ಸದ್ದಾಂ ಹುಸೇನ್, ಗಡಾಫಿ ಕೂಡಾ ಚುನಾವಣೆ ಗೆಲ್ಲುತ್ತಿದ್ದರು: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Rahul Gandhi: ಚುನಾಯಿತ ಪ್ರಜಾಪ್ರಭುತ್ವ ಮತ್ತು ಸಾಂಸ್ಥಿಕ ಚೌಕಟ್ಟುಗಳನ್ನು ವಿಭಜಿಸಬಾರದು. ಚುನಾವಣೆ ಎಂದರೆ ಮತಗಟ್ಟೆ ಹೋಗಿ ಅಲ್ಲಿರುವ ಮತಯಂತ್ರದಲ್ಲಿ ಒಂದು ಬಟನ್ ಒತ್ತಿ ಬರುವುದು ಮಾತ್ರವಲ್ಲ. ಚುನಾವಣೆ ಎಂಬುದು ದೇಶದಲ್ಲಿರುವ ಸಂಸ್ಥೆಗಳು ಸರಿಯಾಗಿ ಕಾರ್ಯವೆಸಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸುವುದಾಗಿದೆ.

ಸದ್ದಾಂ ಹುಸೇನ್, ಗಡಾಫಿ ಕೂಡಾ ಚುನಾವಣೆ ಗೆಲ್ಲುತ್ತಿದ್ದರು: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2021 | 3:14 PM

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇರಾಕ್​ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಮುಅಮ್ಮರ್ ಗಡಾಫಿ ಕೂಡಾ ಚುನಾವಣೆ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ. ಮಂಗಳವಾರ ಅಮೆರಿಕದ ಬ್ರೌನ್ ಯುನಿವರ್ಸಿಟಿಯ ಪ್ರೊಫೆಸರ್ ಅಶುತೋಷ್ ವಾರ್ಷ್ಣೆ ಅವರೊಂದಿಗೆ ಆನ್​ಲೈನ್ ಸಂವಾದ ನಡೆಸಿದ ರಾಹುಲ್, 21ನೇ ಶತಮಾನದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವುದಾದರೆ ಚುನಾವಣಾ ಪ್ರಜಾಪ್ರಭುತ್ವವನ್ನು ನಾಶ ಮಾಡಬಹುದು ಎಂದಿದ್ದಾರೆ.

ಸದ್ದಾಮ್ ಹುಸೇನ್, ಗಡಾಫಿ ಕೂಡಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಮತದಾನದ ಮೂಲಕ ಅಲ್ಲ, ಆದರೆ ಅಲ್ಲಿ ಮತಗಳನ್ನು ರಕ್ಷಿಸಲು ಅಲ್ಲಿ ಯಾವುದೇ ಸಾಂಸ್ಥಿಕ ಚೌಕಟ್ಟು ಇರಲಿಲ್ಲ ಎಂದಿದ್ದಾರೆ. ಭಾರತದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ ಎಂದು ವಿದೇಶಿ ಸಂಸ್ಥೆಗಳು ಹೇಳಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ಇಲ್ಲಿನ ಪರಿಸ್ಥಿತಿ ನಮ್ಮ ಊಹೆಯನ್ನೂ ಮೀರಿದೆ. ನಾನು ಕಾಂಗ್ರೆಸ್ ಪಕ್ಷದ ವಿಚಾರಧಾರೆಯನ್ನು ಕಾಪಾಡುತ್ತಿದ್ದು, ಆರ್​ಎಸ್​ಎಸ್ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಕಾಂಗ್ರೆಸ್ ಪಕ್ಷದೊಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸುತ್ತಿದ್ದೇವೆ. ಹಲವಾರು ನಾಯಕರನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದಿದ್ದಾರೆ.

ಭಾರತದ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ ಎಂದು ಸ್ವೀಡನ್​ನ ವಿ-ಡೆಮ್ ಇನ್ಸಿಟ್ಯೂಟ್ ವರದಿ ಮಾಡಿತ್ತು. ಅದೇ ವೇಳೆ ಅಮೆರಿಕ ಸರ್ಕಾರದ ಎನ್​ಜಿಒ ಫ್ರೀಡಂ ಹೌಸ್, ಭಾರತದಲ್ಲಿ ಮುಕ್ತ ವಾತಾವರಣ ಎಂಬುದು ಭಾಗಶಃ ಮುಕ್ತ ವಾತಾವರಣ ಆಗಿದೆ ಎಂದು ವರದಿ ಮಾಡಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಈ ವಿದೇಶಿ ಸಂಸ್ಥೆಗಳಿಗೆ ಅವರದ್ದೇ ಆದ ನಿಲುವು ಇದೆ. ಮುಕ್ತವಾಗಿ ಹೇಳುವುದಾದರೆ ಅವರಿಂದ (ವಿದೇಶಿ ಸಂಸ್ಥೆ) ನಮಗೆ ಪ್ರಮಾಣಪತ್ರಬೇಡ. ಅವರು ಹೇಳುತ್ತಿರುವುದು ನಿಜ. ಇದಕ್ಕೆ ನಾನೂ ಒಂದು ಅಂಶ ಸೇರಿಸಲು ಇಚ್ಛಿಸುತ್ತಿದ್ದೇನೆ ಅದೇನೆಂದರೆ ಅವರು ಊಹಿಸಿದ್ದಕ್ಕಿಂತಲೂ ಇಲ್ಲಿನ ಪರಿಸ್ಥಿತಿ ಕೆಟ್ಟದಾಗಿದೆ ಎಂದಿದ್ದಾರೆ ರಾಹುಲ್.

ಚುನಾಯಿತ ಪ್ರಜಾಪ್ರಭುತ್ವ ಮತ್ತು ಸಾಂಸ್ಥಿಕ ಚೌಕಟ್ಟುಗಳನ್ನು ವಿಭಜಿಸಬಾರದು. ಚುನಾವಣೆ ಎಂದರೆ ಮತಗಟ್ಟೆ ಹೋಗಿ ಅಲ್ಲಿರುವ ಮತಯಂತ್ರದಲ್ಲಿ ಒಂದು ಬಟನ್ ಒತ್ತಿ ಬರುವುದು ಮಾತ್ರವಲ್ಲ. ಚುನಾವಣೆ ಎಂಬುದು ದೇಶದಲ್ಲಿರುವ ಸಂಸ್ಥೆಗಳು ಸರಿಯಾಗಿ ಕಾರ್ಯವೆಸಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸುವುದಾಗಿದೆ. ನ್ಯಾಯಾಂಗ ಸರಿಯಾಗಿದೆ ಎಂಬುದನ್ನು ಹೇಳುವುದಾಗಿದೆ. ಚುನಾವಣೆ ಎಂದರೆ ಸಂಸತ್ತಿನಲ್ಲಿ ನಡೆಯುವ ಚರ್ಚೆಯಾಗಿದೆ. ಇದನ್ನೆಲ್ಲ ಗಮನದಲ್ಲಿರಿಸಿ ನೀವು ಮತ ಚಲಾಯಿಸಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿ ಬೇರೆ ನಾಯಕರಿಗೆ ನೇತೃತ್ವ ನೀಡಲು ನೀವು ಹಿಂದೆ ಸರಿದು ದಾರಿ ಮಾಡಿಕೊಡುತ್ತೀರಾ ಎಂದು ಕೇಳಿದಾಗ ನಾನು ವಿಚಾರಧಾರೆಗಳ ವಿರುದ್ಧ ಹೋರಾಡುತ್ತಿದ್ದು, ಇದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. ನಾನು ನಿರ್ದಿಷ್ಟ ಯೋಚನೆಗಳಲ್ಲಿ ನಂಬಿಕೆಯಿರಿಸಿದ್ದು, ಅದನ್ನು ಸಮರ್ಥಿಸುತ್ತೇನೆ. ನನ್ನ ಹೆಸರು ಏನು ಅಥವಾ ನನ್ನ ತಾತ ಯಾರು ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಯಾರು ಒಪ್ಪಲಿ ಬಿಡಲಿ, ನಾನು ನನ್ನ ನಿರ್ದಿಷ್ಟ ಯೋಚನೆಗಳಲ್ಲಿ ಅಚಲನಾಗಿರುತ್ತೇನೆ.

1989ರಿಂದ ನನ್ನ ಕುಟುಂಬದಿಂದ ಯಾರೊಬ್ಬರೂ ಪ್ರಧಾನಿ ಆಗಲಿಲ್ಲ. ಆದರೆ ಅಧಿಕಾರದಲ್ಲಿರುವ ಕೆಲವರಿಗೆ ಈ ರೀತಿಯ ಆಸೆಗಳಿವೆ. ನನಗೆ ಕಾಂಗ್ರೆಸ್​ನಲ್ಲಿ ಜವಾಬ್ದಾರಿಗಳಿವೆ. ಕಾಂಗ್ರೆಸ್​ನ ನಿರ್ದಿಷ್ಟ ವಿಚಾರಧಾರೆಯನ್ನು ನಾನು ಸಮರ್ಥಿಸುತ್ತೇನೆ. ಕಾಂಗ್ರೆಸ್​ನಲ್ಲಿ ಹೀಗಿತ್ತು, ಇಂಥವರ ಮಗನಾಗಿರುವ ಕಾರಣ ನಾನು ಹೀಗೆ ಹೇಳಬಾರದು ಎಂಬುದು ಏನಾದರೂ ಇದೆಯೇ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.


