ನವೆಂಬರ್ 14 ಬರೀ ಕ್ಯಾಲೆಂಡರ್‌ನಲ್ಲಿ ಇರುವ ದಿನಾಂಕವಲ್ಲ. ಬದಲಾಗಿ ಪ್ರತಿ ಮಗುವಿನಲ್ಲೂ ಇರುವ ಮುಗ್ಧತೆ, ಸಂತೋಷ ಹಾಗೂ ಮಿತಿಯಿಲ್ಲದ ಸಾಮರ್ಥ್ಯದ ಆಚರಣೆಯಾಗಿದೆ. ಹೌದು ಪ್ರತಿ ವರ್ಷ ನವೆಂಬರ್ 14 ರಂದು ಭಾರತದಾದ್ಯಂತ ಮಕ್ಕಳ ದಿನಚಾರಣೆ (Childrens Day) ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ‘ಚಾಚಾ ನೆಹರು’ ಎಂದು ಜನಪ್ರಿಯರಾಗಿದ್ದ ಪಂಡಿತ್ ನೆಹರು ಚಾಚಾ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ. ಮಕ್ಕಳೇ ದೇಶದ ಭವಿಷ್ಯ ಎನ್ನುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನೇ ಮಕ್ಕಳ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆದು ಬಂದಿದೆ. ಚಿಣ್ಣರ ಹಕ್ಕುಗಳು, ಕಾಳಜಿ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆರಂಭಿಸಲಾಗಿದೆ.
ಭಾರತದಲ್ಲಿ ಆರಂಭದಲ್ಲಿ ನವೆಂಬರ್ 20 ರಂದು ಮಕ್ಕಳ ದಿನವನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ, ಭಾರತದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಮರಣದ ನಂತರ, ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ.
ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಮುಖ್ಯ ಧ್ಯೇಯ ಆಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಕ್ಕಳ ನೆಚ್ಚಿನ ಚಾಚ ಜವಾಹರಲಾಲ್ ನೆಹರೂ ರವರು ‘Tomorrow is Yours’ (ನಾಳೆ ನಿಮ್ಮದು) ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಮಕ್ಕಳೇ ಈ ದೇಶದ ಭವಿಷ್ಯ ಎಂದು ಜವಾಹರಲಾಲ್ ನೆಹರು ನಂಬಿದ್ದರು. ಮಕ್ಕಳು ಉತ್ತಮ ಶಿಕ್ಷಣ ಪಡೆದರೆ ಅದ್ಭುತಗಳನ್ನು ಸೃಷ್ಟಿಸಬಹುದು. ಭಾರತದ ಎಲ್ಲಾ ವಯಸ್ಸಿನ, ಲಿಂಗ ಮತ್ತು ರಾಜ್ಯಗಳ ಮಕ್ಕಳಿಗೆ ಹೆಚ್ಚಿನ ಶೈಕ್ಷಣಿಕ ಮತ್ತು ಜೀವನ ಸೌಲಭ್ಯಗಳಿಗೆ ದಾರಿ ಮಾಡಿಕೊಟ್ಟದ್ದು ಅವರ ಬಲವಾದ ದೃಷ್ಟಿಯಾಗಿದೆ.
ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