ಲಖನೌ: ಲಖನೌದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ (Yogi Adityanath) ಅವರು ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಾದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) “ಸಮಾಜವಾದಿ ಪಾರ್ಟಿ (Samajwadi Party) ನಿರ್ಮಿಸಿದ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹೊಸ ಸರ್ಕಾರಕ್ಕೆ ಅಭಿನಂದನೆಗಳು. ಕೇವಲ ಸರ್ಕಾರ ರಚಿಸಲು ಅಲ್ಲ, ಜನರ ಸೇವೆಗಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಕ್ರೆಡಿಟ್ ಅನ್ನು ಬಿಜೆಪಿ ಕದಿಯುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು. ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಲಖನೌದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಹಲವಾರು ಉನ್ನತ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕೇಶವ್ ಪ್ರಸಾದ್ ಮೌರ್ಯ ಅವರು ಸಿರತುದಿಂದ ಚುನಾವಣೆಯಲ್ಲಿ ಸೋತರೂ ಉಪಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ . ದಿನೇಶ್ ಶರ್ಮಾ ಬದಲಿಗೆ ಎರಡನೇ ಉಪ ಮುಖ್ಯಮಂತ್ರಿಯಾಗಿ ಬ್ರಜೇಶ್ ಪಾಠಕ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸಿದ ಪ್ರಮುಖ ಬಿಜೆಪಿ ಮುಖಗಳಲ್ಲಿ ಬೇಬಿ ರಾಣಿ ಮೌರ್ಯ, ಸ್ವತಂತ್ರ ದೇವ್ ಸಿಂಗ್, ಸುರೇಶ್ ಖನ್ನಾ, ನಂದಗೋಪಾಲ್ ನಂದಿ ಮೊದಲಾದವರು ಸೇರಿದ್ದಾರೆ.
नई सरकार को बधाई कि वो सपा के बनाए स्टेडियम में शपथ ले रही है। शपथ सिर्फ़ सरकार बनाने की नहीं, जनता की सच्ची सेवा की भी लेनी चाहिए।
— Akhilesh Yadav (@yadavakhilesh) March 25, 2022
ಮೊಹ್ಸಿನ್ ರಾಜಾ, ಸಿದ್ಧಾರ್ಥ್ ನಾಥ್ ಸಿಂಗ್, ಅಶುತೋಷ್ ಟಂಡನ್ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 273 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಬಾರಿಗೆ ಅಧಿಕಾರಕ್ಕೇರಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆದ ನಂತರ 403 ಸದಸ್ಯ ಬಲದ ವಿಧಾನಸಭೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳು 125 ಸ್ಥಾನಗಳನ್ನು ಗೆದ್ದಿವೆ.
ಯೋಗಿ ಪ್ರಮಾಣ ವಚನ ಸ್ವೀಕಾರ
ಲಖನೌದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ ಶುಕ್ರವಾರ ಉತ್ತರ ಪ್ರದೇಶದ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗೋರಖನಾಥ ಮಠದ ಪ್ರಧಾನ ಅರ್ಚಕರೂ ಆಗಿರುವ ಆದಿತ್ಯನಾಥ ಅವರು ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿದ್ದಾರೆ. ಸಂಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಸತತ ಎರಡನೇ ಅವಧಿಗೆ ಗೆದ್ದ ಮೊದಲ ಸಿಎಂ ಆಗಿದ್ದಾರೆ ಯೋಗಿ.
ಇಬ್ಬರು ಉಪ ಮುಖ್ಯಮಂತ್ರಿಗಳು, 16 ಇತರ ಕ್ಯಾಬಿನೆಟ್ ಸಚಿವರು, 14 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 20 ರಾಜ್ಯ ಸಚಿವರು ಸೇರಿದಂತೆ ಯೋಗಿ ಆದಿತ್ಯನಾಥ ಮತ್ತು ಅವರ 52 ಸದಸ್ಯರ ತಂಡಕ್ಕೆ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದರು.
ಹಿಂದಿನ ಆದಿತ್ಯನಾಥ್ ಸರ್ಕಾರದ 21 ಸಚಿವರನ್ನು ಉಳಿಸಿಕೊಂಡಿದ್ದು, 22 ಸಚಿವರನ್ನು ಕೈಬಿಡಲಾಗಿದೆ. ನೂತನ ಸಂಪುಟದಲ್ಲಿ 31 ಮಂದಿ ಹೊಸ ಮುಖಗಳಿದ್ದು, ಐವರು ಮಹಿಳಾ ಸಚಿವರೂ ಇದ್ದಾರೆ.