ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮದ ಬಗ್ಗೆ ಚೆನ್ನೈ ವ್ಯಕ್ತಿಯಿಂದ ಗಂಭೀರ ಆರೋಪ, ₹ 5 ಕೋಟಿ ಪರಿಹಾರಕ್ಕೆ ಆಗ್ರಹ

ಚೆನ್ನೈನ ಶ್ರೀ ರಾಮಚಂದ್ರ ಇನ್ಸ್ಟಿಟ್ಯೂಟ್​ ಆಫ್ ಹೈಯರ್​ ಎಜ್ಯುಕೇಶನ್​ ಆ್ಯಂಡ್ ರಿಸರ್ಚ್​​ನಲ್ಲಿ ನಡೆಸಲಾದ ಕೋವಿಶೀಲ್ಡ್ ಲಸಿಕೆ ಕ್ಲಿನಿಕಲ್​ ಟ್ರಯಲ್​ನಲ್ಲಿ ಈ ವ್ಯಕ್ತಿ ಸ್ವಯಂಸೇವಕರಾಗಿದ್ದರು. ಅಕ್ಟೋಬರ್​ 1ರಂದು ಸ್ವಯಂಸೇವಕರಾಗಿದ್ದ ಎಲ್ಲರಿಗೂ ಲಸಿಕೆ ಪ್ರಾಯೋಗಿಕ ಡೋಸೇಜ್​ ನೀಡಲಾಗಿತ್ತು.

ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮದ ಬಗ್ಗೆ ಚೆನ್ನೈ ವ್ಯಕ್ತಿಯಿಂದ ಗಂಭೀರ ಆರೋಪ, ₹ 5 ಕೋಟಿ ಪರಿಹಾರಕ್ಕೆ ಆಗ್ರಹ
ಕೊವಿಡ್​ ಲಸಿಕೆಯ ಸಾಂದರ್ಭಿಕ ಚಿತ್ರ

Updated on: Nov 29, 2020 | 6:38 PM

ದೆಹಲಿ: ಪುಣೆಯ ಸೆರಂ ಇನ್ಸ್ಟಿಟ್ಯೂಟ್​ ಸಹಯೋಗದೊಂದಿಗೆ ಆಕ್ಸಫರ್ಡ್ ಯೂನಿವರ್ಸಿಟಿ ​ಮತ್ತು ಆಸ್ಟ್ರಾಜೆನಿಕಾ ಫಾರ್ಮಸಿ ಅಭಿವೃದ್ಧಿಪಡಿಸುತ್ತಿರುವ ‘ಕೋವಿಶೀಲ್ಡ್​’ ಕೊರೊನಾ ಲಸಿಕೆ ವಿರುದ್ಧ ಸ್ವಯಂಸೇವಕರೋರ್ವರು ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಾಯೋಗಿಕ ಲಸಿಕೆಯ ಪರೀಕ್ಷೆ, ಉತ್ಪಾದನೆ ಮತ್ತು ವಿತರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಉದ್ಯಮ ಸಲಹೆಗಾರರಾಗಿರುವ ಇವರಿಗೆ 40 ವರ್ಷ. ಕೋವಿಶೀಲ್ಡ್ ಲಸಿಕೆ ಪ್ರಯೋಗಕ್ಕೆ ಸ್ವಪ್ರೇರಣೆಯಿಂದ ಮುಂದೆ ಬಂದಿದ್ದರು. ಆದರೆ ಅದನ್ನು ತೆಗೆದುಕೊಂಡ ನಂತರ ನರ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗಿವೆ ಎಂದು ಹೇಳುತ್ತಿದ್ದಾರೆ. ಲಸಿಕೆಯಿಂದ ತನಗಾದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಬೇಕಾಗಿದೆ. ಹಾಗಾಗಿ ₹ 5 ಕೋಟಿ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನಿಟ್ಟಿದ್ದಾರೆ.

