Budget 2021 | ನಾಲ್ಕು ರಾಜ್ಯಗಳ ಚುನಾವಣೆಗೆ ‘ಹೆದ್ದಾರಿ’ ನಿರ್ಮಿಸಿದ ಕೇಂದ್ರ ಬಜೆಟ್
ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸಿವೆ. ಇದೊಂದು ಗಿಮಿಕ್ ಎಂದು ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 8ನೇ ಬಜೆಟ್ನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ನಲ್ಲಿ ಪಶ್ಚಿಮ ಬಂಗಾಳ, ಆಸ್ಸಾಂ, ತಮಿಳುನಾಡು ಮತ್ತು ಕೇರಳಕ್ಕೆ ತುಸು ಜಾಸ್ತಿಯೇ ಒತ್ತು ನೀಡಿದಂತೆ ಭಾಸವಾಗಿದ್ದು ಸುಳ್ಳಲ್ಲ. ಈ ನಾಲ್ಕೂ ರಾಜ್ಯಗಳಲ್ಲಿ ಹೊಸ ರಸ್ತೆ, ಸಾರಿಗೆ ಮೂಲಸೌಕರ್ಯ ಯೋಜನೆ ಅನುಷ್ಠಾನಕ್ಕೆ ಮೋದಿ ಸರ್ಕಾರ ಒತ್ತುಕೊಟ್ಟಿದ್ದು ನೋಡಿದರೆ, ಇದು ಆ ರಾಜ್ಯಗಳಲ್ಲಿ ಮುಂಬರುವ ಚುನಾವಣೆ ಕಾರಣಕ್ಕಾಗಿ ಎಂಬುದು ಸ್ಪಷ್ಟವಾಗದೆ ಇರದು.
ತಮಿಳುನಾಡಿನಲ್ಲಿ ₹ 1.03 ಲಕ್ಷ ಕೋಟಿ ವೆಚ್ಚದಲ್ಲಿ 3500 ಕಿಮೀ, ಕೇರಳದಲ್ಲಿ ₹ 65 ಸಾವಿರ ಕೋಟಿ ವೆಚ್ಚದಲ್ಲಿ 1100 ಕಿಮೀ, ಪಶ್ಚಿಮ ಬಂಗಾಳದಲ್ಲಿ ₹ 25,000 ಕೋಟಿ ವೆಚ್ಚದಲ್ಲಿ 675 ಕಿಮೀ ಮತ್ತು ಆಸ್ಸಾಂನಲ್ಲಿ ₹ 34,000 ಕೋಟಿ ವೆಚ್ಚದಲ್ಲಿ 1300 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.
ದೀದಿ ನಾಡಿಗೆ ಬಂಪರ್ ಕೇಂದ್ರ ಬಜೆಟ್ನಲ್ಲಿ ಈ ನಾಲ್ಕೂ ರಾಜ್ಯಗಳನ್ನು ವಿಶೇಷವಾಗಿ ಪರಿಗಣಿಸಲು ಕಾರಣ ಕೆಲವೇ ತಿಂಗಳುಗಳಲ್ಲಿ ಅಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು. ಪಶ್ಚಿಮಬಂಗಾಳದಲ್ಲಿ ಏಪ್ರಿಲ್-ಮೇನಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಪಾಲಿಗೆ ಇದು ನಿರ್ಣಾಯಕ ರಾಜ್ಯ. ಪ್ರಧಾನಿ ಮೋದಿ, ಬಿಜೆಪಿಯನ್ನು ನೇರಾನೇರವಾಗಿ ಖಂಡಿಸುವ ಮಮತಾ ಬ್ಯಾನರ್ಜಿ ಹಿಡಿತದಲ್ಲಿರುವ ಅಧಿಕಾರವನ್ನು ಹೇಗಾದರೂ ಪಡೆಯಬೇಕು ಎಂಬ ಜಿದ್ದಿಗೆ ಬಿದ್ದಿರುವ ಬಿಜೆಪಿ, ಕಳೆದ ಕೆಲವು ತಿಂಗಳುಗಳಿಂದಲೇ ಬುನಾದಿ ಹಾಕುತ್ತಿದೆ. ತಿಂಗಳಿಗೊಬ್ಬ ರಾಷ್ಟ್ರನಾಯಕರಂತೆ ಅಲ್ಲಿಗೆ ತೆರಳಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದೀಗ ನಿರ್ಮಲಾ ಸೀತಾರಾಮನ್ ಸಹ ಬಜೆಟ್ನಲ್ಲಿ ಪಶ್ಚಿಮ ಬಂಗಾಳಕ್ಕೆ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ. ಅಲ್ಲಿ ಹೊಸ ಮಾರ್ಗ ನಿರ್ಮಾಣ ಮತ್ತು ಸದ್ಯ ಇರುವ ಕೋಲ್ಕತ್ತ-ಸಿಲಿಗುರಿ ಹೆದ್ದಾರಿ ಉನ್ನತೀಕರಣಕ್ಕಾಗಿ 25,000 ಕೋಟಿ ರೂ.ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಇದು ಮುಂದಿನ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಪಾಲಿಗೆ ಲಾಭವಾಗದೆ ಇರದು.
