ಉತ್ತರಾಖಂಡ: ಉತ್ತರಾಖಂಡ ರಾಜ್ಯದಲ್ಲಿ ಚಾರ್ ಧಾಮ್ ಯಾತ್ರೆ (Char Dham Yatra) ಆರಂಭವಾದ 6 ದಿನಗಳಲ್ಲಿ 16 ಮಂದಿ ಯಾತ್ರಾರ್ಥಿಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಬಹುತೇಕ ಸಾವುಗಳು ಹೃದಯಾಘಾತದಿಂದ ಸಂಭವಿಸಿವೆ. ಚಾರ್ ಧಾಮಗಳಾದ ಕೇದಾರನಾಥ್ (Kedarnath), ಬದರಿನಾಥ (Badrinath), ಗಂಗೋತ್ರಿ, ಯಮುನೋತ್ರಿ ತಾಣಗಳು ಸಮುದ್ರ ಮಟ್ಟದಿಂದ 10ರಿಂದ 12 ಸಾವಿರ ಅಡಿ ಎತ್ತರದಲ್ಲಿವೆ. ಹೀಗಾಗಿ, ಉಸಿರಾಟದ ಸಮಸ್ಯೆ, ಹೃದಯಾಘಾತದ (Heart Attack) ಸಮಸ್ಯೆಗಳು ಎದುರಾಗುತ್ತಿವೆ.
ಉತ್ತರಾಖಂಡ್ ರಾಜ್ಯವು ದೇವಭೂಮಿ ಎಂದೇ ಹೆಸರಾದ ರಾಜ್ಯ. ಪ್ರಸಿದ್ದ ಯಾತ್ರಾಸ್ಥಳಗಳಾದ ಕೇದಾರನಾಥ, ಬದರಿನಾಥ್, ಗಂಗೋತ್ರಿ ಹಾಗೂ ಯಮುನೋತ್ರಿ ಈ ರಾಜ್ಯದಲ್ಲಿವೆ. ಈ ನಾಲ್ಕು ಯಾತ್ರಾ ಸ್ಥಳಗಳನ್ನೇ ಚಾರ್ ಧಾಮ್ ಎಂದು ಕರೆಯಲಾಗುತ್ತದೆ. ಗಂಗೋತ್ರಿಯಲ್ಲಿ ಗಂಗಾ ನದಿ ಉಗಮವಾಗಿ ಹರಿಯುತ್ತದೆ, ಯಮುನೋತ್ರಿಯಲ್ಲಿ ಯಮುನಾ ನದಿ ಉಗಮವಾಗುತ್ತದೆ. ಬದರಿನಾಥದಿಂದ ಸ್ಪಲ್ಪ ಮೇಲ್ಬಾಗದಲ್ಲಿರುವ ಬಂಡೆಯ ಬಳಿ ಸರಸ್ವತಿ ನದಿ ಕೂಡ ಉಗಮವಾಗುತ್ತದೆ ಎಂಬ ನಂಬಿಕೆ ಇದೆ.
ಈ ಚಾರ್ ಧಾಮ್ ಗಳಿಗೆ ಪ್ರತಿ ವರ್ಷ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಈ ವರ್ಷ ಈ ತಿಂಗಳ 3ನೇ ತಾರೀಖಿನಿಂದ ಚಾರ್ ಧಾಮ್ ಯಾತ್ರೆಗೆ ಅವಕಾಶ ನೀಡಲಾಗಿದೆ. ಕಳೆದ ಶನಿವಾರದಿಂದ ಕೇದಾರನಾಥ್ ದೇವಸ್ಥಾನದ ಬಾಗಿಲು ಭಕ್ತಾದಿಗಳಿಗಾಗಿ ತೆರೆದಿದೆ. ಈ ತಿಂಗಳ 3ನೇ ತಾರೀಖಿನಿಂದ ಸಾವಿರಾರು ಭಕ್ತರು ಚಾರ್ ಧಾಮ್ ಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಗಂಗೋತ್ರಿಗೆ ಭೇಟಿ ನೀಡಿ, ಗಂಗೆಯ ಉಗಮ ಸ್ಥಳದ ದರ್ಶನ ಮಾಡಿ, ಗಂಗಾ ಪಾನ ಮಾಡುತ್ತಿದ್ದಾರೆ. ಆದರೇ, ಕಳೆದ 6 ದಿನಗಳಲ್ಲೇ ಚಾರ್ ಧಾಮ್ ಯಾತ್ರೆಗೆ ಬಂದಿದ್ದವರ ಪೈಕಿ 16 ಮಂದಿ ಸಾವನ್ನಪ್ಪಿದ್ದಾರೆ. ವಿವಿಧ ಕಾರಣಗಳಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಕೊರೊನಾ ಕಾಲದಲ್ಲಿ ಯಾತ್ರಾರ್ಥಿಗಳು ತಮ್ಮ ಆರೋಗ್ಯ, ದೈಹಿಕ ಫಿಟ್ ನೆಸ್ ಬಗ್ಗೆ ವೈದ್ಯರಿಂದ ವರದಿ ತರಬೇಕಾಗಿತ್ತು. ವರದಿ ನೀಡಿದವರಿಗೆ ಮಾತ್ರವೇ ಚಾರ್ ಧಾಮ್ ಯಾತ್ರೆಗೆ ಅವಕಾಶ ನೀಡಲಾಗುತ್ತಿತ್ತು. ಆದರೇ, ಈಗ ಆ ರೀತಿಯ ನಿರ್ಬಂಧಗಳಿಲ್ಲ, ಕೇದಾರನಾಥ್ ದರ್ಶನಕ್ಕೂ ಪ್ರತಿ ದಿನ ಇಂತಿಷ್ಟೇ ಭಕ್ತರನ್ನು ಬಿಡುತ್ತೇವೆ ಎಂದು ಉತ್ತರಾಖಂಡ್ ಸರ್ಕಾರ ಹೇಳಿದರೂ, ಅದು ಜಾರಿಯಾಗಿಲ್ಲ. ಜೊತೆಗೆ ಈ ವರ್ಷ ಕೋವಿಡ್ ನೆಗೆಟಿವ್ ಟೆಸ್ಟಿಂಗ್ ವರದಿ ತರುವುದನ್ನು ಕಡ್ಡಾಯ ಮಾಡಿಲ್ಲ.
ಈ ವರ್ಷ ಬೇರೆ ಬೇರೆ ಕಾರಣಗಳಿಂದ ಯಾತ್ರಾರ್ಥಿಗಳ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಬಾರಿ ಯಾತ್ರಾರ್ಥಿಗಳ ಪ್ರವೇಶಕ್ಕೆ ಮಿತಿ ನಿಗದಿಪಡಿಸಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುತ್ತಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಉತ್ತರಕಾಶೀ ಚೀಫ್ ಮೆಡಿಕಲ್ ಆಫೀಸರ್ ಡಾಕ್ಟರ್ ಕೆ.ಎಸ್. ಚೌಹಾಣ್ ಹೇಳಿದ್ದಾರೆ.
ಜನರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಚಾರ್ ಧಾಮ್ ಯಾತ್ರೆ ಕೈಗೊಳ್ಳಲು ಆನ್ ಫಿಟ್ ಎಂದು ಗೊತ್ತಾದರೂ, ಏನಾದರೂ ಅನಾಹುತ ಸಂಭವಿಸಿದರೇ ನಾವೇ ಹೊಣೆ ಎಂದು ಮುಚ್ಚಳಿಕೆ ಬರೆದುಕೊಟ್ಟು ಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂದು ಡಾಕ್ಟರ್ ಕೆ.ಎಸ್. ಚೌಹಾಣ್ ಹೇಳುತ್ತಾರೆ.
ಇನ್ನು, ರುದ್ರಪ್ರಯಾಗ್ ಜಿಲ್ಲೆಯ ವೈದ್ಯಾಧಿಕಾರಿ ಡಾಕ್ಟರ್ ಬಿ.ಕೆ.ಶುಕ್ಲಾ ಅವರು ಹೇಳುವ ಪ್ರಕಾರ, 16 ಮಂದಿಯಲ್ಲಿ ಬಹುತೇಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಜೊತೆಗೆ 60 ವರ್ಷ ಮೇಲ್ಪಟ್ಟವರು ಸಾವನ್ನಪ್ಪಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ವೈದ್ಯ ಬಿ.ಕೆ. ಶುಕ್ಲಾ ಹೇಳಿದ್ದಾರೆ.
ದೂರದ ರಾಜ್ಯಗಳಿಂದ ಉತ್ತರಾಖಂಡ್ ರಾಜ್ಯದವರೆಗೂ ಸಂಚಾರ ಮಾಡಿದ ಮೇಲೆ ಚಾರ್ ಧಾಮ್ ಯಾತ್ರೆ, ಟ್ರೆಕ್ಕಿಂಗ್ ಅನ್ನು ಪೂರ್ಣಗೊಳಿಸುತ್ತೇವೆ ಎಂಬ ನಂಬಿಕೆ ಜನರಲ್ಲಿ ಬರುತ್ತೆ. ಆದರೇ, ಚಾರ್ ಧಾಮ್ ದ ಪರಿಸ್ಥಿತಿಯೇ ಭಿನ್ನ. ಚಾರ್ ಧಾಮ್ ಗಳಲ್ಲಿ ಉಷ್ಣಾಂಶ, ಎತ್ತರ, ಆಕ್ಸಿಜನ್ ಮಟ್ಟ ಸಂಪೂರ್ಣವಾಗಿ ಬೇರೆಡೆಗಿಂತ ಭಿನ್ನವಾಗಿರುತ್ತದೆ.
