ನೊಯ್ಡಾ: ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ. ಜೀವನ ನಡೆಸುವ ಒಂದು ಶ್ರೇಷ್ಠ ವಿಧಾನ ಎಂದು ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶ (Uttar Pradesh) ಉಪ ಮುಖ್ಯಮಂತ್ರಿಯೂ ಆಗಿರುವ ದಿನೇಶ್ ಶರ್ಮಾ (Dinesh Sharma) ಹೇಳಿದ್ದಾರೆ. ಅಷ್ಟೇ ಅಲ್ಲ, ನಮ್ಮ ಬಿಜೆಪಿ ಪಕ್ಷ ಯಾವುದೇ ತಾರತಮ್ಯವಿಲ್ಲದೆ, ಎಲ್ಲರಿಗಾಗಿ ಕೆಲಸ ಮಾಡುತ್ತಿದೆ ಎಂದೂ ತಿಳಿಸಿದ್ದಾರೆ. ಗೌತಮ ಬುದ್ಧನಗರದ ಜೇವರ್ನಲ್ಲಿ ಬಿಜೆಪಿ ಅಭ್ಯರ್ಥಿ ಧೀರೇಂದ್ರ ಸಿಂಗ್ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ ದಿನೇಶ್ ಶರ್ಮಾ, ಪ್ರತಿಪಕ್ಷಗಳು ಜಾತಿವಾದಿಗಳಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು. ನಾನು ವಿಧಾನಸಭೆ ಚುನಾವಣೆ ಪೂರ್ವ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಆದರೆ ನಾನು ಹೋದ ಬಹುತೇಕ ಕಡೆ, ಬ್ರಾಹ್ಮಣವಾದ ಮತ್ತು ಜಾತಿವಾದದ ಬಗ್ಗೆ ಪಕ್ಷದ ನಿಲುವು ಏನೆಂದು ಪ್ರಶ್ನೆ ಕೇಳಲಾಗುತ್ತಿದೆ ಎಂದು ದಿನೇಶ್ ಶರ್ಮಾ ಹೇಳಿದ್ದಾರೆ.
ಬ್ರಾಹ್ಮಣ ಸಮುದಾಯದ ಬಗ್ಗೆ ನಿಮ್ಮ ನಿಲುವೇನು ಎಂದು ಅನೇಕರು ನನ್ನ ಬಳಿ ಕೇಳುತ್ತಾರೆ. ಅವರಿಗೆ ನಾನು ನೀಡುವ ಉತ್ತರವೆಂದರೆ, ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯದಲ್ಲಿ ನಂಬಿಕೆಯಿಟ್ಟಿದೆ. ಅಲ್ಲಿ ಬ್ರಾಹ್ಮಣರು, ಗುಜ್ಜರ್ಗಳು, ಜಾಟ್ಸ್ ಎಂಬ ಭೇದ ಭಾವ ಮಾಡುವುದಿಲ್ಲ. ಪ್ರತಿ ಜಾತಿಗೂ ಅದರದ್ದೇ ಆದ ಮಹತ್ವವಿದೆ. ಹಾಗಾಗಿಯೇ ಪ್ರತಿ ಜಾತಿಯವರೂ ಬಿಜೆಪಿಗೆ ಬೆಂಬಲ ಕೊಡುತ್ತಾರೆ. ಆದರೆ ವೈಯಕ್ತಿಕವಾಗಿ ಹೇಳಬೇಕು ಎಂದರೆ, ನಾನೊಬ್ಬ ಬ್ರಾಹ್ಮಣ, ಅದರ ಬಗ್ಗೆ ನನಗೆ ಅಪಾರ ಗೌರವ ಇದೆ. ಹೆಮ್ಮೆಯೂ ಇದೆ. ಬ್ರಾಹ್ಮಣ ಸಮುದಾಯವನ್ನು ನಾನೆಂದಿಗೂ ಅಗೌರವದಿಂದ ಕಾಣುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸರ್ವೇ ಭವಂತು ಸುಖಿನಾ ಎಂಬುದೇ ಬ್ರಾಹ್ಮಣರ ಧ್ಯೇಯ. ಇತರರ ಸಂತೋಷದಲ್ಲಿ ತಮ್ಮ ಸಂತೋಷ ಕಾಣುವವನೇ ಬ್ರಾಹ್ಮಣ ಎಂದೂ ತಿಳಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುಮುಖ್ಯ ಘೋಷಣೆ. ಅವರು ಅದರಂತೆ ಕೆಲಸ ಮಾಡುತ್ತಿದ್ದಾರೆ. ಇಂದು ಬಿಜೆಪಿ ಎಲ್ಲ ಹಿಂದುಳಿದ ವರ್ಗಗಳ ಏಳ್ಗೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ಪಕ್ಷದಲ್ಲಿ ಎಲ್ಲ ಜಾತಿ, ಸಮುದಾಯಗಳ ಶಾಸಕರು, ಎಂಎಲ್ಸಿಗಳು, ಎಂಪಿಗಳು ಇದ್ದಾರೆ. ಬೇರೆ ಪಕ್ಷಗಳಂತೆ ನಾವು ಜಾತಿಗಳ ನಡುವೆ ತಾರತಮ್ಯ ಮಾಡುತ್ತಿಲ್ಲ ಎಂದು ದಿನೇಶ್ ಶರ್ಮಾ ಹೇಳಿದರು. ಕಳೆದ ಕೆಲವು ದಿನಗಳಿಂದಲೂ ಉತ್ತರಪ್ರದೇಶದಲ್ಲಿ ಬಿಜೆಪಿ ಬ್ರಾಹ್ಮಣರನ್ನು ಕಡೆಗಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದಿನೇಶ್ ಶರ್ಮಾರ ಈ ಹೇಳಿಕೆ ಬಹುಮುಖ್ಯವಾಗಿದೆ.
ಇದನ್ನೂ ಓದಿ: ಓವೈಸಿ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯ ಬಗ್ಗೆ ಸಂಸತ್ನಲ್ಲಿ ಹೇಳಿಕೆ ನೀಡಲಿದ್ದಾರೆ ಅಮಿತ್ ಶಾ
Published On - 9:32 am, Mon, 7 February 22