ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ NIA ಕಚೇರಿ ತೆರೆಯಲು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಕೇಂದ್ರದ ಗೃಹ ಇಲಾಖೆಯ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಕಚೇರಿಗೆ 50 ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಲಾಗಿದೆ. ಭಯೋತ್ಪಾದನಾ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ಎನ್ಐಎ ರಾಷ್ಟ್ರೀಯ ತನಿಖಾ ದಳದ ಕಚೇರಿ ಬೆಂಗಳೂರಿನಲ್ಲಿ ಆರಂಭಕ್ಕೆ ಅನುಮೋದನೆ ಸಿಕ್ಕಿದೆ. ಬೆಂಗಳೂರು ಸೇರಿದಂತೆ ದೇಶದ ಆರು ನಗರಗಳಲ್ಲಿ NIA ಶಾಖಾ ಕಚೇರಿಯು ಆರಂಭವಾಗಲಿದೆ. ಬೆಂಗಳೂರು, ಅಹಮದಾಬಾದ್, ಪಾಟ್ನಾ, ಜೈಪುರ, ಭೋಪಾಲ್, ಭುವನೇಶ್ವರದಲ್ಲಿ NIA ಶಾಖಾ ಕಚೇರಿ ಆರಂಭವಾಗಲಿದೆ.
ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಎನ್.ಐ.ಎ ಕಚೇರಿ ಆರಂಭಕ್ಕೆ ಮನವಿ ಮಾಡಿದ್ದರು. ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳ ತನಿಖೆ ನಡೆಸಲು ರಚಿಸಲಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಶಾಖಾ ಕಚೇರಿಯು ಸದ್ಯದಲ್ಲೇ ಬೆಂಗಳೂರನಲ್ಲಿ ಆರಂಭವಾಗಲಿದೆ. ಬೆಂಗಳೂರು ನಗರ ಸೇರಿದಂತೆ ದೇಶದ 6 ನಗರಗಳಲ್ಲಿ ಎನ್ಐಎ ಶಾಖಾ ಕಚೇರಿ ಆರಂಭಿಸುವ ಕೇಂದ್ರ ಗೃಹ ಇಲಾಖೆಯ ಪ್ರಸ್ತಾವಕ್ಕೆ ಕೇಂದ್ರದ ಹಣಕಾಸು ಇಲಾಖೆಯು ಒಪ್ಪಿಗೆ ನೀಡಿದೆ. ಪ್ರತಿ ಶಾಖಾ ಕಚೇರಿಯಲ್ಲಿ 50 ಮಂದಿ ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಕೇಂದ್ರದ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಬೆಂಗಳೂರಿನ ಸಂಸದರ ಮನವಿಗೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಹಮದಾಬಾದ್, ಬೆಂಗಳೂರು, ಪಾಟ್ನಾ, ಜೈಪುರ, ಭೋಪಾಲ್ ಮತ್ತು ಭುವನೇಶ್ವರದಲ್ಲಿ ಹೊಸ ಶಾಖೆಗಳನ್ನು ತೆರೆಯಲು ಸಿದ್ಧವಾಗಿದೆ. ದೇಶದ ಆರು ನಗರಗಳಲ್ಲಿ ಆರು ಶಾಖಾ ಕಚೇರಿಗಳನ್ನು ತೆರೆಯಲು ಗೃಹ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಸೋಮವಾರ ಅನುಮೋದನೆ ನೀಡಿದೆ.
“ಅಹಮದಾಬಾದ್, ಬೆಂಗಳೂರು, ಪಾಟ್ನಾ, ಜೈಪುರ, ಭೋಪಾಲ್ ಭುವನೇಶ್ವರದಲ್ಲಿ ಕಚೇರಿಗಳ ರಚನೆ ಮತ್ತು 435 ಹುದ್ದೆಗಳ ಸೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದಿಂದ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. 300 ಹುದ್ದೆಗಳ ಸೃಷ್ಟಿಗೆ ಒಪ್ಪಿಗೆ ನೀಡಲಾಗಿದೆ” ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. 2008ರಲ್ಲಿ ಮುಂಬೈ ನಗರದ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳ ತನಿಖೆ, ವಿಚಾರಣೆ ನಡೆಸಲೆಂದೇ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ರಚಿಸಲಾಗಿದೆ. ಈ ತನಿಖಾ ದಳವು ಭಯೋತ್ಪಾದನಾ ಕೃತ್ಯಗಳಿಗೆ ಮಾತ್ರ ಸೀಮಿತ. ಭಯೋತ್ಪಾದನಾ ಕೃತ್ಯಗಳ ತನಿಖೆಯಲ್ಲಿ ಪಳಗಿದ ಅಧಿಕಾರಿಗಳನ್ನೇ ಎನ್ಐಎಗೆ ನೇಮಿಸಲಾಗುತ್ತದೆ.
