Parliament: ಸಂಸತ್​ನಲ್ಲಿ ಶುಕ್ರವಾರವೂ ಅದಾನಿ ವಿಚಾರ ಸದ್ದು ಸಾಧ್ಯತೆ; ತುರ್ತು ಸಭೆ ಕರೆದ ಖರ್ಗೆ

|

Updated on: Feb 03, 2023 | 8:45 AM

Opposition Parties Demands Probe on Adani Controversy: ಅದಾನಿ ಕಂಪನಿಯ ವಿವಾದವನ್ನು ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಲು ಹೊರಟಿರುವ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಸಂಸತ್​ನಲ್ಲಿ ಇಂದೂ ಕೂಡ ಇದೇ ವಿಚಾರದ ಬಗ್ಗೆ ಕೂಗೆಬ್ಬಿಸುವ ನಿರೀಕ್ಷೆ ಇದೆ.

Parliament: ಸಂಸತ್​ನಲ್ಲಿ ಶುಕ್ರವಾರವೂ ಅದಾನಿ ವಿಚಾರ ಸದ್ದು ಸಾಧ್ಯತೆ; ತುರ್ತು ಸಭೆ ಕರೆದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ನವದೆಹಲಿ: ಅದಾನಿ ಕಂಪನಿಯ ವಿವಾದವನ್ನು ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಲು ಹೊರಟಿರುವ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಸಂಸತ್​ನಲ್ಲಿ ಇಂದೂ ಕೂಡ ಇದೇ ವಿಚಾರದ ಬಗ್ಗೆ ಕೂಗೆಬ್ಬಿಸುವ (Create Ruckus) ನಿರೀಕ್ಷೆ ಇದೆ. ನಿನ್ನೆ ಗುರುವಾರ ವಿಪಕ್ಷಗಳು ಅದಾನಿ ಪ್ರಕರಣದ ಬಗ್ಗೆ ಸಿಜೆಐ ಉಸ್ತುವಾರಿಯ ಸಮಿತಿ ಅಥವಾ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಎಸ್​ಬಿಐ ಮತ್ತು ಎಲ್​ಐಸಿ ಸಂಸ್ಥೆಗಳು ಅದಾನಿ ಗ್ರೂಪ್ ಕಂಪನಿಗಳಲ್ಲಿ (Adani Group Companies) ಹಣ ಹೂಡಿಕೆ ಮಾಡಿರುವ ಸಂಗತಿಯನ್ನು ಪ್ರಸ್ತಾಪಿಸಿ ವಿಪಕ್ಷಗಳು ಪ್ರತಿಭಟಿಸಿದ್ದವು. ಹೀಗಾಗಿ ನಿನ್ನೆ ಗುರುವಾರ ಎರಡೂ ಸದನಗಳ ಕಲಾಪವನ್ನು ಮುಂದೂಡಲಾಗಿತ್ತು. ಇಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಕಲಾಪದಲ್ಲಿ ವಿಪಕ್ಷಗಳು ತಮ್ಮ ಹೋರಾಟ ಮುಂದುವರಿಸುವ ಸಾಧ್ಯತೆ ಇದೆ.

ರಾಜ್ಯಸಭೆಯ ವಿಪಕ್ಷ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಇಂದು ಕಲಾಪ ಆರಂಭವಾಗುವ ಮುನ್ನ ಬೆಳಗ್ಗೆ 10 ಗಂಟೆಗೆ ಇತರ ವಿಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದಾರೆ. ಅವರ ಸಂಸದೀಯ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಇಂದಿನ ಕಲಾಪಗಳಲ್ಲಿ ಯಾವ ರೀತಿಯ ತಂತ್ರ ಅನುಸರಿಸಬಹುದು ಎಂಬ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: BBC Documentary: ಬಿಬಿಸಿ ಡಾಕ್ಯುಮೆಂಟರಿ ನಿಷೇಧ ಪ್ರಕರಣ: ಸುಪ್ರೀಂಕೋರ್ಟ್​ನಲ್ಲಿ ಇಂದು ವಿಚಾರಣೆ

ನಿನ್ನೆ ಆಗಿದ್ದೇನು?

