ಶ್ರೀಲಂಕಾದ (Sri lanka) ಬಂದರಿನತ್ತ ಚೀನಾ (China) ಹಡಗುಗಳು ಸಾಗುತ್ತಿದ್ದು ಈ ಪರಿಸ್ಥಿತಿ ಬಗ್ಗೆ ಭಾರತ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ. ಚೀನಾದ ಸಂಶೋಧನೆ ಮತ್ತು ಸಮೀಕ್ಷೆಯ ಹಡಗು ಆಗಸ್ಟ್ 11 ರಂದು ದಕ್ಷಿಣ ಶ್ರೀಲಂಕಾದಲ್ಲಿರುವ ಚೀನಾ ಪಾಲುದಾರಿಕೆ ಹೊಂದಿರುವ ಹಂಬಂಟೋಟಾ ಬಂದರಿಗೆ ಹೋಗಿ ನಿಲ್ಲಲಿದೆ. ಈ ಬಗ್ಗೆ ಎನ್ಡಿಟಿವಿಗೆ ಪ್ರತಿಕ್ರಿಯಿಸಿದ ಶ್ರೀಲಂಕಾದ ರಕ್ಷಣಾ ಸಚಿವಾಲಯದ ಮಾಧ್ಯಮ ವಕ್ತಾರ ಕರ್ನಲ್ ನಳಿನ್ ಹೆರಾತ್ , ಹಡಗು ಮಿಲಿಟರಿ ಸ್ಥಾಪನೆಗಳನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಕಳವಳ ಶ್ರೀಲಂಕಾಕ್ಕೆ ಅರ್ಥವಾಗುತ್ತದೆ. ಆದರೆ ಇದು ವಾಡಿಕೆಯ ಪ್ರಕ್ರಿಯೆ ಎಂದಿದ್ದಾರೆ. ಭಾರತ, ಚೀನಾ, ರಷ್ಯಾ, ಜಪಾನ್ ಮತ್ತು ಮಲೇಷ್ಯಾದ ಹಡಗುಗಳು ಕಾಲಾಕಾಲಕ್ಕೆ ವಿನಂತಿಸಿವೆ. ಹಾಗಾಗಿ ನಾವು ಚೀನಾಕ್ಕೂ ಅನುಮತಿ ನೀಡಿದ್ದೇವೆ. ಪರಮಾಣು ಸಾಮರ್ಥ್ಯದ ಹಡಗು ನಮ್ಮತ್ತ ಬರುತ್ತಿದ್ದರೆ ಮಾತ್ರ ನಾವು ಅನುಮತಿ ನಿರಾಕರಿಸಬಹುದು. ಇದು ಅಂಥಾ ಹಡಗುಅಲ್ಲ ಎಂದು ಕರ್ನಲ್ ಹೆರಾತ್ ಹೇಳಿದ್ದಾರೆ.
ಹಿಂದೂಮಹಾಸಾಗರದಲ್ಲಿ ಕಣ್ಗಾವಲು ಮತ್ತು ನ್ಯಾವಿಗೇಷನ್ಗಾಗಿ ಹಡಗು ಕಳಿಸುತ್ತಿದೆ ಎಂದು ಚೀನಾ ಶ್ರೀಲಂಕಾಕ್ಕೆ ತಿಳಿಸಿತ್ತು ಎಂದು ಅವರು ಹೇಳಿದ್ದಾರೆ.
ಯಾನ್ ವಾಂಗ್ 5 ಎಂಬ ಚೀನಾದ ಹಡಗು ಮರುಪೂರಣಕ್ಕಾಗಿ ಶ್ರೀಲಂಕಾದ ಅನುಮತಿ ಕೇಳಿತ್ತು. ಬಂದರಿನಲ್ಲಿ ತಂಗಲು ಇರುವ ಸಮಯ ಆಗಸ್ಟ್ 11ರಿಂದ 17 ಆಗಿದೆ. ಚೀನಾದ ಹಡಗು ತುಂಬಾನೇ ಸಾಮರ್ಥ್ಯವುಳ್ಳದ್ದಾಗಿದ್ದು, ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಹಡಗು ಆಗಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯ ಹೇಳಿದೆ.
ಹಡಗು ಪರಮಾಣು ಸ್ಥಾವರ ಮತ್ತು ಮಿಲಿಟರಿ ಸ್ಟೇಷನ್ ಗಳ ಮೇಲೆ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಭಾರತ ಆತಂಕ ವ್ಯಕ್ತಪಡಿಸಿತ್ತು ಎಂದು ಮೂಲಗಳು ಹೇಳಿವೆ.
ಭಾರತ ಮತ್ತು ಚೀನಾ ಹಿಂದೂ ಮಹಾಸಾಗರದಲ್ಲಿ ಪ್ರಭಾವ ಬೀರಲು ಸ್ಪರ್ಧಿಸುತ್ತಿವೆ ಎಂದು ನಮಗೆ ತಿಳಿದಿದೆ.ಆದರೆ ಕೆಲವು ಸಂದರ್ಭಗಳಲ್ಲಿ ನಾವು ಅನುಮತಿಸಬೇಕಾಗುತ್ತದೆ. ಈ ಬಗ್ಗೆ ಭಾರತಕ್ಕೂ ಮಾಹಿತಿ ನೀಡುವುದು ಕರ್ತವ್ಯ. ಅಂದಹಾಗೆ ಚೀನಾದ ಹಡಗು ನಮ್ಮ ಸಮುದ್ರಕ್ಕೆ ಬರುತ್ತಿರುವುದು ಇದೇ ಮೊದಲಲ್ಲ ಎಂದು ಈ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
Published On - 6:34 pm, Thu, 4 August 22