ನವದೆಹಲಿ, (ಅಕ್ಟೋಬರ್ 24): ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (Chief Justice) ಸಂಜೀವ್ ಖನ್ನಾ (Justice Sanjiv Khanna) ಅವರನ್ನು ನೇಮಕ ಮಾಡಲಾಗಿದೆ. ಈಗಿರುವ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ನೂತನ ಸಿಜೆಐ ಆಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಇಂದು (ಅಕ್ಟೋಬರ್ 24) ಅಧಿಸೂಚನೆ ಹೊರಡಿಸಿದೆ. ಇನ್ನು ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹಾಲಿ ಸಿಜೆಐ ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ ಡಿ ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಸಿಜೆಐ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಖನ್ನಾ ಅವರ ಹೆಸರನ್ನು ಈ ಹುದ್ದೆಗೆ ಸೂಚಿಸಿದ್ದರು. ಇದೀಗ ಕೇಂದ್ರ ಸರ್ಕಾರವೂ ಸಹ ಸಂಜೀವ್ ಖನ್ನಾ ಅವರನ್ನೇ ಮುಖ್ಯ ಸಿಜೆಐ ಆಗಿ ನವೆಂಬರ್ 11ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: Sanjiv Khanna: ಡಿವೈ ಚಂದ್ರಚೂಡ್ ನಿವೃತ್ತಿ ನಂತರ ಸಿಜೆಐ ಆಗಲಿರುವ ಸಂಜೀವ್ ಖನ್ನಾ ಯಾರು?
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 2025, ಮೇ 13ರಂದು ನಿವೃತ್ತರಾಗಲಿದ್ದು, ಆರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಸಿಜೆಐ ಹುದ್ದೆ ಅಲಂಕರಿಸಲಿದ್ದಾರೆ. ಇನ್ನು ವಕೀಲರಾಗಿ 1983ರಲ್ಲಿ ತೊಡಗಿಕೊಂಡ ಅವರು ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ.
2005ರಲ್ಲಿ ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಸಂಜೀವ್ ಖನ್ನಾ ಅವರನ್ನು ಒಂದು ವರ್ಷದ ಬಳಿಕ ಖಾಯಂ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಬಳಿಕ ಅವರು 2019, ಜನವರಿ 18ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 pm, Thu, 24 October 24