ನಿನ್ನೆ ಕೂಡ ಅಧಿವೇಶನಕ್ಕೆ ಮುನ್ನ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ಸದಸ್ಯರ ಸಭೆ ಕರೆದು ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದರು. ಅದರಂತೆ ಗೌತಮ್ ಅದಾನಿ ವಿವಾದದ ವಿಚಾರವನ್ನು ವಿಪಕ್ಷಗಳು ಪ್ರಸ್ತಾಪಿಸಿದವು. ಸಕ್ಷಮ ಪ್ರಾಧಿಕಾರ ಅಥವಾ ಜೆಪಿಸಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದವು. ಕಾಂಗ್ರೆಸ್ ಸದಸ್ಯರು ಈ ವಿಚಾರದ ಚರ್ಚೆ ನಡೆಸಲು ಅವಕಾಶ ಕೊಡುವಂತೆ ಅಡ್ಜರ್ನ್ಮೆಂಟ್ ನೋಟೀಸ್ ಅನ್ನು ಸ್ಪೀಕರ್​ಗೆ ನೀಡಿದರು. ಆದರೆ, ಈ ನೋಟೀಸ್​ಗಳು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ತಿರಸ್ಕೃತವಾದವು. ಈ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ನಡೆಸಿದವು. ಪರಿಣಾಮವಾಗಿ ಸ್ಪೀಕರ್ ಓಂ ಬಿರ್ಲಾ ಅವರು ಸದನ ಕಲಾಪವನ್ನು ಸ್ಥಗಿತಗೊಳಿಸಬೇಕಾಯಿತು.

ಏನಿದು ಅದಾನಿ ವಿವಾದ?

ಭಾರತದ ಅತಿದೊಡ್ಡ ಉದ್ಯಮಿ ಎನಿಸಿರುವ ಗೌತಮ್ ಅದಾನಿ ಮಾಲಕತ್ವದ ಅದಾನಿ ಗ್ರೂಪ್ ಕಂಪನಿಗಳು ಕೃತಕವಾಗಿ ಷೇರುಮೌಲ್ಯದ ಏರಿಕೆ ಇಳಿಕೆ ಮಾಡಿ ಲಾಭ ಮಾಡುತ್ತಿದೆ. ಅದು ವಂಚನೆಯ ಹಾದಿ ಹಿಡಿದಿದೆ ಎಂದು ಹಿಂಡನಬರ್ಗ್ ರೀಸರ್ಚ್ ಕಂಪನಿ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಇದಾದ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರು ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ.

ಎಲ್​ಐಸಿ, ಎಸ್​ಬಿಐ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿವೆ. ಈಗ ಅದಾನಿಯ ಷೇರು ಸಂಪತ್ತು ಕರಗುತ್ತಿರುವುದು ಬಹಳ ಮಂದಿಗೆ ಆತಂಕ ತಂದಿದೆ. ಅದಾನಿ ಕಂಪನಿಗಳ ಷೇರು ಮೇಲೆ ಹೂಡಿಕೆ ಮಾಡಿದ್ದವರು ಕೈಸುಟ್ಟುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: JP Nadda Election Rally: ರಂಗೇರಿದ ತ್ರಿಪುರಾ ಚುನಾವಣಾ ಅಖಾಡ: ಫೆ.3 ರಂದು ಜೆಪಿ ನಡ್ಡಾ ರಾಜ್ಯಕ್ಕೆ ಭೇಟಿ

ಸರ್ಕಾರಕ್ಕೆ ಏನು ಸಂಬಂಧ?

ಗೌತಮ್ ಅದಾನಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾದ ಉದ್ಯಮಿಗಳಲ್ಲೊಬ್ಬರು ಎಂದು ಹೇಳಲಾಗುತ್ತದೆ. ಇತ್ತಿಚಿನ ಕೆಲ ವರ್ಷಗಳಲ್ಲಿ ಅದಾನಿ ಗ್ರೂಪ್ ಬಹಳ ವೇಗವಾಗಿ ಬೆಳೆದಿದೆ. ತನ್ನ ಉದ್ಯಮಗಳ ವ್ಯಾಪ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ದೇಶ ವಿದೇಶಗಳಲ್ಲಿ ಹಲವು ಮಹತ್ವದ ಯೋಜನೆಗಳು ಅದಾನಿ ಗ್ರೂಪ್​ಗೆ ಹೋಗಿವೆ. ವಿಮಾನ ನಿಲ್ದಾಣ, ಬಂದರು ಇತ್ಯಾದಿ ಪ್ರಮುಖ ಯೋಜನೆಗಳು ಅದಾನಿ ಸಿಕ್ಕಿವೆ. ಹತ್ತು ಹಲವು ಕ್ಷೇತ್ರಗಳಲ್ಲಿ ಅದಾನಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಅನುಭವ ಇಲ್ಲದ ಕ್ಷೇತ್ರಗಳಲ್ಲೂ ಅದಾನಿ ಗ್ರೂಪ್​ಗೆ ಯೋಜನೆಗಳನ್ನು ಕೊಟ್ಟಿರುವುದು ಬಹಳ ಮಂದಿಗೆ ಸಂಶಯ ಮೂಡುವಂತೆ ಮಾಡಿದೆ. ನರೇಂದ್ರ ಮೋದಿ ಅವರಿಗೆ ಆಪ್ತರೆಂಬ ಕಾರಣಕ್ಕೆ ಅದಾನಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬುದು ಆರೋಪ.

Published On - 8:45 am, Fri, 3 February 23