ಚೆನ್ನೈನ ಶ್ರೀ ರಾಮಚಂದ್ರ ಇನ್ಸ್ಟಿಟ್ಯೂಟ್​ ಆಫ್ ಹೈಯರ್​ ಎಜ್ಯುಕೇಶನ್​ ಆ್ಯಂಡ್ ರಿಸರ್ಚ್​​ನಲ್ಲಿ ನಡೆಸಲಾದ ಕೋವಿಶೀಲ್ಡ್ ಲಸಿಕೆ ಕ್ಲಿನಿಕಲ್​ ಟ್ರಯಲ್​ನಲ್ಲಿ ಈ ವ್ಯಕ್ತಿ ಪಾಲ್ಗೊಂಡಿದ್ದರು. ಅಕ್ಟೋಬರ್​ 1ರಂದು ಎಲ್ಲರಿಗೂ ಲಸಿಕೆ ಪ್ರಾಯೋಗಿಕ ಡೋಸೇಜ್​ ನೀಡಲಾಗಿತ್ತು. ಇವರ ಮನವಿಯ ಹಿನ್ನೆಲೆಯಲ್ಲಿ ಕಾನೂನು ಸಂಸ್ಥೆಯೊಂದು ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ (ICMR) ಮತ್ತು ಸೆಂಟ್ರಲ್​ ಡ್ರಗ್ಸ್​ ಸ್ಟಾಂಡರ್ಡ್​ ಕಂಟ್ರೋಲ್​ ಆರ್ಗನೈಸೇಶನ್​ಗೆ ನವೆಂಬರ್ 21ರಂದು ನೋಟಿಸ್ ನೀಡಿದೆ. ಹಾಗೇ ಆಸ್ಟ್ರಾಜೆನಿಕಾ ಫಾರ್ಮಸಿ ಸಿಇಒ, ಆಕ್ಸಫರ್ಡ್​ ಲಸಿಕೆ ಪ್ರಯೋಗದ ಮುಖ್ಯ ತನಿಖಾಧಿಕಾರಿ ಹಾಗೂ ಚೆನ್ನೈನ ಶ್ರೀ ರಾಮಚಂದ್ರ ಇನ್ಸ್ಟಿಟ್ಯೂಟ್​ ಆಫ್ ಹೈಯರ್​ ಎಜ್ಯುಕೇಶನ್​ ಆ್ಯಂಡ್ ರಿಸರ್ಚ್​​ನ ಉಪಕುಲಪತಿಗೆ ಲೀಗಲ್​ ನೋಟಿಸ್ ಕೂಡ ಕಳಿಸಲಾಗಿದೆ.

ಲಸಿಕೆ ತೆಗೆದುಕೊಂಡ ಬಳಿಕ ಆರೋಗ್ಯ ಏರುಪೇರಾಗಿದೆ. ಬಹಳ  ಸಮಯದವರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಅಷ್ಟಾದರೂ ಆರೋಗ್ಯ ಸರಿಹೋಗುವ ಬಗ್ಗೆ ವೈದ್ಯರು ಭರವಸೆ ಕೊಡುತ್ತಿಲ್ಲ. ಈ ಕಾರಣಕ್ಕೆ ₹ 5 ಕೋಟಿ ಪರಿಹಾರ ನೀಡಬೇಕು ಎಂದು ಕೇಳುತ್ತಿದ್ದಾರೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಸ್ವಯಂಸೇವಕನಿಗೆ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗೆ ಕೋವಿಶೀಲ್ಡ್​ ಲಸಿಕೆ ತೆಗೆದುಕೊಂಡಿದ್ದೇ ಕಾರಣವೇ ಎಂಬ ಬಗ್ಗೆ ದಿ ಡ್ರಗ್ಸ್​ ಕಂಟ್ರೋಲರ್ ಜನರಲ್​ ಆಫ್​ ಇಂಡಿಯಾ ಮತ್ತು ಇನ್​ಸ್ಟಿಟ್ಯೂಷನಲ್ ಎಥಿಕ್ಸ್ ಸಮಿತಿ ತನಿಖೆ ಶುರುಮಾಡಿದೆ.

Published On - 6:29 pm, Sun, 29 November 20