ಬ್ರಿಟಿಷರನ್ನೇ ಓಡಿಸಿದ ನಮಗೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದು ಕಷ್ಟವೇ: ತಮಿಳುನಾಡಲ್ಲಿ ರಾಹುಲ್ ಗಾಂಧಿ ಪ್ರಶ್ನೆ
Tamilnadu Assembly Election 2021: ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರಬೇಕಿದ್ದರೆ ಅಥವಾ ಹೊಸ ನೀತಿಗಳನ್ನು ಜಾರಿಗೊಳಿಸಬೇಕಿದ್ದಲ್ಲಿ, ವಿದ್ಯಾರ್ಥಿ ಸಮೂಹದ ಸಲಹೆ ಕೇಳಬೇಕಿತ್ತು ಎಂದು ರಾಹುಲ್ ಗಾಂಧಿ ಹೇಳಿದರು.
ಚೆನ್ನೈ: ತನ್ನ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರಲೆಂದೇ ಕೇಂದ್ರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ತಮಿಳುನಾಡಿನ ತಿರುನಲ್ವೇಲಿಯ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ವಿದ್ಯಾರ್ಥಿ ಮತ್ತು ಶಿಕ್ಷಕರ ಜತೆ ಸಂವಾದ ನಡೆಸಿದ ಅವರು, 74 ವರ್ಷಗಳ ಹಿಂದೆ ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ್ದೇವೆ. ಈಗ ನರೇಂದ್ರ ಮೋದಿ ಸರ್ಕಾರವನ್ನು ಇಳಿಸುವುದು ಅಷ್ಟೇನು ಕಷ್ಟವಲ್ಲ ಎಂದು ಬಿಜೆಪಿ ವಿರುದ್ಧ ಅವರು ಪ್ರಬಲ ವಾಕ್ಪ್ರಹಾರ ನಡೆಸಿದರು.
ಶಿಕ್ಷಣ ನೀತಿಗಳನ್ನು ಹಲವು ಹಂತಗಳ ಚರ್ಚೆಗಳ ನಂತರ ಜಾರಿಗೊಳಿಸಬೇಕು. ಆದರೆ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜತೆ ಚರ್ಚೆ ಮಾಡದೇ ಜಾರಿ ಮಾಡಿರುವುದು ದುರದೃಷ್ಟಕರ. ದೇಶದಲ್ಲಿರುವ ಎಲ್ಲರಿಗೂ ಶಿಕ್ಷಣ ಸಿಗಬೇಕು. ಆದರೆ ಪ್ರಸ್ತುತ ಆರ್ಥಿಕವಾಗಿ ಸದೃಢರಿಗೆ ಮಾತ್ರ ಶಿಕ್ಷಣ ದೊರೆಯುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರಿಗೂ ಶಿಕ್ಷಣ ಒದಗಿಸಲು ವಿದ್ಯಾರ್ಥಿವೇತನ ನೀಡುವಂತಹ ಹೊಸ ಯೋಜನೆಗಳನ್ನು ಕಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಹೊಸ ಶಿಕ್ಷಣ ನೀತಿಯು ಒಂದೇ ಶಿಕ್ಷಣ ಸಂಸ್ಥೆಗೆ ಅತಿ ಹೆಚ್ಚು ಅಧಿಕಾರವನ್ನು ಒದಗಿಸುತ್ತದೆ. ಈ ಮೂಲಕ ಒಂದೇ ಶಿಕ್ಷಣ ಸಂಸ್ಥೆಯಡಿ ಅಧಿಕಾರ ಕೇಂದ್ರೀಕೃತವಾಗುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರಬೇಕಿದ್ದರೆ ಅಥವಾ ಹೊಸ ನೀತಿಗಳನ್ನು ಜಾರಿಗೊಳಿಸಬೇಕಿದ್ದಲ್ಲಿ, ವಿದ್ಯಾರ್ಥಿ ಸಮೂಹದ ಸಲಹೆ ಕೇಳಬೇಕಿತ್ತು. ಆದರೆ, ಈಗ ಜಾರಿಗೊಳಿಸಿರುವ ಹೊಸಶಿಕ್ಷಣ ನೀತಿ ವಿದ್ಯಾರ್ಥಿಗಳ ಪಾಲಿಗೆ ಅಪರಿಚಿತವಾಗಿದೆ ಎಂದು ಟೀಕಿಸಿದರು. ಒಂದೇ ಸಂಸ್ಥೆಯಡಿ ಅಧಿಕಾರ ಕೇಂದ್ರೀಕೃತವಾಗಿರುವುದು ಶಿಕ್ಷಣ ಪದ್ಧತಿಗೆ ಧಕ್ಕೆ ತರಲಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
ತಮಿಳುನಾಡು ವಿಧಾನಸಭೆಯ ಬಲಾಬಲ ತಮಿಳುನಾಡಿನಲ್ಲಿ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 124 ಸ್ಥಾನ ಗೆದ್ದಿರುವ ಎಐಎಡಿಎಂಕೆ ಆಡಳಿತ ಪಕ್ಷವಾಗಿ ಸರ್ಕಾರ ರಚಿಸಿತ್ತು.ಡಿಎಂಕೆ 97 ಸ್ಥಾನಗಳಲ್ಲಿ ಗೆದ್ದು ಅಧಿಕೃತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಕಾಂಗ್ರೆಸ್ 7, ಐಯುಎಂಎಲ್ 1, ಎಎಂಎಂಕೆ 1 ಸ್ಥಾನಗಳಲ್ಲಿ ಗೆದ್ದಿದ್ದವು. ಉಳಿದ 4 ಸ್ಥಾನಗಳು ಖಾಲಿಯಾಗಿವೆ. ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಿಗೆ ಎಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದೆ.
ಇನ್ನೂ ಎಲ್ಲೆಲ್ಲಿ ನಡೆಯಲಿದೆ ಚುನಾವಣೆ? ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಈಗಾಗಲೇ ಪ್ರಕಟವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆಯು ಮೇ 2ರಂದು ನಡೆಯಲಿದೆ. ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ. ಅಸ್ಸಾಂನಲ್ಲಿ 27 ಮಾರ್ಚ್, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.
ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಚುನಾವಣೆ ನಡೆಯಲಿರುವ ಎಲ್ಲ ರಾಜ್ಯಗಳಿಗೆ ಕಳೆದ ಜನವರಿ-ಫೆಬ್ರುವರಿಯಲ್ಲಿಯೇ ಭೇಟಿ ನೀಡಿದ್ದರು. ಅಗತ್ಯ ಸಿದ್ಧತೆ, ಸಮಾಲೋಚನೆಗಳನ್ನು ಆರಂಭಿಸಿದ್ದೇವೆ.ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಾವು ಮುಂದುವರಿಯುತ್ತೇವೆ. ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದೊಂದಿಗಿನ ಸೌಹಾರ್ದ ಸಂಬಂಧಕ್ಕೆ ತಮಿಳುನಾಡು ಅತ್ಯುತ್ತಮ ಉದಾಹರಣೆ: ನರೇಂದ್ರ ಮೋದಿ
Published On - 4:23 pm, Sun, 28 February 21