ನಾನು ಆರ್​ಎಸ್​ಎಸ್ ವಿರುದ್ಧ ಹೋರಾಡುತ್ತಿಲ್ಲ ಹಾಗಾಗಿ ನೀವು ಕಾಂಗ್ರೆಸ್​ನಿಂದ ಹಿಂದೆ ಸರಿಯಿರಿ ಎಂದು ಹೇಳಿದರೆ ನಾನು ಅದಕ್ಕೆ ಸರಿ ಎನ್ನುತ್ತಿದ್ದೆ. ನಾನು ಅದನ್ನೇ ಮಾಡುತ್ತಿದ್ದೆ. ಆದರೆ ನಾನು ನಂಬುವ ವಿಚಾರಗಳಿಗೆ ಮಂಕು ಕವಿದಿದೆ ಎಂದು ಹೇಳಿದರೆ ನಾನು ಖಂಡಿತಾ ಇಲ್ಲ ಎಂದು ಹೇಳುತ್ತೇನೆ, ನಾನು ಹಿಂದೆ ಸರಿಯಲ್ಲ. ಕಾಂಗ್ರೆಸ್ ನಲ್ಲಿ ಬೇರೆಯವರಿಗೆ ನಾಯಕತ್ವ ಸಿಗಲಿದೆಯೇ ಎಂದು ರಾಹುಲ್ ಅವರಲ್ಲಿ ಕೇಳಿದಾಗ, ಖಂಡಿತಾ, 100 ಪ್ರತಿಶತ ಸಿಗಲಿದೆ. ನಾನು ಜನರನ್ನು ಮುಂದೆ ಕರೆದೊಯ್ಯುತ್ತೇನೆ ಎಂದಿದ್ದಾರೆ. ನಾನು ಆಂತರಿಕ ಪ್ರಜಾಪ್ರಭುತ್ವಕ್ಕೆ ಒತ್ತು ನೀಡುವಾಗ, ಅದನ್ನು ಮಾಡಬೇಡಿ ಎಂದು ಹಲವರು ಹೇಳುತ್ತಾರೆ. ಬಿಜೆಪಿ , ಬಿಎಸ್​ಪಿ ಅಥವಾ ಬೇರೆ ಯಾವುದೇ ಪಕ್ಷದಲ್ಲಿ ಈ ವ್ಯವಸ್ಥೆ ಇಲ್ಲ. ನಮಗೆ ದೊಡ್ಡ ಜವಾಬ್ದಾರಿ ಇದೆ, ಪಕ್ಷದೊಳಗೆ ಚುನಾವಣೆ ನಡೆಯಬೇಕು ಎಂದಿದ್ದಾರೆ.

ನಿಮ್ಮಲ್ಲಿ ಫೇಸ್​ಬುಕ್, ವಾಟ್ಸ್​ಆ್ಯಪ್ ಇದ್ದರೆ, ಸರ್ಕಾರಿ ಸಂಸ್ಥೆಗಳನ್ನು ನಿಯಂತ್ರಣದಲ್ಲಿರಿಸಲು ನಿಮ್ಮಲ್ಲಿ ಹಣ ಇದ್ದರೆ ನೀವು 21ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ನಾಮ ಮಾಡಬಹುದು. ಆರ್​ಎಸ್​‌ಎಸ್ ದೇಶದ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿದೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿದಂದಿನಿಂದ ಆರ್​ಎಸ್​‌ಎಸ್ ಈ ಕಾರ್ಯವನ್ನು ಮುಕ್ತವಾಗಿ ಮಾಡಿಕೊಂಡು ಬಂದಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲೇ ಇದ್ದರೆ ಜ್ಯೋತಿರಾಧಿತ್ಯ ಸಿಂಧಿಯಾ ಮುಖ್ಯಮಂತ್ರಿ ಆಗುತ್ತಿದ್ದರು, ಬಿಜೆಪಿ ಸೇರಿ ಹಿಂದಿನ ಬೆಂಚಲ್ಲಿ ಕೂರುವಂತಾಗಿದೆ: ರಾಹುಲ್ ಗಾಂಧಿ

ಇದನ್ನೂ ಓದಿ: ಬ್ರಿಟಿಷರನ್ನೇ ಓಡಿಸಿದ ನಮಗೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದು ಕಷ್ಟವೇ: ತಮಿಳುನಾಡಲ್ಲಿ ರಾಹುಲ್ ಗಾಂಧಿ ಪ್ರಶ್ನೆ