ಇದರಿಂದಾಗಿ ಈಗ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆಯ ಶಾಖಾ ಕಚೇರಿ ಸದ್ಯದಲ್ಲೇ ಆರಂಭವಾಗಲಿದೆ. ಇದರಿಂದ ಕರ್ನಾಟಕದಲ್ಲಿ ಭಯೋತ್ಪಾದನಾ ವಿರೋಧಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಸಹಾಯವಾಗುತ್ತದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಎನ್‌ಐಎ ಕಚೇರಿ ತೆರೆಯಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದರು. ಕರಾವಳಿ ತೀರದ ಮಂಗಳೂರಿನಲ್ಲೂ ಎನ್ಐಎ ಕಚೇರಿ ತೆರೆಯಬೇಕೆಂದು ಕೆಲ ಸಂಸದರು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಈಗ ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎನ್ಐಎ ಶಾಖಾ ಕಚೇರಿ ತೆರೆಯಲು ಹಣಕಾಸಿನ ಅನುಮೋದನೆ ನೀಡಿದೆ. ಬೆಂಗಳೂರು, ಮಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ತ್ವರಿತ ಗತಿಯಲ್ಲಿ ತನಿಖೆ ನಡೆಸಲು ಎನ್ಐಎಯ ನುರಿತ ಅಧಿಕಾರಿಗಳು ಬೆಂಗಳೂರಿನಲ್ಲೇ ಇರುತ್ತಾರೆ. ಇದರಿಂದ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯ ಎಸಗುವ ವ್ಯಕ್ತಿ, ಸಂಘಟನೆಗಳನ್ನು ಕೆಲವೊಮ್ಮೆ ಮುಂಚಿತವಾಗಿ ಇಂಟಲಿಜೆನ್ಸ್ ಮಾಹಿತಿ ಆಧರಿಸಿ ತನಿಖೆ ನಡೆಸಲು ಕೂಡ ಸಹಾಯಕವಾಗುತ್ತದೆ.
ಮೂಲಗಳ ಪ್ರಕಾರ, ಕೇಂದ್ರದ ಗೃಹ ಇಲಾಖೆ ಹಣಕಾಸು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ಪ್ರತಿ ಕಚೇರಿಗೆ ಸರಾಸರಿ 72 ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕೇಳಿತ್ತು. ಆದರೆ ಕೇವಲ 50 ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಮಾತ್ರ ಅನುಮೋದನೆಯನ್ನು ನೀಡಲಾಗಿದೆ. ಬೆಂಗಳೂರು, ಪಾಟ್ನಾ ಮತ್ತು ಭೋಪಾಲ್ ಶಾಖೆಗಳನ್ನು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್‌ಗಳು (ಡಿಐಜಿ) ನೇತೃತ್ವ ವಹಿಸಿದರೆ, ಇತರ ಮೂರು ಶಾಖೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಟ್ಟದ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಎಲ್ಲಾ ಸ್ಥಳಗಳಲ್ಲಿ ಫೋರೆನ್ಸಿಕ್ ತಜ್ಞರ ಜೊತೆಗೆ ಪ್ರಕರಣಗಳನ್ನು ತನಿಖೆ ಮಾಡಲು ಐವರು ಇನ್ಸ್‌ಪೆಕ್ಟರ್‌ಗಳನ್ನು ಹೊಂದಿರುತ್ತಾರೆ.
“ಕಚೇರಿಗಳನ್ನು ತೆರೆಯಲು ಸಮಯ ತೆಗೆದುಕೊಳ್ಳುತ್ತದೆ, ಏಕೆಂದರೆ NIA ಕಚೇರಿಯ ಸ್ಥಳ, ನೇಮಕಾತಿ ಇತ್ಯಾದಿಗಳಿಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗಿದೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.
