ ನೌಕಾ ಕಮಾಂಡ್ ತಿಳಿಸಿದೆ. ಘಟನೆಯ ನಂತರ, ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ 110 ಎಕರೆ ಗಜಗಳ ಭೂಮಿಯಲ್ಲಿ ಅದೇ ದಿನ 5,000 ಲೀಟರ್‌ಗಿಂತಲೂ ಹೆಚ್ಚು ನೀರನ್ನು ಸಿಂಪಡಿಸಲಾಯಿತು.
  2.  ನಂತರದ ದಿನಗಳಲ್ಲಿ, ಬೆಂಕಿಯನ್ನು ನಿಯಂತ್ರಿಸಲು 31 ಮಣ್ಣು ಕೊರೆಯುವ ಯಂತ್ರಗಳು ಮತ್ತು ಹೆಚ್ಚಿನ ಒತ್ತಡದ ನೀರಿನ ಪಂಪ್ಗಳನ್ನು ಬಳಸಲಾಯಿತು. ಗಾಳಿಯ ದಿಕ್ಕಿನಿಂದಾಗಿ ನೆಲದ ಕಾರ್ಯಾಚರಣೆಗಳು ನಿಷ್ಪರಿಣಾಮಕಾರಿಯಾದಾಗ ನೌಕಾಪಡೆಯ ಹೆಲಿಕಾಪ್ಟರ್‌ಗಳನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಯಿತು. ಸುಮಾರು ಒಂದು ವಾರದಿಂದ ಹೊತ್ತಿ ಉರಿದ ಬೆಂಕಿ ಭಾನುವಾರದ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂತು.
  3. ತ್ಯಾಜ್ಯ ಸುರಿಯುವ ಜಾಗದಲ್ಲಿ 2012 ರಿಂದ ಆಗಾಗ ಬೆಂಕಿ ಕಾಣಿಸುತ್ತದೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಕೊಚ್ಚಿ ಮೇಯರ್ ಅನಿಲ್ ಕುಮಾರ್ ಹೇಳಿದ್ದಾರೆ. ಹಿರಿಯ ಸಿಪಿಐ(ಎಂ) ಮುಖಂಡರೊಬ್ಬರ ಅಳಿಯ ನಡೆಸುತ್ತಿರುವ ಸಂಸ್ಥೆಗೆ (ಝೊಂಟಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್) ಯಾರ್ಡ್‌ಗೆ ₹54 ಕೋಟಿ ಜೈವಿಕ ಗಣಿಗಾರಿಕೆ ಗುತ್ತಿಗೆ ನೀಡಲಾಗಿತ್ತು.
  4. ಸ್ವಜನಪಕ್ಷಪಾತದ ಆರೋಪಗಳನ್ನು ಪ್ರಶ್ನಿಸಿದಾಗ, ಸಂಸ್ಥೆಯು ಹಿರಿಯ ಕಾಂಗ್ರೆಸ್ ನಾಯಕನ ಮಗ ನಡೆಸುತ್ತಿರುವ ಕಂಪನಿಗೆ ಉಪಗುತ್ತಿಗೆ ನೀಡಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು ಎಂದು ಬಲ್ಲ ಮೂಲಗಳು ಹೇಳಿವೆ,. ಬೆಂಕಿಯು “ಮಾನವ ನಿರ್ಮಿತ ಬೆಂಕಿಯಾಗಿದ್ದು ಅದು ನಿಯಂತ್ರಣಕ್ಕೆ ಸಿಗಲಿಲ್ಲ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ.
  5. ಬುಧವಾರ ಈ ವಿಷಯವನ್ನು ಆಲಿಸಿದ ಕೇರಳ ಹೈಕೋರ್ಟ್ ಸ್ಥಾವರದಲ್ಲಿನ ಪರಿಸ್ಥಿತಿಯ ಬಗ್ಗೆ ಎರ್ನಾಕುಲಂ ಜಿಲ್ಲಾಧಿಕಾರಿ (ಡಿಸಿ) ಯಿಂದ ವಿವರವಾದ ವರದಿಯನ್ನು ಕೇಳಿದೆ. ವಿಚಾರಣೆ ವೇಳೆ ಜಿಲ್ಲಾಧಿಕಾರಿ ಪರ ವಾದ ಮಂಡಿಸಿದ ವಕೀಲರು, ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಅಗ್ನಿ ಅವಘಡ ಸಂಭವಿಸುವ ಮೂರು ದಿನಗಳ ಮೊದಲು ನಗರ ಪಾಲಿಕೆಗೆ ಎಚ್ಚರಿಕೆ ವಹಿಸುವಂತೆ ಡಿಸಿ ಸೂಚಿಸಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೊಚ್ಚಿ ಕಾರ್ಪೊರೇಷನ್ ವಾದಿಸಿದೆ. ಮಂಗಳವಾರ ರಾತ್ರಿ ಮತ್ತೊಂದು ಬೆಂಕಿ ಕಾಣಿಸಿಕೊಂಡರೂ ಅದನ್ನು ನಂದಿಸಲಾಗಿದೆ.
  6. ಇಂದು ಹೆಚ್ಚಿನ ವಿಚಾರಣೆಗೆ ಮಾಡಿದ ನ್ಯಾಯಾಲಯ, ಮಾಲಿನ್ಯ ಮುಕ್ತ ವಾತಾವರಣವು ಮಾನವ ಹಕ್ಕು ಎಂದು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ. ಡಂಪ್ ಯಾರ್ಡ್ ಬೆಂಕಿಗೆ ಮುಂಚಿತವಾಗಿ, ನಗರದ ಸರಾಸರಿ ಗಾಳಿಯ ಗುಣಮಟ್ಟವು 100 ಕ್ಕಿಂತ ಕಡಿಮೆಯಿತ್ತು, ಘಟನೆಯ ನಂತರದ ವಾರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು 300 PM 2.5 ಕ್ಕಿಂತ ಹೆಚ್ಚು (ಗಾಳಿಯಲ್ಲಿ ಸೂಕ್ಷ್ಮವಾದ ಕಣಗಳು) ಉಳಿದಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ಬಹಿರಂಗಪಡಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Fri, 10 March 23