ಇನ್ನೂ 6 ದಿನಗಳಲ್ಲಿ 16 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿರುವುದಕ್ಕೆ ಪ್ರತಿಕ್ರಿಯಿಸಿರುವ ಉತ್ತರಾಖಂಡ್ ಆರೋಗ್ಯ ಸಚಿವ ಧಾನ್ ಸಿಂಗ್ ರಾವತ್, ಈಗಾಗಲೇ ಚಾರ್ ಧಾಮ್ ಗಳಲ್ಲಿ ಮೆಡಿಕಲ್ ಸೌಲಭ್ಯ ನೀಡಲಾಗಿದೆ. ಪ್ರತಿಯೊಂದು ಸ್ಥಳದಲ್ಲೂ ಎರಡು ಹೆಚ್ಚುವರಿ ಹೈ ಟೆಕ್ ಆ್ಉಂಬುಲೆನ್ಸ್ ನಿಯೋಜನೆಗೂ ಸೂಚನೆ ನೀಡಲಾಗಿದೆ. ಸದ್ಯದಲ್ಲೇ 60 ವರ್ಷ ಮೇಲ್ಪಟ್ಟವರಿಗೆ ಅವರ ರಾಜ್ಯದಿಂದಲೇ ಹೆಲ್ತ್ ಸರ್ಟಿಫಿಕೇಟ್ ತರಲು ಸೂಚನೆ ನೀಡುತ್ತೇವೆ ಎಂದು ಸಚಿವ ಧಾನ್ ಸಿಂಗ್ ರಾವತ್ ಹೇಳಿದ್ದಾರೆ.
ಚಾರ್ ಧಾಮ್ ಗಳಲ್ಲಿ ಸಾವನ್ನಪ್ಪಿದ ಹದಿನಾರು ಮಂದಿಯ ಪೈಕಿ 8 ಯಮುನೋತ್ರಿಯಲ್ಲಿ ಸಾವನ್ನಪ್ಪಿದ್ದಾರೆ. ಕೇದಾರನಾಥದಲ್ಲಿ ಐವರು, ಗಂಗೋತ್ರಿಯಲ್ಲಿ ಇಬ್ಬರು, ಬದರಿನಾಥ್ ದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ 16 ಮಂದಿಯಲ್ಲಿ 13 ಮಂದಿ ಪುರುಷರು, ಮೂವರು ಮಹಿಳೆಯರು. ಸಾವನ್ನಪ್ಪಿದವರ ಪೈಕಿ ಐವರು ಉತ್ತರ ಪ್ರದೇಶ ರಾಜ್ಯದವರು. ನಾಲ್ವರು ಗುಜರಾತ್ ರಾಜ್ಯದವರು, ಇಬ್ಬರು ಮಹಾರಾಷ್ಟ್ರ, ಇಬ್ಬರು ಮಧ್ಯಪ್ರದೇಶ ರಾಜ್ಯದವರು, ಇನ್ನೂ ರಾಜಸ್ಥಾನ, ಹರಿಯಾಣ ಹಾಗೂ ನೇಪಾಳದ ಓರ್ವರು ಸಾವನ್ನಪ್ಪಿದ್ದಾರೆ.
ಮೂರು ವರ್ಷದ ಹಿಂದೆ ಮೂವತ್ತೆಂಟು ಲಕ್ಷ ಯಾತ್ರಾರ್ಥಿಗಳು ಚಾರ್ ಧಾಮ್ ಗೆ ಭೇಟಿ ನೀಡಿದ್ದರು. ಆಗ 91 ಮಂದಿ ಹೃದಯಾಘಾತ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೊರೊನಾದ ಕಾರಣದಿಂದ ಚಾರ್ ಧಾಮ್ ಯಾತ್ರೆಗೆ ಹೆಚ್ಚಿನ ಭಕ್ತಾದಿಗಳಿಗೆ ಅವಕಾಶ ಕೊಟ್ಟಿರಲಿಲ್ಲ. 2017ರಲ್ಲಿ 112 ಯಾತ್ರಾರ್ಥಿಗಳು ಹಾಗೂ 2018ರಲ್ಲಿ 102 ಯಾತ್ರಾರ್ಥಿಗಳು ಚಾರ್ ಧಾಮ್ ಯಾತ್ರೆ ವೇಳೆ ಸಾವನ್ನಪ್ಪಿದ್ದರು ಎಂದು ಉತ್ತರಾಖಂಡ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Mon, 9 May 22