ಕೇಂದ್ರೀಯ ಏಜೆನ್ಸಿಯು ಭಾರತದಾದ್ಯಂತ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸುತ್ತಿದೆ, ಹಂತಗಳಲ್ಲಿ ನೇಮಕಾತಿಗಳನ್ನು ಮಾಡುತ್ತಿದೆ. ಕಳೆದ ತಿಂಗಳು, ಎನ್‌ಐಎ ಡೆಪ್ಯುಟೇಶನ್ ಆಧಾರದ ಮೇಲೆ 28 ಕಾನ್‌ಸ್ಟೆಬಲ್‌ಗಳ ಹುದ್ದೆಗಳಿಗೆ ಜಾಹೀರಾತು ನೀಡಿತ್ತು. ಈ ಕಾನ್‌ಸ್ಟೆಬಲ್‌ಗಳು ನವದೆಹಲಿ, ಗುವಾಹಟಿ, ಹೈದರಾಬಾದ್, ಮುಂಬೈ, ಲಕ್ನೋ, ಜಮ್ಮು, ಕೊಚ್ಚಿ, ಕೋಲ್ಕತ್ತಾ, ರಾಯ್‌ಪುರ, ಜಮ್ಮು, ಚಂಡೀಗಢ, ಇಂಫಾಲ್, ಚೆನ್ನೈ ಮತ್ತು ರಾಂಚಿಗಳಲ್ಲಿನ ಕಚೇರಿಗಳಿಗೆ ಸೇರಿಕೊಳ್ಳಲಿದ್ದಾರೆ.
ಪ್ರಸ್ತುತ, ನಾವು ಭಾರತದಾದ್ಯಂತ 12 ಶಾಖೆಗಳನ್ನು ಹೊಂದಿದ್ದೇವೆ, ಜೊತೆಗೆ ಹೊಸ ದೆಹಲಿಯ ಪ್ರಧಾನ ಕಛೇರಿಯನ್ನು ಹೊಂದಿದ್ದೇವೆ. ಎನ್‌ಐಎಯ ಆದೇಶ ಮತ್ತು ಭೌಗೋಳಿಕ ಹರಡುವಿಕೆಯೊಂದಿಗೆ, ವಿಶೇಷ ಕೌಶಲ್ಯ ಸೆಟ್‌ಗಳು ಮತ್ತು ತರಬೇತಿ ಪಡೆದ ಮಾನವಶಕ್ತಿಯ ಅಗತ್ಯತೆಗಳು ಸಹ ಬಹುಪಟ್ಟು ಬೆಳೆದಿವೆ ಎಂದು ಎನ್‌ಐಎ ಡಿಜಿ ಕುಲದೀಪ್ ಸಿಂಗ್ ಕಳೆದ ವರ್ಷ ನಿಯೋಜನೆ ಆಧಾರದ ಮೇಲೆ ಎಲ್ಲಾ ರಾಜ್ಯಗಳಿಗೆ ಕಳುಹಿಸಲಾದ ಪತ್ರದಲ್ಲಿ ತಿಳಿಸಿದ್ದಾರೆ.
“ಕಳೆದ 12 ವರ್ಷಗಳಲ್ಲಿ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಥವಾ ಕ್ರೈಂ ಬ್ರಾಂಚ್‌ನಲ್ಲಿ ಅನುಭವ ಹೊಂದಿರುವ ರಾಜ್ಯದ ಪೊಲೀಸ್ ಸಿಬ್ಬಂದಿ ಭಯೋತ್ಪಾದನೆ ಸಂಬಂಧಿತ ಮತ್ತು ಇತರ ಅಪರಾಧಗಳ ಬಗ್ಗೆ ನಿಖರವಾದ ತನಿಖೆ ನಡೆಸಲು ಉತ್ತಮವಾಗಿ ಸಜ್ಜಾಗಿರುವುದನ್ನು ನಾವು ನೋಡಿದ್ದೇವೆ” ಎಂದು ಡಿಜಿ ಕುಲದೀಪ್ ಸಿಂಗ್ ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಅತಂಕ! ಶಾಲೆಗಳನ್ನ ಬಂದ್ ಮಾಡಲು ಆರ್ಕಿಡ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಧಾರ
ಬೆಂಗಳೂರಿನಲ್ಲಿ ಸಂಜೆ 6 ರಿಂದ ಶನಿವಾರ ಬೆಳಗ್ಗೆ 5 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ: ಕಮಲ್ ಪಂತ್ ಆದೇಶ