ಡಿಎಂಕೆಗೆ ಭರ್ಜರಿ ಶಾಕ್: ಭದ್ರಕೋಟೆಯಲ್ಲೇ ಹಾಲಿ ಸಿಎಂ ಸ್ಟಾಲಿನ್​​ ಮಣಿಸಿದ ಟಿವಿಕೆ

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಪರಾಭವಗೊಂಡಿದ್ದಾರೆ. 2011ರಿಂದ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿಯೇ ಆಡಳಿತಾರೂಢ ಡಿಎಂಕೆಗೆ ದಳಪತಿ ವಿಜಯ್ ಪಕ್ಷ ಶಾಕ್ ನೀಡಿದೆ. ಉಭಯ ಅಭ್ಯರ್ಥಿಗಳ ನಡುವೆ ಆರಂಭದಿಂದಲೂ ಭಾರಿ ಪೈಪೋಟಿ ಇತ್ತಾದರೂ ಅಂತಿಮವಾಗಿ ಎಂ.ಕೆ. ಸ್ಟಾಲಿನ್ ಟಿವಿಕೆ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.

ಡಿಎಂಕೆಗೆ ಭರ್ಜರಿ ಶಾಕ್: ಭದ್ರಕೋಟೆಯಲ್ಲೇ ಹಾಲಿ ಸಿಎಂ ಸ್ಟಾಲಿನ್​​ ಮಣಿಸಿದ ಟಿವಿಕೆ
ಎಂ.ಕೆ. ಸ್ಟಾಲಿನ್​​

Updated on: May 04, 2026 | 5:00 PM

ಚೆನ್ನೈ, ಮೇ 04: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಭ್ಯರ್ಥಿ ಎಂ.ಕೆ. ಸ್ಟಾಲಿನ್ ಉತ್ತರ ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ವಿ.ಎಸ್​.ಬಾಬು ವಿರುದ್ಧ ಸೋಲುಂಡಿದ್ದು, ಆಡಳಿತಾರೂಢ ಪಕ್ಷಕ್ಕೆ ನಟ ದಳಪತಿ ವಿಜಯ್​​ ಶಾಕ್​​ ಮೇಲೆ ಶಾಕ್​​ ನೀಡಿದ್ದಾರೆ. ಉಭಯ ಅಭ್ಯರ್ಥಿಗಳ ನಡುವೆ ಆರಂಭದಿಂದಲೂ ಭಾರಿ ಪೈಪೋಟಿ ಇತ್ತಾದರೂ ಅಂತಿಮವಾಗಿ ಎಂ.ಕೆ. ಸ್ಟಾಲಿನ್ ಟಿವಿಕೆ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.

ಬಾಬು ಅವರು 9,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸ್ಟಾಲಿನ್​​ ವಿರುದ್ಧ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ. ಬಾಬು ಅವರಿಗೆ 82,000ಕ್ಕೂ ಹೆಚ್ಚು ಮತಗಳು ಬಂದಿದ್ದರೆ, ಸ್ಟಾಲಿನ್ ಅವರಿಗೆ ಸುಮಾರು 73,000 ಮತಗಳು ಸಿಕ್ಕಿವೆ. ಎಐಎಡಿಎಂಕೆ ಅಭ್ಯರ್ಥಿ ಆರ್. ಸಂತಾನಕೃಷ್ಣನ್ ಸುಮಾರು 14,000 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಟಿವಿಕೆ ಭರವಸೆಗಳು; ಗೃಹಿಣಿಯರಿಗೆ 2,500 ರೂ, ವೃದ್ಧರಿಗೆ 3,000 ರೂ, ಉಚಿತ ಗ್ಯಾಸ್, ವಧುವಿಗೆ ಚಿನ್ನ ಇತ್ಯಾದಿ ಕೊಡುಗೆ

ಭಧ್ರ ಕೋಟೆಯಲ್ಲಿಯೇ ಡಿಎಂಕೆಗೆ ಮುಖಭಂಗ

ಕಳೆದ ಕೆಲವು ವರ್ಷಗಳಿಂದ ಕೊಳತ್ತೂರು ಕ್ಷೇತ್ರ ಡಿಎಂಕೆಯ ಭದ್ರ ಕೋಟೆಯಾಗಿದ್ದು, ಎಂ.ಕೆ. ಸ್ಟಾಲಿನ್ 2011ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2021ರ ಚುನಾವಣೆಯಲ್ಲಿ ಅವರು ಎಐಎಡಿಎಂಕೆ ಅಭ್ಯರ್ಥಿ ಆದಿ ರಾಜಾರಾಮ್ ವಿರುದ್ಧ 70,000ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಆದರೆ ಈ ಬಾರಿಯ ಚುನಾವಣಾ ಫಲಿತಾಂಶ ಡಿಎಂಗೆ ಮರ್ಮಾಘಾತ ಉಂಟುಮಾಡಿದೆ.

ಯಾರು ಈ ವಿ.ಎಸ್. ಬಾಬು?

ವಿ.ಎಸ್. ಬಾಬು ಅವರು ಹಿಂದಿನಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿ. 75 ವರ್ಷದ ಬಾಬು ಅವರು 2006ರಿಂದ 2011ರವರೆಗೆ ಪುರಸವಾಕ್ಕಂ ಕ್ಷೇತ್ರದ ಶಾಸಕರಾಗಿದ್ದರು. 2011ರವರೆಗೆ ಉತ್ತರ ಚೆನ್ನೈ ಡಿಎಂಕೆ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ನಂತರ ಎಐಎಡಿಎಂಕೆ ಸೇರಿ, ಇತ್ತೀಚೆಗೆ ನಟ ವಿಜಯ್ ಸ್ಥಾಪಿಸಿದ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 4:10 pm, Mon, 4 May 26

Follow Us