ದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷಕ್ಕೆ ಸಂಬಂಧಿಸಿ ನಿನ್ನೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಹೇಳಿಕೆ ಬಗ್ಗೆ ಹಲವು ಗೊಂದಲಗಳು ಉಂಟಾಗಿತ್ತು. ಹಾಗಾಗಿ ಇಂದು ಕೇಂದ್ರ ಸರ್ಕಾರದಿಂದ ಅದಕ್ಕೆ ಸಂಬಂಧಪಟ್ಟಂತೆ ಪ್ರಕಟಣೆ ಬಿಡುಗಡೆ ಮಾಡಿದೆ.
ತನ್ನ ಪ್ರಕಟಣೆಯಲ್ಲಿ ಕೇಂದ್ರವು ನಿನ್ನೆಯ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಜೂನ್ 15ರಂದು ಚೀನಾ ಸೇನೆ ಗಡಿಯಲ್ಲಿ ಟೆಂಟ್ ನಿರ್ಮಿಸಲು ಯತ್ನಿಸಿದ್ದರಿಂದ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ಉಂಟಾಯಿತು. ಆ ಜಾಗವನ್ನು ಬಿಟ್ಟುಕೊಡಲು ಭಾರತೀಯ ಸೇನೆ ನಿರಾಕರಿಸಿದ ಕಾರಣ ಟೆಂಟ್ ನಿರ್ಮಿಸುವ ಚೀನಿಯರ ಪ್ರಯತ್ನವನ್ನ ವಿಫಲಗೊಳಿಸಿದೆ ಅಂತಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ಭಾರತದ ಭೂ ಭಾಗದಲ್ಲಿ ಯಾವುದೇ ಚೀನಿ ಸೈನಿಕರು ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಭೂ ಭಾಗವನ್ನು ಅತಿಕ್ರಮಿಸಲು ಯತ್ನ ನಡೆಸಿದವರಿಗೆ ತಕ್ಕ ಪಾಠವನ್ನು ನಮ್ಮ ಧೈರ್ಯಶಾಲಿ ವೀರ ಯೋಧರು ಕಲಿಸಿದ್ದಾರೆ. ಸೈನಿಕರು ಗಡಿ ರಕ್ಷಣೆಯಲ್ಲಿ ತೊಡಗಿರುವಾಗ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ಇದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಲಾಗಿದೆ.
ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸೇನೆಗೆ ಒಮ್ಮತದ ಬೆಂಬಲವನ್ನು ಸೂಚಿಸಲಾಗಿತ್ತು. ಪ್ರಚೋದನಕಾರಿ ಪ್ರಚಾರದಿಂದ ದೇಶದ ಒಗ್ಗಟ್ಟನ್ನು ಕಡೆಗಣಿಸಲಾಗಲ್ಲ ಎಂದು ಉಲ್ಲೇಖಿಸಿಲಾಗಿದೆ.
ಮೋದಿಯವರ ನಿನ್ನೆಯ ಹೇಳಿಕೆಯಿಂದ ಗಾಲ್ವಾನ್ ಕಣಿವೆಯನ್ನು ಚೀನಾಗೆ ಬಿಟ್ಟುಕೊಡಲಾಗಿದೆ ಎಂಬ ವ್ಯಾಖ್ಯಾನ ಎಲ್ಲೆಡೆ ಹಬ್ಬಿತ್ತು. ಭಾರತದ ಭೂ ಭಾಗದಲ್ಲಿ ಯಾವುದೇ ವಿದೇಶಿ ಸೇನೆ ಇಲ್ಲ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಗೆ, ಹಾಗಾದರೆ ಸೈನಿಕರು ಹೊಡೆದಾಡಿದ್ದು ಯಾಕೆ? ಸೈನಿಕರ ಸಾವಿಗೆ ಕಾರಣವೇನು? ಎಂದು ರಾಹುಲ್ ಗಾಂಧಿ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪ್ರಶ್ನಿಸಿದ್ದರು. ಹೀಗಾಗಿ ಕೇಂದ್ರ ಸರ್ಕಾರದಿಂದ ಮೋದಿ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.
Published On - 4:24 pm, Sat, 20 June 20