
ನವದೆಹಲಿ, ಸೆಪ್ಟೆಂಬರ್ 13: ಭಾರತದ ನೆಲದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾದ ಭಾಷೆ ಬದಲಾಗಿದೆ. ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಬಲಶಾಲಿಯೇ ಸರಿ ಎನ್ನುವ ಧೋರಣೆಯನ್ನು ಅಲ್ಲಗಳೆದಿದ್ದಾರೆ. ಯಾವುದೇ ದೇಶದ ಗಾತ್ರ ಅಥವಾ ಸಾಮರ್ಥ್ಯ ಅಥವಾ ಸಂಪತ್ತು ಏನೇ ಇರಲಿ ಎಲ್ಲವೂ ಸಮಾನವೆಂದು ಕಾಣಬೇಕು ಎಂದು ಅವರು ಕರೆ ನೀಡಿದ್ದಾರೆ.
ಪ್ರಸ್ತುತ ಜಾಗತಿಕ ರಾಜಕೀಯದಲ್ಲಿ “ಬಲಶಾಲಿಯೇ ಸರಿ” (Might Makes Right) ಎನ್ನುವ ಧೋರಣೆ ಇದೆ. ಅದನ್ನು ಬಹಳ ಹಿಂದೆಯೇ ಬಿಸುಡಬೇಕಿತ್ತು. ಅಂತಾರಾಷ್ಟ್ರೀಯ ವ್ಯವಹಾರಗಳ ಕಾನೂನನ್ನು ರಕ್ಷಿಸಲು ಗ್ಲೋಬಲ್ ಸೌತ್ ದೇಶಗಳು ಎಚ್ಚರವಹಿಸಬೇಕು ಎಂದಿದ್ದಾರೆ. ಜೊತೆಗೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಲಯದಲ್ಲಿ ಯಾವುದೇ ಒಂದು ದೇಶದ ಏಕಸ್ವಾಮ್ಯವಿಲ್ಲದೆ ‘ಮುಕ್ತ ಮತ್ತು ಪಾರದರ್ಶಕ ವ್ಯವಸ್ಥೆ’ (Open Ecosystem) ನಿರ್ಮಿಸಲು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಹಾಗೆಯೇ, ಷಿ ಜಿನ್‌ಪಿಂಗ್ ಅವರು ಐದು ಉಪಕ್ರಮಗಳನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ 2026: ದೆಹಲಿ ವಿದ್ಯಮಾನಗಳ ಬಗ್ಗೆ ಸಾಮಾನ್ಯ ಭಾರತೀಯನಿಗೆ ಕಾಳಜಿ ಯಾಕೆ ಬೇಕು? ಇಲ್ಲಿದೆ ಉತ್ತರ
ಜಾಗತಿಕ ಆಡಳಿತದಲ್ಲಿ ಸಮಾನತೆ: ಏಕಪಕ್ಷೀಯ ನಿರ್ಬಂಧಗಳು, ಆರ್ಥಿಕ ತಡೆಗಳು ಮತ್ತು ಬಲಪ್ರಯೋಗದ ರಾಜಕೀಯವನ್ನು ಬ್ರಿಕ್ಸ್ ರಾಷ್ಟ್ರಗಳು ಜಂಟಿಯಾಗಿ ವಿರೋಧಿಸಬೇಕು. ವಿಶ್ವ ಸಂಸ್ಥೆ (UN) ಕೇಂದ್ರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಷಿ ಜಿನ್‌ಪಿಂಗ್ ಪ್ರತಿಪಾದಿಸಿದರು.
ಎಐ (AI) ತಂತ್ರಜ್ಞಾನದಲ್ಲಿ ಸಹಕಾರ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಕೇವಲ ಕೆಲವು ಅಭಿವೃದ್ಧಿ ಹೊಂದಿದ ದೇಶಗಳ ಆಸ್ತಿಯಾಗಬಾರದು. ಜಾಗತಿಕ ದಕ್ಷಿಣದ (Global South) ದೇಶಗಳಿಗೆ ಎಐ ತಂತ್ರಜ್ಞಾನ ಸುಲಭವಾಗಿ ಸಿಗುವಂತಾಗಬೇಕು ಮತ್ತು ಇದಕ್ಕಾಗಿ ಬ್ರಿಕ್ಸ್ ಚೌಕಟ್ಟಿನಲ್ಲಿ ತಂತ್ರಜ್ಞಾನ ಹಂಚಿಕೆಗೆ ಉತ್ತೇಜನ ನೀಡಬೇಕು ಎಂದು ಚೀನಾ ಅಧ್ಯಕ್ಷರು ಕರೆ ನೀಡಿದರು.
ಬ್ರಿಕ್ಸ್ ಆರ್ಥಿಕ ಶಕ್ತಿ: ಬ್ರಿಕ್ಸ್ ಒಕ್ಕೂಟದ ವಿಸ್ತರಣೆಯು ಜಾಗತಿಕ ಬಹುಧ್ರುವೀಯತೆಯನ್ನು (Multipolarity) ಬಲಪಡಿಸಿದೆ. ಸದಸ್ಯ ರಾಷ್ಟ್ರಗಳು ತಮ್ಮ ನಡುವಿನ ವ್ಯಾಪಾರ, ಹಣಕಾಸು ಮತ್ತು ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಉದಯೋನ್ಮುಖ ದೇಶಗಳ ಧ್ವನಿ: ಜಾಗತಿಕ ಸವಾಲುಗಳನ್ನು ಎದುರಿಸಲು ಪ್ರಜಾಸತ್ತಾತ್ಮಕ ಮತ್ತು ನ್ಯಾಯಯುತವಾದ ಅಂತರರಾಷ್ಟ್ರೀಯ ನಿಯಮಗಳು ಅಗತ್ಯವಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಯನ್ನು ರಕ್ಷಿಸಲು ಬ್ರಿಕ್ಸ್ ಶ್ರಮಿಸಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಶೇ.80ರಷ್ಟು ಭಾರತೀಯರು ಮಾಂಸಾಹಾರಿಗಳು: ಬ್ರಿಕ್ಸ್ ಡಿನ್ನರ್ ಬೆನ್ನಲ್ಲೇ ‘ಫುಡ್ ವಾರ್’ ಶುರುಮಾಡಿದ ರಾಹುಲ್ ಗಾಂಧಿ
ಚೀನಾ ಬ್ರಿಕ್ಸ್ ಗುಂಪಿನಲ್ಲಿ ಮುಂದಾಳತ್ವ ವಹಿಸಲು ಬೇಕಾದ ಧೋರಣೆಯನ್ನು ಈ ಶೃಂಗಸಭೆಯಲ್ಲಿ ತೋರ್ಪಡಿಸಿರುವುದು ಗಮನಾರ್ಹ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