ತಮಿಳುನಾಡೂ ಟಾರ್ಗೆಟ್ ಹಾಗೇ ತಮಿಳುನಾಡಿನಲ್ಲೂ ವಿಧಾನಸಭಾ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದ್ದು, ಜ.30-31ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಲ್ಲಿಗೆ ತೆರಳಿದ್ದಾರೆ. ತಮಿಳುನಾಡಲ್ಲೂ ಸಹ ಚುನಾವಣಾ ಸಿದ್ಧತೆಗಳು ನಡೆಯುತ್ತಿದ್ದು, ಬಜೆಟ್ನಲ್ಲೂ ಬಂಪರ್ ಹೊಡೆದಿದೆ. ಅಲ್ಲಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯಕ್ಕಾಗಿ ಬರೋಬ್ಬರಿ 1.03 ಲಕ್ಷ ರೂ. ಮೀಸಲಿಡಲಾಗಿದೆ. ಈ ಯೋಜನೆ 2022ರಿಂದ ಪ್ರಾರಂಭವಾಗಲಿದೆ.
ಕೇರಳದಲ್ಲೂ ಚುನಾವಣೆ ಪರ್ವ ಕೇರಳದ ವಿಷಯಕ್ಕೆ ಬಂದರೆ ಅಲ್ಲೂ ಸಹ ಮೇ ತಿಂಗಳಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ 600 ಕಿ.ಮೀ ಉದ್ದದ ಮುಂಬೈ-ಕನ್ಯಾಕುಮಾರಿ ಕಾರಿಡಾರ್ ಸೇರಿ ಒಟ್ಟೂ 1100 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾರ್ಯಕ್ಕಾಗಿ ₹ 65,000 ಕೋಟಿ ಮೀಸಲಿಡಲಾಗಿದೆ.
ಆಸ್ಸಾಂನಲ್ಲೂ ಬಂತು ಎಲೆಕ್ಷನ್ ಆಸ್ಸಾಂನಲ್ಲೂ ಇಂಥದ್ದೇ ಸಂದರ್ಭವಿದೆ. ಅಲ್ಲೂ ಸಹ ಏಪ್ರಿಲ್ ಮಧ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2016ರಲ್ಲಿ ಆಸ್ಸಾಂನಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಿತ್ತು. ಅಲ್ಲಿಯವರೆಗೂ ಇದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಈ ಅಧಿಕಾರವನ್ನು ಮುಂಬರುವ ಚುನಾವಣೆಯಲ್ಲೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಆಸ್ಸಾಂಗೆ ಭೇಟಿ ನೀಡಿ, ಭೂಮಾಲೀಕತ್ವ ಹಕ್ಕುಪತ್ರ ವಿತರಣೆ ಮಾಡಿದ್ದರು. ಆಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಲಕ್ಷಾಂತರ ಜನರಿಗೆ ಭೂಮಿ ಹಂಚಿಕೆ ಪ್ರಮಾಣಪತ್ರವನ್ನು ವಿತರಿಸಲಾಗಿದ್ದು, ಇದು ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಅದರೊಂದಿಗೆ ಈಗ ಬಜೆಟ್ನಲ್ಲೂ ಹೆದ್ದಾರಿ ಅಭಿವೃದ್ಧಿಗಾಗಿ ಬರೋಬ್ಬರಿ 34,000 ಕೋಟಿ ರೂ.ವನ್ನು ನೀಡುವುದಾಗಿ ಕೇಂದ್ರ ಹೇಳಿದೆ.
ಚಹಾ ವ್ಯಾಪಾರಿಗಳಿಗೂ ಉಡುಗೊರೆ ! ಪಶ್ಚಿಮ ಬಂಗಾಳ ಮತ್ತು ಆಸ್ಸಾಂ ರಾಜ್ಯಗಳ ಚಹಾ ಕೆಲಸಗಾರರ ಅಭಿವೃದ್ಧಿಗೆ ಬಜೆಟ್ನಲ್ಲಿ 1000 ಕೋಟಿ ರೂ. ಮೀಸಲಿಟ್ಟಿದೆ. ಅದರಲ್ಲೂ ಈ ವಿಶೇಷ ಯೋಜನೆಯಲ್ಲಿ ಮಹಿಳಾ ಕೆಲಸಗಾರರು ಮತ್ತು ಮಕ್ಕಳ ಏಳ್ಗೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದೆ.
ಪ್ರತಿಪಕ್ಷಗಳಿಂದ ಟೀಕೆ ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸಿವೆ. ಇದೊಂದು ಗಿಮಿಕ್ ಎಂದು ಹೇಳಿವೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಆಸ್ಸಾಂನ ಪ್ರತಿಪಕ್ಷಗಳ ನಾಯಕರು ಕೇಂದ್ರದ ನಡೆಯನ್ನು ವಿರೋಧಿಸಿದ್ದು, ಚುನಾವಣಾ ಪ್ರಣಾಳಿಕೆಯಂತಿದೆ ಎಂದು ತಿರುಗೇಟು ನೀಡಿದ್ದಾರೆ.
Budget 2021 | ವಿತ್ತೀಯ ಕೊರತೆ ಸರಿದೂಗಿಸಲು ನಿರ್ಮಲಾ ಸೀತಾರಾಮನ್ ಹೆಣಗಾಟ
Published On - 4:57 pm, Mon, 1 February 21